`ವಿಜಯಾಬ್ಯಾಂಕ್ ರವಿ’ ಎಂದಷ್ಟೇ ನನ್ನ ನೆನಪಿನಾಳದಲ್ಲಿ ಮೂರು ದಶಕಗಳ ಹಿಂದೆಂದೋ ಸೇರಿಬಂದ ಉಚ್ಚಿಲದ ರವೀಂದ್ರನಾಥ್ ಸದಾ ಸಾರ್ವಜನಿಕ `ತಲೆನೋವು’ಗಳನ್ನು ಪ್ರೀತಿ ಉತ್ಸಾಹದಿಂದ ತೆಗೆದುಕೊಂಡು, ಪ್ರಾಮಾಣಿಕವಾಗಿ ನಿರ್ವಹಿಸುವಲ್ಲಿ ಎತ್ತಿದ ಕೈ. ಇವರು ಮಿತಭಾಷಿ, ಮೃದುಭಾಷಿ ಮತ್ತು ಮಾಡಿದ ಕೆಲಸಕ್ಕೆ ಪ್ರತಿಫಲ ಕೇಳುವುದಿರಲಿ, ವಂದನಾರ್ಪಣೆಗೂ ಸಿಕ್ಕದ ವಿನಯಿ. ನನ್ನ ಕಾಡುಬೆಟ್ಟದ ಹುಚ್ಚು ನೋಡಿ, ಸುಮಾರು ಇಪ್ಪತ್ಮೂರು ವರ್ಷಗಳ ಹಿಂದೊಮ್ಮೆ ರವಿ ನನ್ನನ್ನು ಕಡಲಯಾನಕ್ಕೆ ಆಹ್ವಾನಿಸಿದ್ದರು. ಪ್ರಾಕೃತಿಕ ಸಾಹಸಾವಕಾಶಗಳು ನನ್ನನುಕೂಲಕ್ಕೆ ಒದಗಿದಾಗ ನಾನೆಂದೂ ದೂರ ತಳ್ಳಿದವನಲ್ಲ. ಅಷ್ಟಲ್ಲದೆ ನನ್ನ ಸಂಪರ್ಕಕ್ಕೆ ಬಂದವರಿಗೆಲ್ಲ ಅದನ್ನು ಸ್ವಲ್ಪ ಉತ್ಪ್ರೇಕ್ಷಿಸಿಯೇ ಹೇಳಿ ತಂಡ ಕಟ್ಟಿ ಅನುಭವಿಸುವುದು, ಅಲ್ಲದಿದ್ದರೂ ಇತರರಿಗೆ ಪ್ರೇರಣೆ ಕೊಡುವುದು ನನಗೆ ಬಹು ಪ್ರಿಯವಾದ ಕೆಲಸ. “ಆಳ ಸಮುದ್ರದ ಮೀನುಗಾರಿಕೆಗೆ ಬನ್ನಿ” ಟಾಂ ಟಾಂ ಹೊಡೆದೆ. ಒಂದೆರಡಲ್ಲ ಇಪ್ಪತ್ತೆರಡು ಮಂದಿಯೇ ಒಟ್ಟಾಗಿದ್ದೆವು.

ರವಿಯ ಹತ್ತಿರದ ಸಂಬಂಧಿಕ, ಹಿರಿಯ ಮತ್ತು ಅನುಭವೀ ಮೀನುಗಾರ, ತಲಪಾಡಿ ಗಡಿಯಿಂದ ತುಸು ಆಚಿನ ಕಣ್ವತೀರ್ಥದ ಬಳಿಯಿರುವ ದಿನೇಶ್ ಉಚ್ಚಿಲ್ ಕೆಲವು ದೋಣಿಗಳ ಮಾಲಕ. ಅವರ ವೃತ್ತಿ ಒತ್ತಡಗಳ ನಡುವೆ ನಮ್ಮ ಈ ದೊಡ್ಡ ಸಂಖ್ಯೆಯನ್ನು ಬಹಳ ಉದಾರವಾಗಿಯೇ ಸ್ವಾಗತಿಸಿದ್ದರು ಮತ್ತು ಅವಕಾಶವನ್ನೂ ಮಾಡಿಕೊಟ್ಟರು. ಸ್ವಂತ ಮನೆಯ ವಾಸವನ್ನೂ ಮಾರಾಟಕ್ಕಿಡುವ (ಹೋಂ ಸ್ಟೇ!) ಈ ದಿನಗಳಲ್ಲಿ ಬಹಳ ಮುಖ್ಯವಾಗಿ ನೆನಪಿಡಬೇಕಾದ ಅಂಶ – ದಿನೇಶ್ ಉಚ್ಚಿಲ್ ಪೂರ್ಣ ಅವಕಾಶವನ್ನು ಉಚಿತವಾಗಿ ಕೊಟ್ಟಿದ್ದರು. (ನಮ್ಮ ಅನುಭವ ಕೇಳಿ, ಕುತೂಹಲ ತಡೆಯಲಾಗದ ಮತ್ತೊಂದಷ್ಟು ಜನ ಇನ್ನೊಂದೇ ದಿನ ಹೋದಾಗಲೂ ಹೀಗೇ ನಡೆಸಿಕೊಂಡರು!!)

ನಮ್ಮ ಆ ೧೭-೨-೧೯೯೧ರ ಅನುಭವ ಕಥನವನ್ನು ನಾನು ಬಿಸಿ ಆರದಂತೆಯೇ ಕೊಟ್ಟರೂ ಪ್ರಜಾವಾಣಿ ತನ್ನ ಸಾಪ್ತಾಹಿಕ ಪುರವಣಿಯಲ್ಲಿ ೧೨-೫-೧೯೯೧ರಂದು ಪ್ರಕಟಿಸಿತು. ಅಲ್ಲದೆ, ಆ ಲೇಖನಕ್ಕೆಂದು ದಿನೇಶರ ಕುರಿತು ನಾನು ಬರೆದು ಕೊಟ್ಟ ಸಂದರ್ಶನಾಧಾರಿತ ಕಿರು ಟಿಪ್ಪಣಿ (ಬಾಕ್ಸ್ ಐಟಂ), ಸುಂದರ ಚಿತ್ರ ಸಾಂಗತ್ಯವನ್ನು ಒದಗಿಸಿದ ಗೆಳೆಯರ ಹೆಸರುಗಳನ್ನು (ಫೋಟೋ ಕ್ರೆಡಿಟ್ಸ್) ಮತ್ತು ಎಷ್ಟೋ ಚಿತ್ರಗಳನ್ನು (ಮೂರನ್ನಷ್ಟೇ ಆಯ್ದುಕೊಂಡಿತ್ತು) ಪತ್ರಿಕೆ ಉಪೇಕ್ಷಿಸಿತ್ತು.

ಯಾವ ಚಿತ್ರ ಯಾರದ್ದೆಂದು ನನಗಿಂದು ನೆನಪಿಲ್ಲ. ತಂಡದಲ್ಲಿ ನನ್ನದ್ದೂ ಸೇರಿ ನಾಲ್ಕು ಕ್ಯಾಮರಾಗಳಿದ್ದವು. [ಅರವಿಂದರಾವ್ ಕೇದಗೆ, ಜಿ.ಪಿ. ಬಸವರಾಜು ಮತ್ತು ಪ್ರಸನ್ನ ಇತರ ಚಿತ್ರಗ್ರಾಹಿಗಳು] ನನ್ನ ಖಾಸಾ ಸಂಗ್ರಹದಲ್ಲಿ ಅಂದಿನ ಇನ್ನೂ ಕೆಲವು ಚಿತ್ರಗಳಿದ್ದವನ್ನು ಈಗ ಇಲ್ಲಿ ಬಳಸಿದ್ದೇನೆ. ಆ ಲೇಖನವನ್ನು ನನ್ನ ಇಂದಿನ ಅನುಭವ ಮತ್ತು ಬೆಳಕಿನಲ್ಲಿ ತುಸುವೇ ಪರಿಷ್ಕರಿಸಿ ಬಿತ್ತರಿಸುತ್ತಿದ್ದೇನೆ.

[ಆ ಲೇಖನ ಮತ್ತು ಚಿತ್ರಗಳ ಕುರಿತಂತೆ ೨೬-೫-೯೧ರ ಪ್ರತಿಕ್ರಿಯಾ ಅಂಕಣದಲ್ಲಿ ಪ್ರಕಟವಾದ ನಾಲ್ವರ ಅಭಿಪ್ರಾಯಗಳು ಹೀಗಿದ್ದವು:

೧. ಉತ್ತಮ ನಿರೂಪಣೆ – … ಚಿತ್ರ, ಲೇಖನ ಮೀನುಗಾರರ ಜೀವನ ನಿರ್ವಹಣೆ ರೀತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದೆ. ಸಮುದ್ರವನ್ನೇ ನಂಬಿ ಬದುಕುತ್ತಿರುವ ಮೀನುಗಾರರ ವರ್ಣಮಯ ಬದುಕು ಸಮುದ್ರ ಸವಾರಿಯ ವೇಳೆ ಅಕಸ್ಮಾತ್ ಸುಳಿಗಾಳಿ ಎದುರಾಗಿ ವಿಧಿಯ ಹೊಡೆತಕ್ಕೆ ಸಿಕ್ಕಿದಾಗ ಅಷ್ಟೇ ದುರಂತಮಯವಾಗುತ್ತದೆ… ಬಾಲಗೋಪಾಲ, ವಿಟ್ಲ.

