ಮಂಗಳೂರು ವರ್ಣಿಸುವಾಗ `ಅತ್ತ (ಘಟ್ಟದ) ದರಿ, ಇತ್ತ (ಕಡಲ) ಕಮರಿ’ ಸವಕಲು ಮಾತಾಗಿ ಕೇಳಬಹುದು. ಆದರೆ ಅದನ್ನು ತಮ್ಮ ಅನುಭವದ ಭಾಗವಾಗಿಸುವಲ್ಲಿ ಸೋಲುವವರೇ ಹೆಚ್ಚು. ದರಿಯನ್ನು ಕಂಡವರು ಎಷ್ಟೂ ಸಿಗಬಹುದು – ನೇರ ಚಾರಣ ಮಾಡದಿದ್ದರೂ ವಿವಿಧ ವಾಹನ ಸೌಕರ್ಯಗಳಲ್ಲಾದರೂ ಘಾಟಿ ದಾರಿಯನ್ನು ಹಾಯ್ದುಹೋಗುವ ಅನಿವಾರ್ಯತೆ ಹೆಚ್ಚಿನೆಲ್ಲರಿಗೂ ಬರುತ್ತಲೇ ಇರುತ್ತದೆ. ಆದರೆ ಕಮರಿ? ಹೊಳೆ, ಹಿನ್ನೀರು, ಕೊನೆಯಲ್ಲಿ ಸಮುದ್ರ ಸೇತುವೆಯಿಂದಲೋ, ದಂಡೆಯಿಂದಲೋ ಸಾಕಷ್ಟು ಕಂಡುಹೋಗುತ್ತದೆ, ಅಪರೂಪಕ್ಕೆ ತೀರ್ಥ ಸ್ನಾನ ಮಾಡುವುದೂ ಇರಬಹುದು, ಹೆಚ್ಚಿಗೆ ದಕ್ಕಿಸಿಕೊಳ್ಳುವವರು (ವೃತ್ತಿಪರರನ್ನು ಬಿಟ್ಟು) ಕಡಿಮೆ.
ಬಿಡು ದಿನಗಳಲ್ಲಿ, ನೆಂಟರಿಷ್ಟರ ಕೂಟದಲ್ಲಿ (ಪುಣ್ಯ ಸಂದರ್ಶನ, ಸಿನಿಮಾ, ಪೇಟೆ/ಮಾಲ್-ಸುತ್ತಾಟ ಏನೂ ಇಲ್ಲದಾಗ “ಬೀಚಿಗೋಗುವಾ” ಅಂದದ್ದಿರಬಹುದು. ಆದರೆ ಪುಳಿನ ಕಿನಾರೆ ತಲಪಿದ್ದೇ ಬಹಳ ದೊಡ್ಡ ಜವಾಬ್ದಾರೀ ಎಂಬಂತೆ ಚರುಮುರಿ ಧ್ವಂಸ ಮಾಡಿ, ಐಸ್ಕ್ರೀಂ ನೆಕ್ಕಿ ಮುಗಿಸುತ್ತೇವೆ. ಪ್ಯಾಂಟೆತ್ತರಿಸಿ ಅಲೆ ಸೋಂಕಿಸಿಕೊಂಡದ್ದು, ಸೋಮಾರಿ ಮಾತುಗಳೆಡೆಯಲ್ಲಿ ಮರಳು ಗೀಚಿದ್ದು, ಪುರಾಣಪುರುಷ ಸೂರ್ಯಮುಳುಗಿದಾಗ ಮುಖಪುಸ್ತಕದಲ್ಲಿ `ಲಾಯಕ್’ ಹೊಡೆದಷ್ಟೇ ನಿಷ್ಠೆಯಿಂದ “ವೊವ್”ಗುಟ್ಟಿದ್ದೂ ಯಾವ್ಯಾವುದೋ ಜಾಹೀರಾತಿನ ನೆರಳು-ಚಿತ್ರದ ಅಣಕದಂತೆ ಕುಣಿದು ಕುಪ್ಪಳಿಸಿದ್ದೂ ಸರಿಯೇ. ಅಪರೂಪಕ್ಕೆ ಒಂದೆರಡು ದೋಣಿ ಸವಾರಿ ಬಿಟ್ಟರೆ ಸಾಮಾನ್ಯವಾಗಿ `ಕಮರಿ’ಯ ಸಹವಾಸ ಮುಗಿದೇ ಹೋಯ್ತು. ಮಳೆಗಾಲದ ಅಬ್ಬರ, ಕೊರೆತ ಪತ್ರಿಕಾ ವರದಿಗಳಲ್ಲೇ SAFE! ಹಿನ್ನೀರ ಹರಹು, ಅಂಚುಗಟ್ಟಿದ ವೈವಿಧ್ಯಮಯ ಗೊಸರು ಮತ್ತು ಹಸುರು, ಅಖಂಡ ಪಾರಾವಾರ ಮತ್ತೆಲ್ಲೆಲ್ಲೂ ವ್ಯಾಪಿಸಿದ ಜೀವಕೋಟಿಗಳೆಲ್ಲ ನಮಗೆ ಒಂದೋ ಪುರಾಣದ ಬದನೇಕಾಯಿ (ಒಂದಾಲದೆಲೆಯ ಮೇಲೆ…, ಅಥವಾ ರಾಮಸೇತು ಇತ್ಯಾದಿ) ಇಲ್ಲವೇ ಪಾಶ್ಚಾತ್ಯರ (ಡಿಸ್ಕವರಿ, ಆನಿಮಲ್ ಪ್ಲೇನೆಟ್, ನ್ಯಾಶನಲ್ ಜಿಯಾಗ್ರಫಿಕ್ ಇತ್ಯಾದಿ) ಸಾಧನೋಚ್ಚಿಷ್ಟ
ಸುಮಾರು ಇಪ್ಪತ್ತು ವರ್ಷಗಳ ಹಿಂದೊಮ್ಮೆ ಕಣ್ವತೀರ್ಥದ ದಿನೇಶ್ ಉಚ್ಚಿಲರ `ನೌಕಾಸೇನೆ’ಯಲ್ಲಿ (ಔಟ್-ಬೋರ್ಡ್ ಇಂಜಿನ್ ಅಳವಡಿಸಿದ ನಾಡ ದೋಣಿಗಳು) `ಆಳ ಸಮುದ್ರದ ಮೀನುಗಾರಿಕೆಯಲ್ಲಿ ಒಂದು ದಿನ’ ಭಾಗಿಯಾದದ್ದು ನನಗಂತೂ ಅವಿಸ್ಮರಣೀಯ ಅನುಭವ.
ಇನ್ನೊಮ್ಮೆ ಮೊಟಾರ್ ಬೋಟೊಂದರಲ್ಲಿ ಪರ್ಸೀನ್ ಮೀನುಗಾರರೊಡನೆಯೂ ನಾವು ಮೂರೋ ನಾಲ್ಕೋ ಗೆಳೆಯರು ಹೋಗಿದ್ದೆವು. ಅದು ದಿನಪೂರ್ತಿಯ ಕಡಲ ಅಲೆದಾಟ. ಕೆಲವು ನಿಗದಿತ ಆಳದ ಸಮುದ್ರದಲ್ಲಿ, ಹಿಂಡುಗಳಲ್ಲಿ ಜೀವಿಸುವ ಮೀನುಗಳು ಪರ್ಸೀನಿನವರ ಲಕ್ಷ್ಯ. ಇವರು ಸಾಮಾನ್ಯವಾಗಿ ನೀರ ಮೇಲ್ಮೈಯಲ್ಲಿ ಮೀನ-ತೆಪ್ಪದ ಚಲನೆಯನ್ನು ನೋಡಿಯೇ ಅತ್ತ ಧಾವಿಸಿ, ಸಂಶಯಿತ ವಲಯದಲ್ಲಿ ಮೊದಲು ಬಲೆಯನ್ನು ವಿಸ್ತಾರ ವೃತ್ತಾಕಾರದಲ್ಲಿ ಹರಡುತ್ತಾರೆ. ಅನಂತರ ದಾರಗಳ ಸೌಕರ್ಯದಲ್ಲಿ ತಳವನ್ನು ಮುಚ್ಚಿ ಬಲೆಯ ಸಂಚಿಯಂಥದೇ ರಚನೆ ಮಾಡುತ್ತಾರೆ. ಮತ್ತೆ ಇದರೊಳಗೆ ಸಿಕ್ಕಿ ಬಿದ್ದಿರಬಹುದಾದ ಮೀನ ಹಿಂಡನ್ನು ಸಂಗ್ರಹಿಸುವಂತೆ ಬಲೆಯನ್ನು ದೋಣಿಯೊಳಕ್ಕೆ ಎಳೆದು ಹಾಕುತ್ತಾರೆ.
ಆ ದಿನಗಳಲ್ಲಿ ಸಾಂಪ್ರದಾಯಿಕ ಕ್ರಮಗಳನ್ನು ಮೀರಿ ಬೆಳೆಯುತ್ತಿದ್ದ ಯಾಂತ್ರಿಕ ಮೀನುಗಾರಿಕೆಯಾದ ಪರ್ಸೀನಿನಲ್ಲೂ ವಿಪರೀತ ಸ್ಪರ್ಧೆಯಿತ್ತು. (ಮಂಗಳೂರು ಉಡುಪಿ ಬಸ್ಸುಗಳ ಹಾಗೆ!) ನಮ್ಮ ಕಣ್ಣಳವಿಯಲ್ಲೇ ಹಲವು ಪರ್ಸೀನ್, ಕೆಲವು ಟ್ರಾಲರ್ಗಳೂ (ಇನ್ನೊಂದು ವಿಧದ ಮೀನುಗಾರಿಕೆ – ಗೋರುಬಲೆ?) ಬೇಟೆ ಅರಸುತ್ತಲೇ ಇದ್ದವು. ನಾವು ಹೋದ ದಿನಗಳಲ್ಲಿ ಮೀನ ಕೊಳ್ಳೆಯೂ ವಿರಳವಾಗಿತ್ತು. ಅಂದು ನಮ್ಮ ದೋಣಿಯ ಅದೃಷ್ಟವೂ ತೆರೆಯಲಿಲ್ಲ. ಮಧ್ಯಾಹ್ನದವರೆಗೆ ಅಲೆದದ್ದೇ ಬಂತು. ಒಮ್ಮೊಮ್ಮೆ ಯಾವುದೋ ಒಂದು ಅಥವಾ ಕೆಲವು ದೋಣಿಗಳು ನಿರ್ದಿಷ್ಟ ಗುರಿಯತ್ತ ಧಾವಿಸುತ್ತಿವೆ ಎಂಬ ಸಂಶಯ ಇವರನ್ನು ಕಾಡುತ್ತಿತ್ತು. ವಾಸ್ತವದಲ್ಲಿ ದೊಡ್ಡ ಮೀನ-ತೆಪ್ಪಗಳಿದ್ದರೆ ಒಂದಲ್ಲ, ಹಲವು ದೋಣಿಗಳಿಗೂ ತುಂಬಿ ಮಿಕ್ಕುವುದಿದೆಯಂತೆ. ನಮ್ಮವರೂ ಹಾಗೆ ಒಂದೆರಡು ಬಾರಿ ದೌಡಾಯಿಸಿದರೂ ನಿರೀಕ್ಷೆಗಳು ಹುಸಿಯಾದವು.