೨. ಕಣ್ಮನ ಸೆಳೆದ ಚಿತ್ರಗಳು – ಲೇಖನ ರೋಮಾಂಚಕಾರಿಯಾಗಿತ್ತು. ಸಮುದ್ರವನ್ನೇ ನಂಬಿ ಜೀವನ ಸಾಗಿಸುವ, ಸಮುದ್ರದ ಅಲೆಗಳ ಏರಿಳಿತಗಳ ಹೊಯ್ದಾಟಗಳ ನಡುವೆ ಬದುಕುವ ಜನಗಳ ಬಗ್ಗೆ ಹಾಗೂ ಅವರ ರೀತಿ ನೀತಿಗಳನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ. ಪಡುಗಡಲ ಸೂರ್ಯೋದಯ, ಮರಳಿ ಮರಳಿಗೆ ಮುಂತಾದ ಚಿತ್ರಗಳು ಕಣ್ಮನ ಸೆಳೆದವು. – ಎಸ್. ನರಹರಿ, ಶಿವಮೊಗ್ಗ

೩. ನೈಜ ಚಿತ್ರಣ – ಆಕರ್ಷಕ ವರ್ಣ ಚಿತ್ರಗಳಿಂದ ಕೂಡಿದ ಲೇಖನವು ಕಡಲ ತೀರದ ಸೊಬಗು, ಮೀನುಗಾರರ ಸಾಹಸಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸಿತು. ಲೇಖಕರು ಮಂಗಳೂರು ಕಡಲ ತೀರದ ಸೊಬಗನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ.- ಲಿಂಗಪ್ಪ ಎನ್., ಉಪ್ಪಿನಂಗಡಿ.

೪. ಒಳ್ಳೆಯ ಅನುಭವ – ಓದುತ್ತಿದ್ದಂತೆ ನಮಗೂ ಸಮುದ್ರ ಸವಾರಿ ಮಾಡಿದ ಅನುಭವವಾಯಿತು. – ಮಂಜುನಾಥ ಬಿ.ಎಂ, ಬಿನ್ನಿಪೇಟೆ

ಸಮುದ್ರದ ಮೇಲೊಂದು ಸವಾರಿ

ಹಳೆಯ ಕೊಡೆಯಾದ ಆಕಾಶದಲ್ಲಿ ಬಿದ್ದ ತೂತುಗಳಂತೆ ಬೆಳಕಿನ ಬೊಟ್ಟುಗಳು – ಮಿನುಗು ಚುಕ್ಕೆಗಳು. ಸಮುದ್ರದ ಮರಳು ತೊಳೆಯುವ ಕಾಯಕ ಎಂದಿನಂತೇ ಅವಿರತ ನಡೆದಿತ್ತು. ಅಲ್ಲಿ ಇಲ್ಲಿ ಸೇರಿಸಿಟ್ಟ ತೆಂಗಿನ ಗರಿ, ತಟ್ಟಿಗಳ ಮರೆ, ಇತ್ತಣ ಗಾಳಿಮರ, ಅತ್ತಣ ತೆಂಗಿನ ಮುಡಿ ಸೂಸೂಗುಟ್ಟುತ್ತ ಕತ್ತಲುಗುಡಿಸಿ ಪಶ್ಚಿಮದ ಹೊಸ್ತಿಲು ದಾಟಿಸಲು ಯತ್ನಿಸುತ್ತಲೇ ಇದ್ದುವು. ನಮ್ಮ ಸೊಂಟದೆತ್ತರದ ಹಲವು ನಾಡದೋಣಿಗಳು ಕಪ್ಪಗೆ, ತಣ್ಣಗೆ ಮರಳಿನಲ್ಲಿ ಹುಗಿದು ಕುಳಿತಿದ್ದವು. ತುಂಡು ಚಡ್ಡಿಯೋ, ತೀರಾ ಮೇಲೆತ್ತಿ ಕಟ್ಟಿದ ಲುಂಗಿಯೋ ತೊಟ್ಟವರು ಅಲ್ಲಿ ಇಲ್ಲಿ ಕತ್ತಲಿನಲ್ಲಿ ಕೇವಲ ಬೀಡಿ ಚುಕ್ಕಿಗಳಾಗಿ ಪ್ರಕಟಗೊಂಡು, ಸರಸರನೆ ಹತ್ತಿರ ಬರುತ್ತಿದ್ದರು. ಕೆಲವರು ತೂಕದ ಎಣ್ಣೆ ಕ್ಯಾನು (ಸೀಮೆ ಎಣ್ಣೆ, ಡೀಸೆಲ್, ಪೆಟ್ರೊಲ್ ಇತ್ಯಾದಿ), ಕೆಲವರು ಔಟ್ಬೋರ್ಡ್ ಎಂಜಿನ್ [ಬಹುಶಃ ಯಮಹಾ ಕಂಪೆನಿಯದ್ದಿರಬೇಕು] ಹೊತ್ತೂ ಬಂದರು. ಅಪರೂಪಕ್ಕೆ ಅಲ್ಲಿ ಇಲ್ಲಿ ಬೆಳಗುತ್ತಿದ್ದ ಟಾರ್ಚು ಬೆಳಕಿನಲ್ಲಿ ನಮಗೋ ಎಲ್ಲ ಅಸ್ಪಷ್ಟ. ಆದರೆ ನುರಿತ ಕೈಗಳು ಎಂಜಿನ್, ಟ್ಯಾಂಕು ಮುಂತಾದವನ್ನು ಚುರುಕಾಗಿ ದೋಣಿಗಳಿಗೆ ಅಳವಡಿಸಿದವು. ಅನಂತರ ಎರಡೆರಡು ಬಲವಾದ ಬಡಿಗೆಗಳನ್ನು ದೋಣಿಗಳ ಹಿಂದು ಮುಂದಿನ ಮೂಗುದಾರದಂಥ ಕುಣಿಕೆಗಳಿಗೆ ತೂರಿಸಿದರು. ಮತ್ತೆ ಅತ್ತಿತ್ತ ಆರಾರು ಜನ ಎರಡೂ ಕೊನೆಯಲ್ಲಿ ಭುಜ ಕೊಟ್ಟು ಒಂದೊಂದೇ ದೋಣಿಯನ್ನು ನೀರಂಚಿಗೆ ಹೊತ್ತಿಟ್ಟರು. ಮೀನುಗಾರಿಕೆಯ ಕಿರು ಪರಿಚಯಕ್ಕೆಂದು ಬಂದ ನಮ್ಮನ್ನು, ಅಂದರೆ ರಾತ್ರಿ ಮೂರು ಗಂಟೆಗೇ ಬೈಕೇರಿ ಮಂಗಳೂರು (ಸುಂದರರಾಯರ ಜೋಡಿ ಬಂಟ್ವಾಳದಿಂದಲೂ ಬಂದಿತ್ತು) ಬಿಟ್ಟು ಇಪ್ಪತ್ತು ಕಿಮೀ ದೂರದ ಈ ತಲಪಾಡಿ ಕಡಲ ಕಿನಾರೆಯಲ್ಲಿ ಸೇರಿದ್ದ ಇಪ್ಪತ್ತೆರಡು ಸದಸ್ಯರನ್ನು ಆತಿಥೇಯ (ದೋಣಿಗಳ ಮಾಲಕ) ದಿನೇಶ್ ಉದ್ಯಾವರ್ ದೋಣಿಗೆ ಇಬ್ಬರು ಮೂವರಂತೆ ಹಂಚಿಬಿಟ್ಟರು.