ದಿನದ ಮೊದಲಲ್ಲೇ ತಂಡದೊಳಗೊಬ್ಬ ಅಡುಗೆಗೆ ನಿಲ್ಲುತ್ತಾನೆ. ಆತ ಮಧ್ಯಾಹ್ನಕ್ಕೆ ಅಕ್ಕಿ ಬೇಯಲು ಹಾಕಿ ಮೀನಸಾರಿಗೆ ಮಸಾಲೆ ಅರೆಯಲು ಕೂತಿರುತ್ತಾನೆ. ಮೀನತೆಪ್ಪದ ಅರಸಾಟ ನಡೆದಿದ್ದಂತೆ ಈತ ಕೈ ಬಲೆ, ಗಾಳ ಬಳಸಿ ಊಟಕ್ಕಷ್ಟು ಅದೃಷ್ಟ ಪರೀಕ್ಷಿಸುತ್ತಲೇ ಇರುತ್ತಾನೆ. ಕೆಲವೊಮ್ಮೆ ಹತ್ತಿರ ಸುಳಿವ ಇತರ ದೋಣಿಯವರಿಗೆ ಸಿಕ್ಕ ಚೂರುಪಾರು ಬೇಟೆಯಲ್ಲೇ ಅಡುಗೆಗೆ ಬೇಕಾದಷ್ಟು (ಅವರೊಳಗೆ ಊಟದ ಮಟ್ಟಿಗೆ ವಿನಿಮಯ ಸದಾ ಉಚಿತವೇ ಅಂತೆ) ಕೊಟ್ಟೋ ಪಡೆದೋ ಮುಂದುವರಿಯುವುದೂ ಉಂಟು. ಮಧ್ಯಾಹ್ನವಾದಾಗ ಅವರೆಲ್ಲ ಬಿಸಿಯನ್ನ, ಮೀನ ಸಾರು ಪುಷ್ಕಳವಾಗಿಯೇ ಚಪ್ಪರಿಸಿದರು. ಮಾಂಸಾಹಾರದ ಬಳಕೆಯಿಲ್ಲದ ನಮಗೆ ಅವರು ಇನ್ಯಾವುದೋ ದೋಣಿಯವರಲ್ಲಿ ಎರವಲು ಪಡೆದ ಮಾವಿನ ಉಪ್ಪಿನಕಾಯಿ ನಂಚಿಕೊಳ್ಳಲು ಕೊಟ್ಟು ಧಾರಾಳ ಗಂಜಿಯನ್ನೂ ಕೊಟ್ಟು ಔದಾರ್ಯ ಮೆರೆದರು. ತಲೆ ಸುಡುವ ಬಿಸಿಲಾದರೂ (ಟೊಪ್ಪಿ ಹಾಕಿಕೊಂಡಿದ್ದೆವು, ಎಂಜಿನ್ ಕೋಣೆಯ ಅಕ್ಕಪಕ್ಕದ ಚೂರುಪಾರು ನೆರಳು ಆಗೀಗ ಬಳಸಿದ್ದೂ ಇತ್ತು) ನೀರ ಸಾಮೀಪ್ಯ, ಬೀಸುಗಾಳಿಯ ಸಾಂತ್ವನದಲ್ಲಿ ಯಾವ ಅಲಂಕಾರಗಳಿಲ್ಲದ ಗಂಜಿ ಮತ್ತು ಉಪ್ಪಿನಕಾಯಿಯ ಊಟಕ್ಕೂ ಒಂದು ವಿಶಿಷ್ಟ ರುಚಿಯನ್ನು ನಾನು ಅದೇ ಮೊದಲು ಅಲ್ಲಿ ಕಂಡಿದ್ದೆ!
ಟ್ರಾಲರ್ ದೋಣಿಗಳಾದರೋ ಜನ ಕಡಿಮೆ ಇರುವ ಮೀನುಗಾರಿಕಾ ವ್ಯವಸ್ಥೆಯಂತೆ. (ನನಗೆ ಪಯಣಿಸಿದ ಅನುಭವವಿಲ್ಲ) ಹೆಚ್ಚು ಶಕ್ತಿಯುತವಾದ ಬಲೆಯನ್ನು ಒಂದಷ್ಟು ಅಗಲಕ್ಕೆ ಹರಡಿ ಮುಳುಗಿಸಿ ಸಾಗರ ತಳ ಸೋಕಿಸುತ್ತಾರೆ. ಮತ್ತೆ ಬಲೆಯ ಎರಡು ತುದಿಗಳಿಗೆ ಹಗ್ಗ ಕಟ್ಟಿ, ಬಲೆಯನ್ನು ಕೆಲವು ದೂರಕ್ಕೆ ಎಳೆಯುತ್ತಾ ಆ ಉದ್ದಕ್ಕೆ ಸಾಗರ ತಳದಲ್ಲಿರುವವನ್ನೆಲ್ಲ ಗೋರುತ್ತಾ ಸಾಗುತ್ತಾರಂತೆ. ಮತ್ತೆ ನಿಯತ ಅಂತರಗಳಲ್ಲಿ ಯಂತ್ರ ಸೌಲಭ್ಯಗಳಲ್ಲೇ ಬಲೆಯನ್ನು ಮೇಲಕ್ಕೆತ್ತಿ ಕೊಳ್ಳೆ ಸಂಗ್ರಹಿಸಿಕೊಂಡು, ಗೋರುವುದನ್ನು ಮುಂದುವರಿಸುತ್ತಾರೆ. ಪರ್ಸೀನ್ ಬೆಸ್ತರು ಹೇಳುವಂತೆ ಟ್ರಾಲರ್ ಪ್ರಯೋಗ ನಿಷೇಧಯೋಗ್ಯ. ಅದು ಸಾಗರ ತಳವನ್ನು ಗೋರುವ ಕ್ರಮದಲ್ಲಿ ಮೀನಿನ ಮೊಟ್ಟೆ ಮತ್ತು ವಿಕಸಿಸುವ ಪರಿಸರವನ್ನೇ ಹಾಳುಮಾಡುತ್ತವಂತೆ. ಅದೇ ದಂಡೆಯಲ್ಲಿ ಸಿಕ್ಕ ಟ್ರಾಲರ್ ಬೆಸ್ತನ ನಿವೇದನೆಯೇ ಬೇರೆ. ಲಕ್ಷಾಂತರ ಕಿಮೀ ಉದ್ದಗಲಕ್ಕೆ ಹರಡಿದ ಸಾಗರ ತಳದಲ್ಲಿ, ಅದೂ ದಂಡೆಗೆ ಸಮೀಪದಲ್ಲಿ ಎಲ್ಲೋ ಕ್ಷುಲ್ಲಕ ಗೀರಿನಷ್ಟೇ ಪರಿಣಾಮ ಬೀರುವ ನಮ್ಮ ಬಲೆ ಪರಿಸರ ನಾಶಿಯೇನೂ ಅಲ್ಲ. ಬದಲಿಗೆ ತಳದಲ್ಲಿರುವ ಕಲ್ಲು, ಕೊರಕಲಿಗೆ ಸಿಕ್ಕಿ ಬಲೆ ಹರಿಯುವುದು, ಮನುಷ್ಯ ಕೊಳಕೇ ಮೇಲೆ ಬಂದು ಶ್ರಮ ವ್ಯರ್ಥವಾಗುವುದರ ನಷ್ಟ ಯಾರಲ್ಲಿ ಹೇಳೋಣ.
`ದಶಮುಖೀ’ ರೋಹಿತ್ ರಾವ್ (ಗೊತ್ತಿಲ್ಲದವರು ಹೆಸರಿನ ಮೇಲೆ ಚಿಟಿಕೆ ಹೊಡೆದು ನೋಡಿ) ನಿಮಗೆ ಗೊತ್ತಿಲ್ಲದವರೇನೂ ಅಲ್ಲ. ಆತನ ಹವ್ಯಾಸಿ ನಿಸ್ತಂತು ಸಂಪರ್ಕದ ಚಟುವಟಿಕೆಗಳು ಉಚ್ಛ್ರಾಯದಲ್ಲಿದ್ದ (ಕೆಲವು ವರ್ಷಗಳ ಹಿಂದೆ) ಒಂದು ದಿನ “ಅಶೋಕೆರೇ ವಿಳಿಯಾಂಗಲ್ಲಿಗೆ ಹೋಗ್ತಿದ್ದೆನೆ, ಬರ್ತೀರಾ” ಕೇಳಿದ. ವಿವರ ಕೇಳಿದ ಮೇಲೆ ಕುತೂಹಲ ತಡೆಯಲಿಲ್ಲ, ನಾನೂ ದೇವಕಿಯೂ ಸೇರಿಕೊಂಡೆವು. ದಿನದ ಮೊದಲ ಕೇರಳದ ರೈಲು ಹತ್ತಿ ಬಡಗರ ನಿಲ್ದಾಣದಲ್ಲಿಳಿದಿದ್ದೆವು. ಅಲ್ಲಿಂದ ಪಿ.ಟಿ.ಉಷಾ ಖ್ಯಾತಿಯ ಪಯ್ಯೋಳಿಗಾಗಿ ಕಡಲ ಕಿನಾರೆ ಸೇರಿದ್ದೆವು. ಮರಳ ದಿಣ್ಣೆ ಹತ್ತಿ, ತುದಿಗಾಲಿನಲ್ಲಿ ನಿಂತಾಗ ಪಶ್ಚಿಮ ದಿಗಂತದಲ್ಲಿ ಮುಂಜಾವಿನ ಸೂರ್ಯ ಕಿರಣಕ್ಕೆ ಸಣ್ಣದಾಗಿ ಏನೋ ಬಿಳಿ ನಿಶಾನಿಯಂತೆ ಕಾಣುತ್ತಿತ್ತು. ಆ ವಲಯದ ಬೆಸ್ತರಲ್ಲಿ ಅದು ಸುಖ್ಯಾತ ವಿಳಿಯಾಂಗಲ್ ಅರ್ಥಾತ್ ಬಿಳಿಗಲ್ಲು! (ಬಲಿಗಲ್ಲು – ಸ್ಯಾಕ್ರಿಫಿಶಿಯಲ್ ರಾಕ್ ಎಂದೇ ಒಂದು ಐತಿಹ್ಯವೂ ಇದೆ) ವಾಸ್ತವದಲ್ಲಿ ಅದು ನೀರಮೇಲೆದ್ದು ನಿಂತ ನಾಲ್ಕೈದು ಭಾರೀ ಬಂಡೆಗಳ ಸಮೂಹ. ಅದು ಸಹಜ ಕಗ್ಗಲ್ಲೇ (ಗ್ರಾನೈಟ್) ಆದರೂ ನಿರಂತರ ಕಡಲಕ್ಕಿಗಳ ಮಲಪ್ರೋಕ್ಷಣೆಯಲ್ಲಿ ಬಿಳಿಯ ಹೊದಿಕೆ ಹೊದ್ದಿತ್ತು. ಸಮುದ್ರದ ಕಲ್ಲೋಲದಲ್ಲಿ ಸಾಮಾನ್ಯವಾಗಿ ಬೆಸ್ತರು ಅದರ ಸಮೀಪ ಸುಳಿಯುವುದನ್ನು ತಪ್ಪಿಸುತ್ತಾರೆ. ಆದರೆ ರೋಹಿತ್ತಿಗೆ ಬಂಡೆಯ ಮೈಯನ್ನೇ ಸೇರಿ, ಎರಡು ದಿನ ಶಿಬಿರ ಹೂಡುವ ಅನುಕೂಲವಿದೆಯೇ ಎಂದು ಶೋಧಿಸುವುದೇ ಉದ್ದೇಶವಾಗಿತ್ತು.