ಅವರಿವರ ದೋಣಿ ಹೊಂದಾಣಿಕೆ ಓಡಾಟ ನಡೆದೇ ಇತ್ತು. ಹಾಗೆಯೇ ನಮ್ಮ ಅಕ್ಕಪಕ್ಕದಲ್ಲಿ ಒಂದೊಂದೇ ಎಂಜಿನ್ ಚಲಾವಣೆಗೊಂಡದ್ದು, ವೇಗೋತ್ಕರ್ಷಿಸಿದ್ದೂ ಕೇಳತೊಡಗಿತು. ಏರಿ ಬರುತ್ತಿದ್ದ ಒಂದು ಅಲೆ ನಮ್ಮ ದೋಣಿಯನ್ನು ತುಸು ಎತ್ತಿ, ದಂಡೆಗೆ ಮುತ್ತಿಕ್ಕಿ ಮರಳುತ್ತಿದ್ದಂತೆ ಮೊಣಕಾಲಾಳದ ನೀರಿನಲ್ಲಿದ್ದ ಬೆಸ್ತರು (ಲೇಖನದ ಅನುಕೂಲಕ್ಕಾಗಿ ಮೀನುಗಾರರನ್ನು ಬೆಸ್ತರೆಂದೂ ನಮ್ಮನ್ನು ನಾವಿಕರೆಂದೂ ಸಂಬೋಧಿಸಿದ್ದೇನೆ.) ದೋಣಿಯನ್ನು ಒಮ್ಮೆಗೇ ನೀರಿನತ್ತ ದೂಡಿದರು. ಅದು ಪೂರ್ತಿ ನೀರಿಗಿಳಿಯುತ್ತಿದ್ದಂತೆ ಒಬ್ಬೊಬ್ಬರೇ ಹಗುರವಾಗಿ ಹಾರಿ ಹತ್ತಿಕೊಂಡರು. ಒಂದಿಬ್ಬರು ತೊಳಸುಗೈ (ಹುಟ್ಟು) ಹಾಕುತ್ತಾ ದೋಣಿಯನ್ನು ಮತ್ತಷ್ಟು ಕಡಲತ್ತ ನೂಕಿದರು. ನಮಗಂತೂ ತುಳುಕುವ ಮಹಾಬೋಗುಣಿಯ ಅಂಚಿನಲ್ಲಿ ಹೆಣಗುವ ಇರುವೆಗಳ ಸ್ಥಿತಿಯೇ ನೆನಪಾಯ್ತು. ಮರಳನ್ನೇನೋ ಬಿಟ್ಟದ್ದಿರಬಹುದು; ಆಚೆ ಹೆಚ್ಚಿನ ಪ್ರಗತಿ ಏನೂ ಸಾಧಿಸದ ಭ್ರಮೆ. ಆದರೆ ಮಿನಿಟೊಂದು ಕಳೆಯುವುದರೊಳಗೆ ಎಂಜಿನ್ ಚಲಾಯಿಸುವಷ್ಟು ಆಳ ಸೇರಿದ್ದೆವು. ಮತ್ತೆ ತಡವಿಲ್ಲದೆ ಪೆಟ್ರೋಲ್ ಚಾಲನೆ, ಸೀಮೆಣ್ಣೆ ಓಟದ ಎಂಜಿನ್ ನಿರಂತರ ಗುಟುರು ಹೊಡೆಯತೊಡಗಿತು. ಸೈಲೆನ್ಸರ್ ಕಿತ್ತ ಮೋಟಾರ್ ಸೈಕಲ್ಲಿನದ್ದೇ ಗದ್ದಲ, ಶಕ್ತಿ ಮಾತ್ರ ಹದಿನೈದು ಕುದುರೆಯದ್ದು. ಗಂಟೆಗೆ ಸುಮಾರು ಇಪ್ಪತ್ತೈದು ರೂಪಾಯಿ ಖರ್ಚು (ನೆನಪಿರಲಿ ಇದು ೧೯೯೧ರ ಲೆಕ್ಕ). ನಮ್ಮ ದೋಣಿಯ ಆಕಾರ ಸಾಂಪ್ರದಾಯಿಕದ್ದೇ; ಸಪುರ, ಉದ್ದ. ಔಟ್ಬೋರ್ಡ್ ಎಂಜಿನ್ನನ್ನು ದೋಣಿಯ ಹಿಂದಿನ ಕೊನೆಯಲ್ಲಿ ಅಂಚಿನ ಹಲಗೆಗೆ ಹೊರಬದಿಯಲ್ಲಿದ್ದ ಬಲವಾದ ಬಿಜಾಗರಿಗೆ (ಹಿಂಜಸ್) ಬಿಗಿದಿದ್ದರು. ಇದರಿಂದ ಎಂಜಿನ್ ಚಾಲನೆಯಲ್ಲಿ ನೇರ ಹಿಡಿದರೆ ತಿರುಗಣಿ ರೆಕ್ಕೆ ನೂಕು ಶಕ್ತಿಯನ್ನು ಕೊಡುತ್ತದೆ. ಹಾಗೇ ಅದನ್ನು ಬಿಜಾಗರಿಯ ಆಧಾರದಲ್ಲಿ ಎಡ ಬಲಕ್ಕೆ ತಿರುಗಿಸಿದಲ್ಲಿ ಚುಕ್ಕಾಣಿಯ ಪರಿಣಾಮವನ್ನೂ ಬೀರುವುದರೊಡನೆ ದೋಣಿಯನ್ನು ಬೇಕಾದ ದಿಕ್ಕಿಗೆ ತಿರುಗಿಸುವುದೂ ಸಾಧ್ಯವಾಗುತ್ತಿತ್ತು. ಒಟ್ಟಾರೆ ಈ ವ್ಯವಸ್ಥೆಯ ನಾವೆ, ಭಿನ್ನ ಎಂಜಿನ್ನನ್ನು ರಚನೆಯಲ್ಲೇ ಹೊಂದಿಸಿಕೊಂಡ, ಅಂದರೆ ಮೋಟಾರು ದೋಣಿಗಿಂತ ಹಗುರ. ಇದಕ್ಕೆ ಚಲಿಸುತ್ತ ನೀರು ಸೀಳುವ ಮತ್ತು ಅಪ್ಪಳಿಸುವ ತೆರೆಗಳಿಗೆ ಜಾರುಮೈ ಒಡ್ಡುವ ತಾಕತ್ತೂ ಹೆಚ್ಚು. ಸಹಜವಾಗಿ ಮೋಟಾರ್, ತೊಳಸುಗೈ, ಹಾಯಿಯೇ ಮುಂತಾದ ದೋಣಿ ಪ್ರಕಾರಗಳಲ್ಲಿ ಇದರ ವೇಗವೂ ಹೆಚ್ಚು.

ಬಾನಂಗಳದಲ್ಲಿ ಚೆಲ್ಲಿದ್ದ ಚುಕ್ಕೆ ಸಾವಿರದಲ್ಲಿ ಶುಕ್ರ ಗ್ರಹ ನಮ್ಮ ದಿಕ್ಕು. ಭಾರೀ ಭಾಂಡದಲ್ಲಿ ತುಂಬಿದ್ದ ಮಂದ ಕರಿಯೆಣ್ಣೆಯನ್ನು ಇಕ್ಕಡಿಗೈಯ್ಯುವಂತೆ ದೋಣಿ ದೌಡಾಯಿಸಿತ್ತು. ಎಂಜಿನ್ನಿನ ತಾರಶ್ರುತಿಯ ಸದ್ದು, ಗಾಳಿ ತಿವಿಯುವಂತೆ ಎತ್ತಿದ ಮೂತಿ(ಕಿ), ಅದರ ಮೇಲೆ ಪಟಪಟಾಯಿಸುವ ಕಿರು ಧ್ವಜ, ನಸುಚಳಿ ಬೆರೆತ ಕತ್ತಲು (ಗಂಟೆ ಇನ್ನೂ ನಾಲ್ಕೂಕಾಲು) ಎಲ್ಲ ಸೇರಿ ನಮಗಂತು ಏನೋ ನಿಗೂಢ ಜೈತ್ರಯಾತ್ರೆ ಹೊರಟ ಸಂಭ್ರಮ.

ದೋಣಿ-ಧ್ವಜಗಳಿಗೆ ದೇಶ, ಮತ ಅಥವಾ ರಾಜಕೀಯ ವರ್ಣಗಳೇನೂ ಇಲ್ಲ. ದೂರದಿಂದ ನೋಡುವವರಿಗೆ ಅಲೆಗಳ ಮೇಲೆ `ಇಲ್ಲೊಂದು ದೋಣಿಯಿದೆ’ ಎಂದು ಸಾರುವುದಷ್ಟೇ ಇವುಗಳ ಉದ್ದೇಶ. ನಾವು ಹೊರಟದ್ದು ಕತ್ತಲಲ್ಲಾದ್ದರಿಂದ (ಅದು ಅಮವಾಸ್ಯೆ ಅಥವಾ ಹತ್ತಿರದ ದಿನವಿದ್ದಿರಬೇಕು) ಪ್ರತಿ ದೋಣಿಯಲ್ಲೂ ಒಬ್ಬರು ಆಗಿಂದಾಗ್ಗೆ ಸುತ್ತ ಟಾರ್ಚು ಬೆಳಗುತ್ತಿದ್ದರು. ಇದು ಕುರುಡ ಹಿಡಿದ ದೀಪದಂತೆ – ನಮ್ಮ ದಾರಿ ಬೆಳಗುವುದಕ್ಕಲ್ಲ, ಇತರರು ನಮಗೆ ಢಿಕ್ಕಿ ಹೊಡೆಯದಂತೆ ಮತ್ತು ಪರಸ್ಪರ ಅಂತರ ಕಾಪಾಡುವುದಕ್ಕೆ!