ಮೋಟಾರ್ ದೋಣಿಯವನೊಬ್ಬನನ್ನು ಒತ್ತಾಯದಲ್ಲೇ ಒಪ್ಪಿಸಿ,ಕೆಲವು ಪೂರ್ವ ತಯಾರಿಯೊಡನೆ ವಿಳಿಯಾಂಗಲ್ಲಿನತ್ತ ಘುಡುಘುಡಿಸಿದೆವು. ಅದು ಬೇಸಗೆಯ ದಿನವೇ ಆದರೂ ಸಮುದ್ರ ತುಸು ಹೆಚ್ಚೇ ಆಂದೋಲಿಸಿತ್ತು. ಸುಮಾರು ಒಂದು ಗಂಟೆಯ ಓಟದಲ್ಲಿ ನಾವು ಬಂಡೆ ಸಮೂಹವನ್ನು ಸಮೀಪಿಸಿದ್ದೆವು. ಅವು ಸುಮಾರು ಐನೂರು ಅಡಿ ವ್ಯಾಸದಲ್ಲಿ ನೀರಿನಿಂದ ಮೇಲೆ ಸುಮಾರು ಅರವತ್ತೆಪ್ಪತ್ತು ಅಡಿ ಎತ್ತರದವರೆಗಿನ ನಾಲ್ಕೈದು ಕೊಡಿ ಮತ್ತೆ ಮೇಲೆ ಅಡ್ಡಾತಿಡ್ಡಾ ಬಿದ್ದ ಕೆಲವು ಪುಡಿ ಬಂಡೆಗಳನ್ನೂ ಪ್ರದರ್ಶಿಸಿತ್ತು. ಅವುಗಳಲ್ಲಿ ಒಂದೆರಡು ಮಾತ್ರ ನಡುವೆ ನೀರಿನಿಂದ ಪ್ರತ್ಯೇಕಿಸಲ್ಪಟ್ಟಿದ್ದವು. ನಮ್ಮ ಚಾಲಕ ಮೊದಲಲ್ಲಿ ತುಸು ದೂರದಿಂದಲೇ ಒಂದು ಸುತ್ತು ಹಾಕಿ, ಗುಹೆಯಂತಿದ್ದ ಒಂದು ಮುಖವನ್ನು ಸಮೀಪಿಸಿ, ಎಂಜಿನ್ ಚಾಲೂ ಇಟ್ಟುಕೊಂಡೇ ನಿಲ್ಲಿಸಿದ. ನೀರು ಬಂಡೆಗಪ್ಪಳಿಸುವ ಪರಿ ನೋಡಿದರೆ ಮತ್ತೂ ಸಮೀಪಿಸುವುದು ದೋಣಿಗೆಷ್ಟು ಅಪಾಯಕಾರಿ ಎಂದು ಯಾರಿಗೂ ಕಾಣುತ್ತಿತ್ತು. ಅನಂತರ ನಾವಿಕರಲ್ಲೊಬ್ಬ ಹಗ್ಗದ ತುದಿಯೊಂದನ್ನು ತನ್ನ ಸೊಂಟಕ್ಕೆ ಸಿಕ್ಕಿಸಿಕೊಂಡು ಬಂಡೆಯತ್ತ ಈಜಿ ಹೋದ. ನಿರಂತರ ನೀರ ಸಂಪರ್ಕವಿರುವಷ್ಟೂ ಎತ್ತರಕ್ಕೆ ಬಂಡೆಯಲ್ಲಿ ದಟ್ಟವಾಗಿ ಚಿಪ್ಪಿನ ಜೀವಿಗಳು ಅಂಟಿಕೊಂಡಿದ್ದುವು. ಅವುಗಳ ಮೇಲೆ ಬಲು ಎಚ್ಚರದಿಂದ ಹೆಜ್ಜೆಯೂರಿ ಬಂಡೆಯ ಮಟ್ಟಸ ಜಾಗವನ್ನು ಸೇರಿಕೊಂಡ. ಮತ್ತೆ ಆ ಹಗ್ಗದ ತುದಿಯನ್ನು ಒಂದು ಕಲ್ಲಿನ ಕೊರಕಲು ಬಳಸಿ ಕಟ್ಟಿ ಉಳಿದವರಿಗೆ ನಿರಪಾಯಕಾರಿಯಾಗಿ ಬಂಡೆ ಸೇರಲು ಕೈತಾಂಗು ಮಾಡಿದ. ಮತ್ತಿನ ಸರದಿ ನಮ್ಮದು. ದೋಣಿಯಲ್ಲಿ ಒಂದು ಗಟ್ಟಿ ಗಾಳಿ ತುಂಬಿದ ಲಾರಿ ಟ್ಯೂಬಿತ್ತು. ಅದಕ್ಕೊಂದು ಹಗ್ಗ ಕಟ್ಟಿ, ಟ್ಯೂಬಿನೊಳಗೆ ನಮ್ಮ ದೇಹ ತೂರಿ (ಕಂಕುಳಡಿಗೆ ಟ್ಯೂಬ್ ನಿಲ್ಲುವಂತೆ) ಸರದಿಯ ಮೇಲೆ ನಾವು ನೀರಿಗಿಳಿದೆವು. ಮತ್ತೆ ಕೈತಾಂಗಿನಂತಿದ್ದ ಹಗ್ಗವನ್ನು ಜಗ್ಗುತ್ತ ಬಂಡೆ ಸೇರಿಕೊಂಡೆವು. ನೀರಿಗೇಕೆ ಚಪ್ಪಲಿ ಎಂದು ಕಳಚಿ ಹೋದವರು ಚಿಪ್ಪಿನ ಹಾಸಿನ ಮೇಲೆ ಏರುವಾಗ ಪಾದದಲ್ಲಿ ಒಂದೆರಡು ಕೊಯ್ದ ಗಾಯಗಳೇ ಆಗಿದ್ದವು! ಆ ಶಿಲಾ ಸಮೂಹದ ನಡುವೆ ಓಡಾಡಿ, ಸುಲಭದಲ್ಲಿ ಇಪ್ಪತ್ತು – ಮೂವತ್ತು ಮಂದಿಗೆ ತತ್ಕಾಲೀನ ನೆಲೆ, ನಿಸ್ತಂತು ಚಟುವಟಿಕೆ ನಡೆಸಲು ಅಪಾರ ಅವಕಾಶ ಒದಗಿಸುವುದನ್ನು ರೋಹಿತ್ ಬಹಳ ಸಂತೋಷದಿಂದಲೇ ಗುರುತಿಸಿಕೊಂಡರು. ಅನಂತರ ಬಂಡೆಗೆ ಬಂದಷ್ಟೇ ಪ್ರಯಾಸದಲ್ಲಿ ದೋಣಿಗೆ ಮರಳಿ, ದಂಡೆ ಸೇರಿದೆವು. ಅಂದು ರೋಹಿತ್ ಹಾಕಿದ ಅಂದಾಜಿನ ಮೇಲೆ ತಿಂಗಳೊಳಗೆ ಅವರ ನಿಸ್ತಂತು ಹವ್ಯಾಸಿ ಸಂಸ್ಥೆ ಹಾರಿಸಿದ ವಿಜಯ ಪತಾಕೆ ಭಾರತದಲ್ಲಂತೂ ಇಂದಿಗೂ ಅಪೂರ್ವವಾಗಿಯೇ ಉಳಿದಿದೆ ಎನ್ನುವುದು ಅತಿಶಯೋಕ್ತಿಯಲ್ಲ.
ಇನ್ನು ಸಣ್ಣಪುಟ್ಟ ನೌಕಾಯಾನಗಳಲ್ಲಿ ಸುಲ್ತಾನ್ ಬತ್ತೇರಿಯಿಂದ ಬೆಂಗ್ರೆಗೋ, ಉಡುಪಿಯ ಸಂತ ಮೇರಿ ದ್ವೀಪಕ್ಕೋ ವಿಹಾರಕ್ಕೇ ಮೀಸಲು ಸರೋವರಗಳಲ್ಲಿ ಅಸಂಖ್ಯ ಗಸ್ತು ಹೊಡೆದದ್ದೆಲ್ಲ ನೆನಪಿನ ಕಡತಗಳಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇಂಥ ವಿಹಾರಗಳಲ್ಲಿ ನಾನನುಭವಿಸಿದ ಬಲು ದೊಡ್ಡ ಗಣ್ಯ ಯಾನಗಳು ಮೂರು – ಸುಂದರ ಬನ್ಸ್, ಅಂಡಮಾನ್ ಮತ್ತು ಲಕ್ಷದ್ವೀಪ. ಇದರಲ್ಲಿ ಅಂಡಮಾನ್, ಲಕ್ಷದ್ವೀಪಗಳ ಕಥನ ನಾನೀಗಾಗಲೇ ಜಾಲತಾಣದಲ್ಲಿ ಧಾರಾವಾಹಿಯಾಗೂ ಎರಡನ್ನು ಒಟ್ಟು ಮಾಡಿ – `ದ್ವೀಪಸಮೂಹದ ಕತೆ’ ಎಂಬ ಹೆಸರಿನಲ್ಲಿ ಗೆಳೆಯ ಅಭಿನವ ಪ್ರಕಾಶನದ ರವಿಕುಮಾರ್ ಪ್ರಕಟಿಸಿದ ಪುಸ್ತಕದಲ್ಲೂ ಧಾರಾಳ ಕೊಟ್ಟಿದ್ದೇನೆ. ನನ್ನ ಎರಡನೆಯ ಭಾರತ ಬೈಕ್ ಯಾನದ ಅಂಗವಾಗಿ ಸುಂದರಬನ ಎಂಬ ಗಂಗಾಮುಖಜ ಭೂಮಿಯ ವ್ಯಾಘ್ರಧಾಮ ಸುತ್ತಿದ್ದು ಒಂದು ಅಪೂರ್ವ ಅನುಭವ. ನನಗದನ್ನು ಇನ್ನೂ ಲಿಖಿತ ರೂಪದಲ್ಲಿ ತರುವುದು ಆಗಿಲ್ಲ, ಕ್ಷಮಿಸಿ.
ಕರಾವಳಿಯ ಸೈಕಲ್ ಸರ್ಕೀಟುಗಳಲ್ಲಿ ಸೇತುವೆ ಇಲ್ಲದಂತೆ ನೀರಿನ ಮುಖಾಮುಖಿಯಾಗುವುದೇನೂ ವಿಶೇಷವಲ್ಲ. ಆಯಕಟ್ಟಿನ ಜಾಗಗಳಲ್ಲಷ್ಟೇ ಸೇತುವೆ ಮತ್ತೂ ಸಾರ್ವಜನಿಕ ಒತ್ತಡವಿದ್ದಲ್ಲಿ ಆ ದಡ ಈ ದಡ ಮಾಡಲು ದೋಣಿಸೇವೆ ಒದಗುವುದೂ ಇದೆ. ಈ ಸೌಕರ್ಯಗಳನ್ನೂ ಮೀರಿದ ಅಸಂಖ್ಯ ಜಲವಲಯಗಳು ನನ್ನ ಸಹಜ ಕುತೂಹಲವನ್ನು ಕಾಡುತ್ತಲೇ ಇವೆ. ಕೇರಳದಲ್ಲಿ ದೋಣಿಮನೆಗಳಲ್ಲಿ ಉಳಿದು, ವಿಹರಿಸಿ ಬರುವವರ ಅನುಭವಗಳನ್ನೂ ಕೇಳಿದ್ದೇನೆ. ಮಲೆಯಾಳಿಗಳು ತಮ್ಮ ನದಿಮುಖಜಭೂಮಿಗಳಲ್ಲಿರುವ ಹಿನ್ನೀರ ಹರಹನ್ನು ವಾಣಿಜ್ಯ ವಹಿವಾಟಿನ ವಿಹಾರಸಾಧನವಾಗಿ ಬಳಸಿಕೊಳ್ಳುವಲ್ಲಿ ಬಹಳ ಮುಂದು. ನೀರಹರಹು, ವೃತ್ತಿಪರ ಬಳಕೆಯ ಸೌಕರ್ಯಗಳು ನಮ್ಮಲ್ಲೇನೂ ಕೊರತೆ ಅನುಭವಿಸುತ್ತಿಲ್ಲವಾದರೆ ವಿಹಾರ ಸಾಧನವಾಗಿಯೂ ಬಳಸಿಕೊಳ್ಳುವಲ್ಲಿ ನಾವು ಯಾಕೆ ಹಿಂದು ಎಂದು ನನ್ನದೇ ಹುಡುಕಾಟಕ್ಕಿಳಿದೆ.
ಮಂಗಳೂರಿನ ಸುತ್ತಮುತ್ತಲು ನದಿ ಹಾಗೂ ಸಮುದ್ರಕಿನಾರೆಗಳನ್ನು ಎತ್ತಿ ತೋರುವ ಮನೆ, ವಿರಾಮಧಾಮಗಳಿಗೇನೂ ಕೊರತೆಯಿಲ್ಲ. ಆದರೆ ಜಲವಿಹಾರ/ ಕ್ರೀಡೆಯನ್ನು ತಮ್ಮ ಆತಿಥ್ಯದ ಅಂಗವಾಗಿ ಘೋಷಿಸಿಕೊಳ್ಳುವಲ್ಲಿ ಅವರಿಗೆಲ್ಲ ಭಾರೀ ಹಿಂಜರಿಕೆಯಿದೆ. ಮಳೆಗಾಲ ಕಳೆದ ಋತುಗಳಲ್ಲಿ ಸುಲ್ತಾನ್ ಬತೇರಿಯ ಆಸುಪಾಸಿನ ಒಂದು ಕುದುರಿನಲ್ಲಿ (ನಡುಗಡ್ಡೆ) ಯಾರೋ ಹೋಟೆಲ್ ನಡೆಸುವುದು, ಅದಕ್ಕೆ ಗಿರಾಕಿಗಳನ್ನು ದೋಣಿಯಲ್ಲೇ ಅತ್ತಿಂದಿತ್ತ ಮಾಡುವುದು ಎಲ್ಲಾ ಕೇಳಿದ್ದೇನೆ. ಅಲ್ಲೇನೂ ಶೋಧ ಸಾಹಸವಿಲ್ಲ, ಸೌಂದರ್ಯವೂ ಇಲ್ಲ. ಅದು ಆರ್ಥಿಕವಾಗಿ ಸೊಕ್ಕಿದವರನ್ನಷ್ಟೇ ಉದ್ದೇಶಿಸಿದ್ದು. ಅಲ್ಲಿ ನದಿಯ ಪ್ರಾಕೃತಿಕ ಪರಿಸರಕ್ಕಿಂತಲೂ ಹೆಚ್ಚು ನಗರದ ಗದ್ದಲದಿಂದ ಹೊರಗಿನ ಏಕಾಂತ ಬಳಕೆಯಾಗುತ್ತದೆ!