ಕಿನಾರೆ ಬಿಟ್ಟು ಒಳಸರಿದಂತೆಲ್ಲ ಸಮುದ್ರದ ತೆರೆಗಳು ಮಗುಚುತ್ತಿರಲಿಲ್ಲ ಅಥವಾ ಹೆಡೆತಲೆ ಎತ್ತಿ ಅಪ್ಪಳಿಸುತ್ತಲೂ ಇರಲಿಲ್ಲ. ದಪ್ಪ ಕಂಬಳಿಯ ಹಾಸಿನಡಿಯಲ್ಲೆನೋ ಘನವಾದದ್ದು ಸರಿದಾಡಿದಂತೆ, ದಿಗಂತವೇ ನಮ್ಮತ್ತ ಧಾವಿಸಿ ನುಂಗಬಂದಂತೆ ಭಾಸವಾಗುತ್ತಿತ್ತು. ಅವು ಬರುತ್ತಿರುವಾಗ ಅಧೋಮುಖಿಯಾಗುವ ದೋಣಿ ಆಶ್ಚರ್ಯಕರವಾಗಿ ಅದರ ತಲೆಗೇ ಏರಿ ಮತ್ತಿನ್ನೊಂದನ್ನು ಅಷ್ಟೇ ನಿರಾಯಾಸವಾಗಿ ಎದುರಿಸುವಂತೆ ಅಧೋಮುಖಿಯಾಗುತ್ತಿತ್ತು. ಅಲೆಯ ಚಲನೆಯೆಲ್ಲ ದಡದತ್ತ ಎಂಬುದನ್ನು ಬೆಸ್ತರು ಚೆನ್ನಾಗಿಯೇ ಗುರುತಿಸಬಲ್ಲವರಾಗಿದ್ದರು. ನಮಗಂತು ಎಲ್ಲ ದಿಕ್ಕಿನಲ್ಲೂ ತಗ್ಗು – ದಿಣ್ಣೆ, ಶಿಖರ – ಕಣಿವೆ. ಅಲೆಯಳತೆ ಹೆಚ್ಚಿದಾಗ ಒಮ್ಮೊಮ್ಮೆ ದೋಣಿಯ ಮೂತಿ ಗಾಳಿಯಲ್ಲಿ ತುಸು ಹೆಚ್ಚೇ ಎತ್ತಿಹೋಗುವುದು, ಮರುಕ್ಷಣದಲ್ಲಿ ನೀರಿಗಪ್ಪಳಿಸುವುದೂ ಇತ್ತು. ಆಗ ಎದುರು ಕುಳಿತವರಿಗೆ ಉಪ್ಪುನೀರ ಸಿಂಚನ, ಭಯಮಿಶ್ರಿತ ರೋಮಾಂಚನ. ದೋಣಿ ಸೀಳಿದ ನೀರ ಅಲೆ ಇಕ್ಕೆಲಗಳಲ್ಲಿ ಬೆಳ್ಳಿಧಾರೆಯಂತೆ ಹೊಳೆಯುತ್ತ, ಹುರಿಗಟ್ಟುತ್ತ, ಹಿಂದೆ ನಿರಂತರ ವಿಸ್ತರಿಸುತ್ತ ಮರೆಯಾಗುತ್ತಿತ್ತು. ಆಕಾಶದ ಬೆಳ್ಳಿಯನ್ನೇ ಗುರಿ ಮಾಡಿ ಹೊರಟವರಿಗೆ ಬೆಳ್ಳಿಯದೇ ಜಡೆ – ಎಷ್ಟು ಅಪ್ಯಾಯಮಾನ!

ನವಮಂಗಳೂರು ಬಂದರಿನ ಪ್ರವೇಶ ಬಯಸಿ ದೂರದೂರದಲ್ಲಿ ಕಾಯುತ್ತಿದ್ದ ಭಾರೀ ಹಡಗುಗಳ ಮಂದ ಬೆಳಕು, ಇತರ ಯಾಂತ್ರಿಕ ಮೀನುಗಾರಿಕಾ ನಾವೆಗಳ (ಪರ್ಸೀನ್, ಟ್ರಾಲರ್ ಇತ್ಯಾದಿ) ಮಿಣಿಮಿಣಿ ದೀಪಗಳೆಲ್ಲ ಮರೆಯಾಗುವಷ್ಟು ದೂರಾದೆವು. ಹಿಂದೆ ಬಿಟ್ಟು ಬಂದ ನೆಲವಿರಲಿ, ಅದರ ದೀಪಗಳು ಬೆಳಗಿದ ನಭವೂ ಕಾಣದಷ್ಟು ಕಡಲಿನೊಳಕ್ಕೆ ಸರಿದಿದ್ದೆವು. ಅಷ್ಟೂ ನಕ್ಷತ್ರಗಳ ಬೆರಗಿನ ದಿಟ್ಟಿ ನಮ್ಮ ಮೇಲೇ ಇದೆ ಎಂಬ ಭಾವನೆ!

ನಮ್ಮದು ಆಳ ಸಮುದ್ರದ ಮೀನುಗಾರಿಕೆಯ ಒಂದು ವಿಧಾನ ಮಾತ್ರ. ಇದರಲ್ಲಿ ಹಿಂದಿನ ದಿನಗಳ ಕೊಳ್ಳೆಯ ಅಂದಾಜಿನಲ್ಲಿ ಪ್ರತಿ ಸಂಚಾರಕ್ಕೂ ಪ್ರತಿ ದೋಣಿಗೂ ಬೇರೆ ಬೇರೆ ಆಳ, ದಿಕ್ಕು ಮೊದಲೇ ಅಂದಾಜಿಸುತ್ತಾರಂತೆ. ನಮ್ಮ ದೋಣಿಗೆ ಅಂದಿನ ಅಂದಾಜಿನಲ್ಲಿ ಸುಮಾರು ಮೂವತ್ತು ಕಿಮೀ ಪಯಣ ಹಾಗೂ ಹದಿನೈದು ಮಾರು ಆಳವೂ ನಿಗದಿಯಾಗಿದ್ದಿರಬೇಕು. ನಡುವೆ ಒಮ್ಮೆ ದೋಣಿಯ ಆವೇಶ (ಎಂಜಿನ್ ಸದ್ದು) ತುಸು ಕಡಿಮೆಯಾಯ್ತು. ಬೆಸ್ತರು ಅಲ್ಲಿ ಸಮುದ್ರದ ಆಳ ಪರೀಕ್ಷಿಸಲು ತೂಕ ಕಟ್ಟಿದ ಹಗ್ಗವೊಂದನ್ನು ನೀರಿಗಿಳಿಬಿಟ್ಟರು; ಹತ್ತೂವರೆ ಮಾರು ಅಥವಾ ಸುಮಾರು ಅರವತ್ಮೂರಡಿ. ಸಾಲದೆನ್ನಿಸಿ, ಮತ್ತೆ ಎಂಜಿನ್ನಿಗೆ ಆವೇಶ ಬರಿಸಿದ್ದರು. ಹೊಸದಾಗಿ ಸೀಳ್ದಾರಿ ಮಾಡುತ್ತಾ ಹೊಸ ಅಲೆಗಳ ತಲೆ ತಟ್ಟುತ್ತಾ ಮತ್ತಷ್ಟು ರಜತ-ರಜ್ಜು ಹೊಸೆಯುತ್ತಾ ಮುಂದುವರಿದೆವು. ಆಕಾಶ ಕಾಯಗಳು ನಿಸ್ತೇಜಗೊಳ್ಳಲು ತೊಡಗಿದ್ದವು. ಅತ್ತಿತ್ತ ಬೆಳಕೋಲು ಹಾಯಿಸಿ ಅನ್ಯ ದೋಣಿಗಳು ಆಸುಪಾಸಿನಲ್ಲಿಲ್ಲವೆಂದು ಖಾತ್ರಿ ಮಾಡಿಕೊಂಡು ಮತ್ತೆ ಎಂಜಿನ್ ಆವೇಶ ತಗ್ಗಿಸಿ ಆಳ ಪರಿಶೀಲನೆ ನಡೆಸಿದರು; ಹದಿನೇಳೂವರೆ ಮಾರು.

ಎಂಜಿನ್ ಪೂರ್ಣ ಬಂದ್ ಮಾಡಿ ಒಬ್ಬ ತೊಳಸುಗೈ ಬಳಸಿ ಹುಟ್ಟು ಹಾಕಲು ತೊಡಗಿದ. ಉಳಿದ ಬೆಸ್ತರು ಬಲೆ ಬಿಡುವ ಕಾಯಕಕ್ಕಿಳಿದರು. ಮೊದಲು ಪುಟ್ಟ ಧ್ವಜ ಊರಿದ ಬೆಂಡು ಅಥವಾ ಜನಪದದ ಭಾಗವಾದ ಬೋಯ್ ನೀರಿನಲ್ಲಿ ತೇಲಬಿಟ್ಟರು. ಅದಕ್ಕೆ ಸುಮಾರು ಇಪ್ಪತ್ತು ಮಾರುದ್ದದ ಹಗ್ಗ, ಮತ್ತದರ ತುದಿಗೆ ಬಲು ಉದ್ದದ ಬಲೆಯ ತುದಿಯನ್ನೂ ಕಟ್ಟಿ ನೀರಿಗೆ ಇಳಿಸಿದರು. ಇದು ಕಂತಬಲೆ – ಅರ್ಥಾತ್ ಒಂದೂವರೆ ಇಂಚು ವ್ಯಾಸದ ಕಣ್ಣುಗಳುಳ್ಳ, ಒಂದು ಮೀಟರ್ ಅಗಲದ ಬಲೆ. ಇದಕ್ಕೆ ಉದ್ದದಲ್ಲಿ ನಿಶ್ಚಿತ ಮಿತಿಯಿಲ್ಲ – ನೂರಾರು ಮೀಟರ್ ಉದ್ದಕ್ಕೂ ಸಂಯೋಜಿಸಬಹುದು. ನಮ್ಮ ದೋಣಿಯ ಬಲೆ ಐನೂರು ಅಡಿಗೂ ಮಿಕ್ಕಿ ಇತ್ತಂತೆ. ವಾಸ್ತವದಲ್ಲಿ ಇದು ಆಯಾ ದೋಣಿಯ ಬೆಸ್ತರ (ಅಮಿತ ಉದ್ದಗಳ) ವೈಯಕ್ತಿಕ ಬಲೆಗಳ ಜೋಡಣೆ. ಬಲೆಯ ಉದ್ದ ಹೆಚ್ಚಿದಷ್ಟು ಕೊಳ್ಳೆಯ ಮೊತ್ತ ಹೆಚ್ಚುತ್ತದಂತೆ. ದಿನದ ಕೊಳ್ಳೆಯಲ್ಲಿ ಮೊದಲು ಪೆಟ್ರೋಲ್ ಇತ್ಯಾದಿ ಖರ್ಚು ಕಳೆಯುತ್ತಾರಂತೆ. ಉಳಿದದ್ದರಲ್ಲಿ, ದೋಣಿ ಮತ್ತು ಎಂಜಿನ್ನಿಗೆ ಒಂದೊಂದರಂತೆ ಪಾಲು ಲೆಕ್ಕಿಸಿ ಎಲ್ಲ ಭಾಗಿಗಳಿಗೂ ಸಮಪಾಲಂತೆ. ಇಲ್ಲಿ ಆಳು ಅರಸ, ಸಂಬಳ ಭತ್ತೆ ಎಂಬೆಲ್ಲಾ ವ್ಯಾಜ್ಯಗಳೇ ಇಲ್ಲ.

ಬಲೆಯ ಉದ್ದಕ್ಕೂ ನಿಯತ ಅಂತರದಲ್ಲಿ ಒಂದಂಚಿನಲ್ಲಿ ತೂಕದ ಗುಂಡು ವಿರುದ್ಧ ಅಂಚಿನಲ್ಲಿ ತೇಲುವ ಬೆಂಡೂ ಕಟ್ಟಿರುತ್ತಾರೆ. ಸಹಜವಾಗಿ ನೆಲ ಮುಟ್ಟಿದ ಬಲೆ ಮೀಟರ್ ಎತ್ತರದ ಗೋಡೆಯಂತೆ ನಿಲ್ಲುತ್ತದೆ. ದೋಣಿಯಲ್ಲಿ ಅದುವರೆಗೆ ನಮ್ಮ ದೃಷ್ಟಿಯಲ್ಲಿ ಅಸಡ್ಡಾಳ ರಾಶಿಯಂತೆ ಬಿದ್ದಿದ್ದ ಬಲೆಯನ್ನು ದೋಣಿಯ ಎರಡು ಬದಿಯಲ್ಲಿ ಕುಳಿತ ಬೆಸ್ತರಿಬ್ಬರು ಪದರ ಪದರವಾಗಿ ಬಿಡಿಸುತ್ತಾ ನಿಧಾನಕ್ಕೆ ನೀರಿಗಿಳಿಸಿದರು. (ಮೊದಲೇ ಹೇಳಿದಂತೆ ಒಬ್ಬ ನಿಧಾನಕ್ಕೆ ಹುಟ್ಟು ಹಾಕುತ್ತಾ ದೋಣಿಯನ್ನು ವಿಸ್ತೃತ ವೃತ್ತಾಕಾರದಲ್ಲಿ ನಡೆಸುತ್ತಿರುತ್ತಾನೆ ಎಂಬುದನ್ನು ಮರೆಯಬೇಡಿ.) ದ್ರೌಪದಿಯ ಅಕ್ಷಯಾಂಬರದಂಥಾ ಬಲೆ ಪೂರ್ಣ ನೀರಿಗಿಳಿಸಿದ ಮೇಲೆ, ಈಚೆ ಕೊನೆಗೂ ಉದ್ದದ ಹಗ್ಗ ಕಟ್ಟುತ್ತಾರೆ. ಅದರ ಇನ್ನೊಂದು ತುದಿಯನ್ನು ದೋಣಿಯ ಸಂಪರ್ಕದಲ್ಲಿ ಉಳಿಸಿಕೊಂಡು ಒಮ್ಮೆಗೆ ವಿರಮಿಸುತ್ತಾರೆ. ಅಲ್ಲಿಗೆ ಹುಟ್ಟು ಹಾಕುವುದೂ ನಿಂತು, ಎಲ್ಲ ಆಕಾಶ ನಾಟಕದಲ್ಲಿ ಸೂರ್ಯೋತ್ಪತ್ತಿ ಕಾಯುತ್ತ ಕೂರುತ್ತಾರೆ.

ದೋಣಿ ಈಗ ಅಲೆ ತೂಗುವ ತೊಟ್ಟಿಲು. ಮೊದಲು ಎಂಜಿನ್ ಮತ್ತೆ ಹುಟ್ಟುಹಾಕುವಾಗಲೂ ಇದ್ದ ದೃಢತೆ ಕಳೆದುಹೋಗಿತ್ತು. ಬೆಸ್ತರು ಪಿಸುಮಾತಿಗರು ಅಥವಾ ಮೌನಿಗಳು. ಸ್ಪಷ್ಟ ಪರಿಣಾಮ ಕಾಣಿಸಿದ್ದು ನಾವಿಕರಾದ ನಮ್ಮಲ್ಲಿ. ಅದುವರೆಗೆ ಎಲ್ಲದರಲ್ಲೂ ಕುತೂಹಲ ತೋರಿಸುತ್ತಲಿದ್ದ ನಾವು ಒಮ್ಮೆಗೆ ನಿಸ್ತೇಜರಾಗುತ್ತಾ ಹೋದೆವು. “ಬೆಳಿಗ್ಗೆ ಮೂರು ಗಂಟೆಗೆದ್ದದ್ದಕ್ಕಿರಬೇಕು ಇಷ್ಟು ಆಕಳಿಕೆ”, “ಅಷ್ಟುದ್ದಕ್ಕೆ ಪಯಣಿಸಿದ್ದಕ್ಕಿರಬೇಕು ದೇಹಾಲಸ್ಯ” ಎಂದೆಲ್ಲ ತರ್ಕಿಸುತ್ತಿದ್ದಂತೆ ಒಮ್ಮೆಲೇ ಒಬ್ಬೊಬ್ಬರಿಗೇ ವಾಂತಿ ಬರತೊಡಗಿತು. ಗಾಬರಿಯೇನಿಲ್ಲ, ಲಕ್ಷಣಗಳೆಲ್ಲ ಸಮುದ್ರ ಪಿತ್ತದ್ದೇ (sea-sickness) ಎಂದರಿವಾಗುವಾಗ ಹೆಚ್ಚು ಕಡಿಮೆ ನಮ್ಮವರೆಲ್ಲರ ಹೊಟ್ಟೆಯೂ ಖಾಲಿಯಾಗಿತ್ತು. ಇದರಲ್ಲಿ ಅದುವರೆಗಿನ ನಮ್ಮ ಸಾಮಾಜಿಕ ಹಿರಿಕಿರಿತನಗಳೆಲ್ಲ ಕಲಸಿಹೋಗಿದ್ದುವು ಎನ್ನುವುದಕ್ಕೆ ಸಾಕ್ಷಿಯಾಗಿ ಹಿರಿಯ, ಅನುಭವಿ ಎಂದಿತ್ಯಾದಿ ಬಿರುದಾಂಕಿತನಾದ ನಾನು ನಮ್ಮ ದೋಣಿಯಲ್ಲಿ ವಾಂತಿಯಲ್ಲಿ ಮೊದಲಿಗ! (ದೇವಕಿ ವಾಂತಿ ಮಾಡದೆ ಕೊನೆಯವರೆಗೂ ಹಸನ್ಮುಖಿಯಾಗೇ ಉಳಿದಳು – ಎಂಥ ಅನ್ಯಾಯ L ) ಕುಳಿತಲ್ಲೇ ಪಕ್ಕಕ್ಕೆ ವಾಲಿ ನೀರಿಗೇ ಕಾರುವುದು ಮತ್ತಲ್ಲೇ ನೀರು ಮೊಗೆದು ಬಾಯಿ ಮುಖ ತೊಳೆಯುವುದೂ ಒಂದು ಲೆಕ್ಕದಲ್ಲಿ ತಮಾಷೆಯೂ ಆಗಿಹೋಯ್ತು. ಬೇಗ ಎದ್ದು ಬಂದುದರಿಂದ ನೀರು ಚಾ ಅಲ್ಲದೇ ಹೆಚ್ಚಿನ `ಘನ ದಾಸ್ತಾನು’ ಯಾರಲ್ಲೂ ಇರಲಿಲ್ಲ. ಹಾಗೆಂದು ಹೆಚ್ಚಿನವರು ಒಮ್ಮೆ ಇದ್ದದ್ದನ್ನು ಕಳೆದುಕೊಂಡು ಹಗುರಾದರು. ಒಟ್ಟಾರೆ ನಾವಿಕರಲ್ಲಿ ಮೂರು ನಾಲ್ಕು ಮಂದಿ ಮಾತ್ರ ಹೊಟ್ಟೆಯಲ್ಲೇನೂ ಉಳಿಯದಿದ್ದರೂ ಕೊನೆಯವರೆಗೂ ಅಸ್ವಾಸ್ಥ್ಯದ ಲಕ್ಷಣಗಳಿಂದ ಮುಕ್ತಿ ಪಡೆಯದೆ ಬಹುಪಾಡು ಪಟ್ಟದ್ದೂ ಇತ್ತು.