ಸುಮಾರು ಹದಿನೈದು ವರ್ಷಗಳ ಹಿಂದೆ, ನಮ್ಮ ಹಾರುವ ಹುಚ್ಚಿನ ಅಧಿಕ ಸಮರ್ಥ ಉತ್ತರಾಧಿಕಾರಿಯಾಗಿ ಮೂಡಿಬಂದವನು ಗೆಳೆಯ ನೆವಿಲ್ ರಾಡ್ರಿಗಸ್. ಈತ ಸಾರ್ವಜನಿಕರಿಗೆ ಜಲಕ್ರೀಡೆಗಳನ್ನೂ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದ. ಭಾರೀ ಕಾರ್ಖಾನೆಗಳು, ಮರಳುಗಳ್ಳರು ತಮ್ಮ ಜಲಮಾಲಿನ್ಯದ ದ್ರೋಹಗಳು ಬಯಲಾದೀತೆಂಬ ಭಯದಲ್ಲಿ ಈತನ ಚಟುವಟಿಕೆಗಳಿಗೆ `ಭದ್ರತಾ ಗಡಿ’ ತೋರಿ ಮಿತಿ ಹೇರಿದರು. ಮತ್ತೆ ಸರಕಾರದ್ದೇ ವಿವಿಧ ಇಲಾಖಾ ನಿಬಂಧನೆಗಳೆಲ್ಲ ರೂಪುಗೊಳ್ಳುವುದೇ ನಿಷೇಧಾತ್ಮಕವಾಗಿ ಎಂದು ನಾನು ಬೇರೆ ಹೇಳಬೇಕೆ. ಎಲ್ಲಕ್ಕೂ ಮಿಗಿಲಾಗಿ ನೆವಿಲ್ಲಿನ ಸಾಹಸದ ವಿಚಾರವನ್ನು `ಕೊಳ್ಳುವ’ ಗಿರಾಕಿಗಳದೇ ಕೊರತೆಯಾಗಿ ಆತ ವ್ಯವಸ್ಥೆಯನ್ನೇ ಮುಚ್ಚಿ ಊರುಬಿಡಬೇಕಾಯ್ತು.
ಸುಲ್ತಾನ್ ಬತ್ತೇರಿ ಬಳಿಯೊಂದು ಖಾಸಗಿ ಬೋಟ್ ಕ್ಲಬ್ಬಿದೆ. ಅವರು ವಿವಿಧ ನಮೂನೆಗಳ ದೋಣಿ ನೆರಹಿ ಕೂಳೂರು ಸೇತುವೆಯವರೆಗೂ ವಿಹಾರಕ್ಕೊಯ್ಯುವುದು, ಸ್ವತಂತ್ರ ಸವಾರಿ ಹೋಗುವವರಿಗೆ ಬಾಡಿಗೆಯಲ್ಲಿ ಕೊಡುವುದು ಮಾಡುತ್ತಾರಾದರೂ ಭಾರೀ ಯಶಸ್ಸೇನೂ ಕಂಡಂತಿಲ್ಲ. ನದಿಗಿಂತ ಕಿನಾರೆಯ ವಠಾರದಲ್ಲೇ ಪಾರ್ಟಿ ಮೋಜು ಕಾಣುವವರು ಹೆಚ್ಚಾಗಿ, ಇಂದು ಅವರ ಜಲಕ್ರೀಡಾ ಅಥವಾ ವಿಹಾರ ಸಾಮಗ್ರಿಗಳು ಬೆಚ್ಚನೆ ಗೂಡು ಸೇರಿವೆ. ನಾನು ವಿಚಾರಿಸಿ ಹೋಗಿದ್ದೆ – ಸಾರ್ವಜನಿಕ ಬೇಡಿಕೆ ನೋಡಿಕೊಂಡು ಜನವರಿಯಲ್ಲಿ ಮತ್ತೆ ಶುರು ಮಾಡಲೂಬಹುದು ಎನ್ನುತ್ತಾರೆ. ಅಷ್ಟಾದರೂ ಅಲ್ಲಿ ನಗರ ವಾಸನೆ ಹಾಗೂ ಪ್ರಭಾವವನ್ನು ಕಳಚಲಾಗದ ಒಂದೆರಡು ಕಿಮೀ ಒಳಗೇ ಮತ್ತೆ ಮತ್ತೆ ಸುತ್ತುತ್ತಿರಬೇಕು.
ನನಗೆ ಭಾರೀ ಹಳೆ ಪರಿಚಯ – ಯಶವಂತ ಕಂಗನ್ – ಮಹಾಮೈಸೂರು ಹೆಸರಿನ ದೋಣಿ ನಿರ್ಮಾಣ ಸಂಸ್ಥೆಯ ಮಾಲಿಕ. ಇಂದು ಅವರು ಕೇವಲ ಔದ್ಯಮಿಕ ದೋಣಿ, ಹಡಗುಗಳ ನಿರ್ಮಾಣದಲ್ಲೇ ತೃಪ್ತರಾಗಿದ್ದಾರೆ. ಯಶವಂತ್ ಖಾಸಾ ಖಯಾಲಿಯಲ್ಲಿ ಮೋಟಾರು, ಹಾಯಿ ಕಟ್ಟಿಕೊಂಡು ಹಿಂದೆಲ್ಲಾ ನದಿಯಲ್ಲಿ ಮೇಲ್ಮುಖವಾಗಿ ಸುಮಾರು ಸುತ್ತಿದವರೇ. ಆದರೆ ಅವರನ್ನು ಕಂಡು ಪ್ರೇರಣೆ ಪಡೆದವರೇ ಇಲ್ಲವಂತೆ. ಸಹಜವಾಗಿ ನನ್ನ ಅನ್ವೇಷಣೆಯ ಮೀಟುಗೋಲು ಕುಟ್ಟಿದಾಗ “ಇಲ್ಲ ಅಶೋಕ್ ಯಾವ ವಿಧವಾದ ವಿಹಾರ ನೌಕೆಯನ್ನೂ ನಾನಿಂದು ಮಾಡುವುದಿಲ್ಲ. ಅಸಲಿಗೆ ಅಂಥವನ್ನು ಮಾಡಲು ಬೇಕಾದ ಅಚ್ಚುಗಳನ್ನೇ ನಾನು ಉಳಿಸಿಕೊಂಡಿಲ್ಲ” ಎಂದು ಕೈತೊಳೆದೇಬಿಟ್ಟರು.