ಆಗ್ನೇಯದಿಂದ (ಪೂರ್ವ-ದಕ್ಷಿಣ) ಮಬ್ಬು ಹರಿಯುತ್ತಿದ್ದಂತೆ ಕಡಲ ಕಾವಲಿನ ನೌಕೆ ಹಾಗೂ ಅದರದೇ ಭಾಗವಾದ ಹೆಲಿಕಾಪ್ಟರು ಅವುಗಳ ಪಾಡಿಗೆ ಕವಾಯತು ನಡೆಸುತ್ತ ಸಾಗಿದುವು. ಹೀಗೇ ಕೆಲವು ಬಾರಿ ಬೆಸ್ತರ ದಾರಿಯಲ್ಲಿ ದೂರಗಾಮೀ ಮಹಾನೌಕೆಗಳೂ ಬರುವುದಿದೆಯಂತೆ. ಅಂಥ ಸಮಯಗಳಲ್ಲಿ ಬೆಸ್ತರು ದೋಣಿಯಲ್ಲಿ ಉಳಿಸಿಕೊಂಡ ಹಗ್ಗದ ತುದಿಗೂ ಒಂದು ನಿಶಾನಿ-ಬೆಂಡು, ಧ್ವಜ ಕಟ್ಟಿ ನೀರಿಗೆ ಹಾಕಿ, ಮಹಾನೌಕೆಯ ದಾರಿ ಬಿಟ್ಟೋಡುತ್ತಾರಂತೆ. ಜಾತ್ರೆ ಕಳೆದ ಮೇಲೆ ಚಿಕ್ಕಾಸು ಹುಡುಕುವವರಂತೆ ಹಡಗು ಹೋದ ಮೇಲೆ ಮರಳಿ, ನಿಶಾನಿಯಾಧಾರದಲ್ಲಿ ಬಲೆ ಹುಡುಕಿ ಸಂಗ್ರಹಿಸಿಕೊಳ್ಳುತ್ತಾರಂತೆ.

ಪೂರ್ವದಿಂದ ಧುತ್ತೆಂದು ಸೂರ್ಯ ಉದಯಿಸಿದ! ಕರ ಕಿರಣಗಳಿಂದ ದಿಗ್ಭಿತ್ತಿಗಳ ಮೇಲೆ ಬಣ್ಣದಾಟ ನಡೆಸುವ ಉದಯರವಿ ಇಲ್ಲಿಲ್ಲ; ಒಮ್ಮೆಗೆ “ಮುತ್ತಿನ ನೀರಿನ ಎರಕಾವಾ ಹೊಯ್ದ”. “ಗಿಡಗಂಟಿಗಳ ಕೊರಳೊಳಗಿಂದ…” ಮುಂತಾದ ವೈಭವಗಳಿಗಂತೂ ಆಸ್ಪದವೇ ಇಲ್ಲ – ಇಲ್ಲಿ ಎರಡೇ ಆಯಾಮ – ಮೇಲೆ ಬಾನು, ಕೆಳಗೆ ನೀರು. “ಕತ್ತಲ ತೊಳೆದು ಜಗವೆಲ್ಲಾ ತೊಯ್ಯು”ವ ಧಾವಂತ ಇಲ್ಲ. ಮಸುಕು ದಿಗಂತದಲ್ಲಿ ಬಂದವನು ಚಂದ್ರನೋ ಎಂದು ಸಂಶಯಿಸುವಷ್ಟು ಪೇಲವವಾಗಿ ರವಿ ಮೂಡಿದ. ಆದರೂ ಅಂದು ನಮಗದೇ ವಿಶೇಷ. ಪಶ್ಚಿಮ ಸಮುದ್ರದಲ್ಲಿ (ಅರಬೀ ಸಮುದ್ರ) ಅದಕ್ಕೂ ಮೊದಲು ನಾವು ಸೂರ್ಯೋದಯ ಕಂಡದ್ದಿಲ್ಲ! ಆಕಾಶಪಾಠ, ಭೂರಚನೆಯ ಚಿತ್ರ ಮನಸ್ಸಿನಲ್ಲಿ ಎಷ್ಟೇ ಸ್ಪಷ್ಟವಿದ್ದರೂ ಪಡುಗಡಲಲ್ಲಿ “ನೇಸರಾ ನೋಡು” ನಾವು ಹಾಡಿದ್ದೇ ಇಲ್ಲ; ನೀವು?!

ಮೀನುಗಾರಿಕಾ ಬಲೆಗಳಲ್ಲಿ ದಾರಗಳ ತೆಳು – ತೋರದಿಂದ, ಕಣ್ಣುಗಳ ಗಾತ್ರದಿಂದ ಹಲವು ವಿಧಗಳನ್ನು ಗುರುತಿಸುತ್ತಾರೆ. ಯಾಂತ್ರಿಕ ಎರಕದಲ್ಲಿ ಸುಮಾರು ಒಂದೂವರೆ ಇಂಚು ವ್ಯಾಸದ ಕಣ್ಣುಗಳುಳ್ಳ ತೆಳುದಾರದ ಪ್ಲ್ಯಾಸ್ಟಿಕ್ ಮೂಲದ ಬಲೆ ನಮ್ಮದು. ದಿನದ ಮೊದಲ ಸೂರ್ಯರಶ್ಮಿ ನೀರಿನಾಳಕ್ಕೆ ಮುಟ್ಟಿದಾಗ ಮತ್ಸ್ಯಲೋಕದಲ್ಲಿ ತೀವ್ರ ಸಂಚಲನವುಂಟಾಗುತ್ತದಂತೆ. ಆಗ ಈಜುರೆಕ್ಕೆ ಬಡಿದು, ದೇಹ ಸಪುರ ಮಾಡಿ, ಚಿಮ್ಮುವ ಜಲಚರಗಳು (ಹೆಚ್ಚಾಗಿ ವಿವಿಧ ಜಾತಿಯ ಮೀನುಗಳು) ಬಲೆಯ ಕಣ್ಣುಗಳಲ್ಲಿ ನುಗ್ಗುತ್ತವೆ. ರೆಕ್ಕೆ ಬಿಚ್ಚಿದಾಗ, ಬಾಲ ತಿರುಚಿದಾಗ, ಬಲೆಯ ತುಯ್ದಾಟದಲ್ಲೂ ಅವು ಅದರ ಕಣ್ಣುಗಳಲ್ಲಿ ಸಿಕ್ಕಿಬೀಳುತ್ತವೆ. ಇವುಗಳಲ್ಲಿ ಬಹುಸಂಖ್ಯಾತವಾಗಿ ಮೀನುಗಳೇ ಆದರೂ ಬೊಂಡಾಸ್ (ಸ್ಕ್ವಿಡ್), ಕಡಲಮರಿ (ಸಮುದ್ರದ ಭಾರೀ ವಿಷಯುಕ್ತ ಹಾವು) ಏಡಿ ಮುಂತಾದವೂ ಇರುತ್ತವೆ. ಬಲೆಗೆ ಸಿಕ್ಕ ಮೀನುಗಳನ್ನು ತಿನ್ನಲು ಬಂದು ತಾವು ಸಿಕ್ಕಿಕೊಳ್ಳುವ ಜಲಚರಗಳೂ ಇಲ್ಲದಿಲ್ಲ. ಹಾಗಾಗಿ ಬಲೆ ಎಳೆದುಕೊಳ್ಳುವುದು ತಡವಾದಷ್ಟೂ ಕೊಳ್ಳೆ ಸೂರೆಹೋಗುವ ಅಥವಾ ದೊಡ್ಡ ಮೀನುಗಳ ಆಕ್ರಮಣವಾದರೆ ಬಲೆಯೇ ಹರಿದು ಹೋಗುವ ಅಪಾಯವಿರುವುದರಿಂದ ಬಲೆ ಎಳೆಯುವಲ್ಲಿ ಬೆಸ್ತರು ಐದು ಮಿನಿಟು ಕಾದರೆ ಹೆಚ್ಚು.

ಬಲೆ ಎಳೆಯುವಾಗ ಹುಟ್ಟು ಹಾಕುವ ಅಗತ್ಯವಿಲ್ಲ. ಬಲೆ ಬಂದರೆ ಸರಿ, ಇಲ್ಲವಾದರೂ ಎಳೆಯುವ ಕ್ರಿಯೆಯಲ್ಲಿ ದೋಣಿಯೇ ಆ ದಿಕ್ಕಿಗೆ ಸರಿಯುತ್ತಿರುತ್ತದೆ. ಬಲೆ ಎಳೆಯಲು ಮಾತ್ರ ಇಬ್ಬರು ನಿಲ್ಲುವುದು ಅವಶ್ಯ. ಅವರು ದೋಣಿಯ ನಡುವೆ ಒಂದಂಚಿನಲ್ಲಿ ಕುಳಿತು ಬಾಗಿ, ಬಲೆಯನ್ನು ಎತ್ತೆತ್ತಿ ಎಳೆದು, ಪದರ ಪದರವಾಗಿ ದೋಣಿ ತುಂಬುತ್ತಾರೆ. ಅದರೊಡನೆ ಬಲೆಯಲ್ಲಿ ಸಿಕ್ಕ ಮೀನುಗಳನ್ನು ಬಿಡಿಸಿ, ಇನ್ನೊಂದಂಚಿನಲ್ಲಿ ಬಾಯಿ ತೆರೆದಂತೆ ಕಟ್ಟಿದ ಚೀಲಕ್ಕೆ ತುಂಬುತ್ತಲೂ ಇರುತ್ತಾರೆ. ಬಂಗುಡೆ ಇವರ ಮುಖ್ಯ ವಾಣಿಜ್ಯ ಲಕ್ಷ್ಯ. ಕೆಮ್ಮೀನು, ಚಾಟೆ, ಮದಿಮ್ಮಾಳ್, ಕಲ್ಲೂರ್, ತೇಡೆ, ಗರಗಸ ಇತ್ಯಾದಿ ಮೀನುಗಳೂ ಇರುತ್ತವೆ. ಬೊಂಡಾಸ್, ಏಡಿ ಮತ್ತು ಬಲೆಗೆ ಸಿಕ್ಕ ಮೇಲೆ ಅನ್ಯರ ದಾಳಿಯಲ್ಲಿ ಅರೆಬರೆ ತಿಂದುಹೋದ ಮೀನುಗಳೆಲ್ಲ ಮಾರಾಟಕ್ಕಲ್ಲದಿದ್ದರೂ ಸ್ವಂತ ಉಪಯೋಗಕ್ಕೆಂದು ಇನ್ನೊಂದೇ ಚೀಲದಲ್ಲಿ ಸಂಗ್ರಹಿಸುತ್ತಾರೆ. ಆದರೆ ಬಲೆಗೆ ಸಿಕ್ಕ ಕಡಲಮರಿಯ ಸ್ಥಿತಿ ಮಾತ್ರ ಶೋಚನೀಯ. ಸಾಮಾನ್ಯವಾಗಿ ಕಡಲ ಹಾವುಗಳೆಲ್ಲ ಭಾರೀ ವಿಷಕಾರಿಗಳಂತೆ. ಆದರೆ ಅಷ್ಟೇ ಸಾಮಾನ್ಯವಾಗಿ ಅವು ಕಚ್ಚುವುದೂ ಇಲ್ಲ. ಆದರೆ ಬೆಸ್ತರ ಮನೋಸ್ಥಿತಿ ಭೂಮಿಯ ಮೇಲಿನ ಉರಗಗಳ ಕುರಿತ ಮೌಢ್ಯದ್ದೇ ವಿಸ್ತರಣೆಯಾಗಿದೆ. ಅದರ ಬಾಲ ಹಿಡಿದು, ಬಲೆಯಿಂದೆಳೆದು ಬಿಡಿಸಿ, ತಲೆಯನ್ನು ದೋಣಿಗೆ ಬಡಿದು ನೀರಿಗೆಸೆಯುತ್ತಾರೆ. ಕಡಲಮರಿಯ ವಿಷಕ್ಕೆ ಹೆದರಿ ಯಾರೂ ಮಸಾಲೆ ಅರೆಯುವುದಿಲ್ಲ. ಹಾಗೆಂದು ಸಿಕ್ಕವನ್ನು ಜೀವಂತ ಉಳಿಸುವುದೂ ಇಲ್ಲ. ಜೀವಸರಪಣಿಯಲ್ಲಿನ ಈ ಕಡಲಮರಿಯೆಂಬ ಗೊಣಸಿನ ಕುರಿತ ಅವಜ್ಞೆ ನೀಗುವ ಸಂಶೋಧನೆಗಳು ಮತ್ತೂ ಮುಖ್ಯವಾಗಿ ಸಂರಕ್ಷಣೆಯ ಪಾಠಗಳು ತುರ್ತಾಗಿ ಆಗಬೇಕು.

ಸುಮಾರು ಅರ್ಧ ಗಂಟೆಯಲ್ಲಿ, ಬಹಳ ಚುರುಕಾಗಿಯೇ ನಮ್ಮ ಬಲೆ ಪೂರ್ಣ ಎಳೆದು ಮುಗಿಯುವಾಗ ಸುಮಾರು ಮುನ್ನೂರು ಮೀನು ಸಿಕ್ಕಿತ್ತು. ಆದರೆ ಹೊರಟಲ್ಲಿಂದ ತೊಡಗಿದ ಅವಸರದ ನಡೆ ಮಾತ್ರ ಮುಗಿದಂತಿರಲಿಲ್ಲ. ಕಾರಣ, ಮೊದಲು ದಂಡೆ ಸೇರಿದ ಮೀನಿಗೆ ದಿನದ ಧಾರಣೆ ಹೆಚ್ಚಂತೆ. ಎಂಜಿನ್ ಚಲಾಯಿಸಿ, ಮೂತಿ ದಂಡೆಯತ್ತ ತಿರುಗಿದ್ದೇ ದೋಣಿ ಚಿಮ್ಮಿತು. (ನಾವು ಪೂರ್ಣ ದಿಕ್ಕೇಡಿಗಳಾಗಿದ್ದೆವು. ಬೆಸ್ತರು ಲೆಕ್ಕಕ್ಕೆ, ಸೂರ್ಯನನ್ನು ನೋಡಿ ಒಟ್ಟಾರೆ ಪೂರ್ವ ಎನ್ನುತ್ತಿರಲಿಲ್ಲ. ಮಳೆಗಾಲ ಕಳೆದ ಹೊಸತರಲ್ಲಿ, ಅಂದರೆ, ವಾತಾವರಣದಲ್ಲಿ ದೂಳು, ಹೊಗೆ, ಮಂಜು ಇತ್ಯಾದಿ ಇಲ್ಲದೆ ಶುಭ್ರವಾಗಿದ್ದ ಕಾಲಗಳಲ್ಲಿ ನಾವಿದ್ದ ದೂರದಿಂದಲೂ ಪಶ್ಚಿಮಘಟ್ಟದ ಶಿಖರ ಸಾಲು, ಮುಂದುವರಿದಂತೆ ತೆಂಗಿನ ಮುಡಿಗಳೆಲ್ಲ ಅವರ ಕಣ್ಣಿಗೆ ಕಾಣುತ್ತವಂತೆ. ಆದರೆ ನೆಲ ಕಾಣದ ಸ್ಥಿತಿಯಲ್ಲಿ, ಸೂರ್ಯನೂ ದಟ್ಟ ಮಂಜು ಅಥವಾ ಮೋಡದ ಮರೆಯಾದ ಕಾಲದಲ್ಲೂ ಬೆಸ್ತರು ಬರಿಯ ತೆರೆಗಳ ಚಲನೆಯಲ್ಲೇ ಕೈಮರ ಕಾಣುತ್ತಾರೆ.

ಅಲ್ಲೊಂದು ಇಲ್ಲೊಂದು ಕಡಲ ಕಾಗೆ ಹಾರಿ ಸಾಗಿತ್ತು. ಕೆಲವು ನೀರಿನ ಮೇಲೆ ವಿರಮಿಸಿ ದೋಣಿಯಾಟ ನಡೆಸಿತ್ತು! ಕಡಲ ಕಡಾಯದೊಳಗಿನ ಕುಡಿದು ಮುಗಿಯದ ಉಪ್ಪಿನ ಪಾನಕ ಕಲಕುವ ಕ್ರಿಯೆ ಮಾತ್ರ ಅವಿರತ ನಡೆದೇ ಇತ್ತು. ಮುಂದುವರಿದಂತೆ ಅಕ್ಕಪಕ್ಕದಲ್ಲಿ ಧಾವಿಸುವ ಇತರ ದೋಣಿ ನಿಶಾನಿಗಳು, ದಿಗಂತದಲ್ಲಿ ಕತ್ತುದ್ದ ಮಾಡಿದ ತೆಂಗಿನ ಮರಗಳೂ ಸೇರಿಕೊಳ್ಳುತ್ತಾ ಬಂದವು. ಕೊನೆಗೆ ನಡೆಮಡಿ ಹಾಸಿದಷ್ಟು ಶುಭ್ರ ಪುಳಿನ ಕಿನಾರೆಯೇ ಕಂಗೊಳಿಸಿತು. ಸುಮಾರು ಐವತ್ತಡಿ ದೂರದಲ್ಲೇ ಎಂಜಿನ್ ಆರಿಸಿದರು. ಆಳಸಮುದ್ರದಿಂದ ಮೀನು ತಂದಂತೇ ಕೆಲವು ಕೊಳೆಯನ್ನೂ ಹೊತ್ತ ಬಲೆಯನ್ನು ಇಲ್ಲೊಮ್ಮೆ ಪೂರ್ಣ ನೀರಿಗೆ ನೂಕಿ, ಬಿರುಸಾಗಿ ಅಲುಬಿ ಶುಚಿಗೊಳಿಸತೊಡಗಿದರು. (ಹಿಂದಿನ ಕಾಲದಲ್ಲಿ ನಾರಿನ ಬಲೆಗಳಿದ್ದಾಗ ಇಷ್ಟೇ ಸಾಕಾಗುತ್ತಿರಲಿಲ್ಲವಂತೆ. ಇಲ್ಲಿನ ಕಸ ಕೆಸರು ಕಳೆದರೂ ಬಲೆಯ ದೀರ್ಘಾಯುಷ್ಯಕ್ಕೆ ಮತ್ತೆ ಸಮೀಪದ ಹೊಳೆ, ತೋಡುಗಳಿಗೆ ಒಯ್ದು ಸಿಹಿನೀರಿನಲ್ಲೂ ತೊಳೆದು, ಒಣಗಲು ಮರಳ ದಂಡೆಯ ಮೇಲೆ ಹರಡಬೇಕಾಗುತ್ತಿತ್ತಂತೆ. ಇಂದು ಪ್ಲ್ಯಾಸ್ಟಿಕ್ ಅಥವಾ ನೈಲಾನ್ ಬಲೆಯಲ್ಲಿನ ಉಳಿಕೆಗಳು ಕೊಳೆತು, ತಿರುಗಿ ಬಳಸುವ ಬೆಸ್ತರಿಗೇ ವಾಸನೆ ಕಾಡದಂತೆ, ಕಾಯಿಲೆ ಬರದಂತೆ ಮಾತ್ರ ತೊಳೆಯುವುದು ನಡೆಯುತ್ತದಂತೆ.) ಐದೇ ಮಿನಿಟಿನಲ್ಲಿ ಬಲೆಯನ್ನು ಮತ್ತೆ ದೋಣಿ ಸೇರಿಸಿ, ಹುಟ್ಟು ಹಾಕುತ್ತ ದೋಣಿಯ ಮೂತಿ ಮತ್ತೆ ಮರಳು ಕಚ್ಚುವಂತೆ ಮಾಡಿದರು.

ಗಂಟೆಗಳ ಹಿಂದೆ ನಾವು ಹೊರಡುವಾಗ ಇಲ್ಲದ ಜನಸಂತೆ ಈಗ ಸೇರಿತ್ತು. ಒಂದೊಂದೇ ದೋಣಿ ನೆಲ ಮುಟ್ಟುತ್ತಿದ್ದಂತೆ ಅಲ್ಲಿನ ವ್ಯಾಪಾರಿ ಕಣ್ಣುಗಳು ಕೊಳ್ಳೆ ಏನು, ಎಷ್ಟು ಅಳತೆ ನಡೆಸಿದ್ದವು. ಕುಶಲ ಕೈಗಳು ರಾಶಿಯಿಂದ ವಿವಿಧ ಜಾತಿಗಳನ್ನು ವಿಂಗಡಿಸುತ್ತಾ ಬುಟ್ಟಿಗಳಿಗೆ ತುಂಬುತ್ತಾ, ದಂಡೆಯಲ್ಲಿ ತತ್ಕಾಲೀನವಾಗಿ ಮಾಡಿದ್ದ ತೆಂಗಿನ ಗರಿಯ ಮರೆಯಲ್ಲಿ ರಾಶಿ ಹಾಕುತ್ತಿದ್ದಂತೆ ಹರಾಜಿನ ಗದ್ದಲ ಏರತೊಡಗಿತು. ಉಂಡಾಡಿ ಮಕ್ಕಳು, ಬೀಡಾಡಿ ನಾಯಿ, ಕಳ್ಳ ಕಾಗೆಗಳು ಇಲ್ಲಿ ಹಾಸುಹೊಕ್ಕು. ನೇರ ಮಾರುಕಟ್ಟೆಗೆ ಹೋಗದ ಕೊಳ್ಳೆಯಲ್ಲಿ ಮನೆ ಅಗತ್ಯ ಪೂರೈಸಿಕೊಳ್ಳಲೆಂದೇ ಹಲವರು ಪಾತ್ರೆ, ಬುಟ್ಟಿ ಹಿಡಿದು ದೋಣಿ ದೋಣಿ ಅಲೆಯುವುದೂ ಕಾಣುತ್ತಿತ್ತು. ಹರಾಜು ಕಟ್ಟೆಯಲ್ಲೂ ಬಹಳ ಚುರುಕಾಗಿ ವಹಿವಾಟು ನಡೆದು, ಮತ್ತೆ ಬುಟ್ಟಿ ಸೇರಿದ ಕೊಳ್ಳೆ ಈಗ ಇಬ್ಬಿಬ್ಬರ ಕೈತೂಗಿನಲ್ಲಿ ರಿಕ್ಷಾ, ಟೆಂಪೋ ಸೇರಿ ಪೇಟೆಯ ಕಡೆಗೋ ಶೀಥಲೀಕರಣಕ್ಕೋ ಧಾವಿಸುತ್ತಿದ್ದವು. ದಂಡೆಯ ವಾಣಿಜ್ಯ ವಹಿವಾಟಿನಲ್ಲಿ ಹೆಚ್ಚಿನ ಬೆಸ್ತರು ತೊಡಗಿಕೊಂಡಂತೆ ಕಾಣಲಿಲ್ಲ. ಮತ್ತೆ ದೋಣಿಯನ್ನು ಹೊತ್ತು ಎತ್ತರದಲ್ಲಿಟ್ಟು, ಎಂಜಿನ್, ಟ್ಯಾಂಕ್ ಕಳಚಿ, ಭುಜಕ್ಕೇರಿಸಿಕೊಂಡು ಬಂದಷ್ಟೇ ನಿಶ್ಶಬ್ದವಾಗಿ ಕರಗಿಹೋದರು. ಬೇರೆ ಬೇರೆ ದೋಣಿಗಳಲ್ಲಿ ಹಂಚಿಹೋಗಿದ್ದ ನಮ್ಮವರಲ್ಲಿ ಹೆಚ್ಚಿನವರಿಗೆ ಹೊಟ್ಟೆಯಲ್ಲಿ ಒಂದು ಹನಿಯೂ ಉಳಿಯದಿದ್ದರೂ ಕಥನಗಳ ಕೊಡ ತುಂಬಿ ತುಳುಕುತ್ತಿತ್ತು; ಉತ್ಸಾಹದ ಊಟೆ ಚಿಮ್ಮುತ್ತಿತ್ತು. ಅನುಭವಗಳ ವಿನಿಮಯ, ಬೇರೆ ಬೇರೆ ಕೊಳ್ಳೆಗಳನ್ನು ನೋಡುವುದು, ಚಿತ್ರಗ್ರಹಣ, ಹಾಸ್ಯ ಗದ್ದಲವೋ ಗದ್ದಲ. ಡಾಲ್ಫಿನ್ನುಗಳ ಆಟ, ಉಸಿರೆಳೆಯಲು ಮೇಲೆ ತಲೆ ಎತ್ತಿದ್ದ ಭಾರೀ ಆಮೆಯ ನೋಟ, ಬಾಲದ ತುದಿಯಲ್ಲಿ ವಿದ್ಯುದಾಘಾತದ ಕೊಂಡಿ ಹೊತ್ತರೂ ಜೀವ ರಕ್ಷಿಸಿಕೊಳ್ಳಲಾಗದ ತೊರಕೆ ಮೀನಿನ ಗೆರಸಿಯ ರೂಪ, ಬಲೆಶುದ್ಧಿಗಾರರು ಎಸೆದ ತುಣುಕಿಗಾಗಿ ಗಾಳಿಯಲ್ಲಿ ಅಂತರ್ಲಾಗ ಹೊಡೆಯುವ ಕಾಗೆ ನೋಡಿದಷ್ಟೂ ನುಡಿದಷ್ಟೂ ಮುಗಿಯದು.

ದಿನೇಶರಿಗೂ ನಮ್ಮ ಉತ್ಸಾಹ ಕಂಡು ಕುಶಿಯಾಯ್ತು. ಇದೇ ಬೆಸ್ತರು, ಬೇರೇ ಬಲೆ ಮತ್ತು ಬೇರೇ ವಲಯಗಳಲ್ಲಿ ಹಗಲಾಡುವ ಬೇಟೆ, ಹುಣ್ಣಿಮೆಯ ರಾತ್ರಿಯದೇ ಇನ್ನೊಂದು ಸುತ್ತಾಟ, ಮಳೆಗಾಲದ ಎಡೆಯಲ್ಲಿನ ಮತ್ತೊಂದೇ ಬಗೆಯ ವೀರಸಾಧನೆಗಳಲ್ಲೆಲ್ಲ ಭಾಗಿಯಾಗಲು ಮುಕ್ತ ಆಮಂತ್ರಣ ನೀಡಿದರು. ಸಾಲದೆಂಬಂತೆ, ಸ್ವತಃ ತಾವೇ ತಮ್ಮ ಕೆಲವು ತೆಂಗಿನಮರಗಳಿಗೇರಿ, ಬೊಂಡಗಳನ್ನು ಕೊಯ್ದು, “ವಾಂತಿಯಾದ ಮೇಲೆ ಖಾಲೀ ಹೊಟ್ಟೆಯಲ್ಲಿ ಹೋಗಬೇಡಿ” ಎಂದು ಅಷ್ಟೂ ಜನರಿಗೆ ಎಳನೀರು ಕುಡಿಸಿಯೇ ಕಳಿಸಿಕೊಟ್ಟಿದ್ದರು; ಕಡಲಿನ ಔದಾರ್ಯ ಅವರದೂ ಆಗಿತ್ತು.