ಲಕ್ಷದ್ವೀಪದಲ್ಲಿ ನನಗೆ ದೋಣಿಗಳಲ್ಲಿನ ಒಂದು ಪ್ರಕಾರ – ಕಯಾಕ್, ಇದರ ಪರಿಚಯವಾಗಿತ್ತು. ಫೈಬರ್ ಗ್ಲಾಸಿನ ಈ ದೋಣಿಯ ನೀರ ಸಂಪರ್ಕ ಸಾಂಪ್ರದಾಯಿಕ ರೂಪದಲ್ಲೇ ಇರುತ್ತದೆ. ಆದರೆ ಒಳಾವರಣ ನಿಗದಿತ ಸವಾರ ಸಂಖ್ಯೆಗನುಗುಣವಾಗಿ (ಹೆಚ್ಚಾಗಿ ಒಂದು ಅಥವಾ ಎರಡು ಮಾತ್ರ. ಮಕ್ಕಳ ಗಾತ್ರದ್ದೇ ಅಥವಾ ದೊಡ್ಡವರೊಡನೆ ಮಕ್ಕಳನ್ನು ಸೇರಿಸಿ ರೂಪಿಸಿದ್ದೂ ಲಭ್ಯ.) ವ್ಯಕ್ತಿಗೆ ಕಾಲುಚಾಚಿ ಕೂರುವ ಬಕೆಟಿನಷ್ಟೇ ತಗ್ಗುಳಿಸಿ ಪೂರ್ಣ ಮುಚ್ಚಿರುತ್ತದೆ. ಹೀಗೆ ನಡುವೆ ಗಾಳಿ ತುಂಬಿದ ಎರಡು ಪದರದ ರಚನೆ ಮತ್ತು ನೀರಿನಲ್ಲಿ ತೇಲುವ ಫೈಬರ್-ಗ್ಲಾಸಿನ ಗುಣ ಸೇರಿ ಕಯಾಕ್ ನೀರೊಳಗೆ ತೂರಿದರೂ ಮುಳುಗುವುದಿಲ್ಲ. ಕಯಾಕಿನ ಗಾತ್ರ ಹಾಕುವ ಹೇರಿನ ಅಂದಾಜಿನಲ್ಲೇ ರೂಪುಗೊಳ್ಳುವುದರಿಂದ ಇದರ ಅಂಚು ನೀರಿನಿಂದ ವಿಶೇಷ ಮೇಲಿರುವುದಿಲ್ಲ. ಹಾಗಾಗಿ ಇದು ಸಾಮಾನ್ಯವಾಗಿ ಮಗಚುವ ಭಯವೂ ಇಲ್ಲ. ಲಕ್ಷದ್ವೀಪದಲ್ಲಿ ದೊಡ್ಡ ಲಗೂನಿನೊಳಗೆ (ಸಮುದ್ರದ ಪೋಷಣೆಯಲ್ಲಿದ್ದೂ ಸ್ವತಂತ್ರ ಕೊಳದಂತೆ ಒದಗುವ ಜಲವಲಯ) ಕೇವಲ ಹುಟ್ಟು ಹಾಕುವ ಮೋಜನ್ನು ಧಾರಾಳ ಅನುಭವಿಸಿದ್ದು ನೆನಪಿತ್ತು. (ವಿವರಗಳಿಗೆ ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ನೋಡಿ) ಹಾಗಾಗಿ ಅಂತರ್ಜಾಲದಲ್ಲಿ ಕಯಾಕ್ ಬೇಟೆಗಿಳಿದೆ.
ವಡೋದರ, ಬೆಂಗಳೂರು, ಕೊಚಿನ್ ಮೊದಲಾದೆಡೆಗಳ ವರ್ಣಮಯ ಜಾಲತಾಣಗಳೇನೋ ಕಾಣಿಸಿದುವು. ಆದರೆ ಅವೆಲ್ಲ ನನ್ನ ತಿಳುವಳಿಕೆಯ ಮಿತಿಯಲ್ಲಿ ಅಷ್ಟೇನೂ ಗ್ರಾಹಕ ಸ್ನೇಹಿಯಾಗಿರಲಿಲ್ಲ. ವಡೋದರದ ಕಯಾಕ್ ತಯಾರಕ ತನ್ನ ಮಾಲಿನ ರಚನೆ, ಗುಣಗಳ ವಿಶೇಷ ಮಾಹಿತಿ ಕೊಡದಿದ್ದರೂ ಹಣಕಾಸಿನ ಖಡಕ್ ವಿವರ ಕೊಟ್ಟ. ಎರಡು ಪ್ರೌಢರನ್ನು ಹೊರುವ ಕಯಾಕ್ ಒಂದಕ್ಕೆ ರೂ ೪೫೦೦೦ದ ಅಂದಾಜು ನನಗೆ ಜೀರ್ಣವಾಗಲಿಲ್ಲ. ಖ್ಯಾತ ಕ್ರೀಡಾ ಸಾಮಗ್ರಿಗಳ ಸಂಸ್ಥೆ – ಡೆಕತ್ಲಾನ್ ತನ್ನ ಜಾಲತಾಣದಲ್ಲೇ ಸರಿ ಸುಮಾರು ಅಂಥದ್ದೇ ಕಯಾಕಿಗೆ ರೂ ೪೯೦೦೦+ ಎಂದೇ ಕಾಣಿಸಿತ್ತು. ಹಾಗಾಗಿ ಬೆಂಗಳೂರು, ಕೊಚಿನ್‍ಗಳ ಬಗ್ಗೆ ನಾನು ತುಸು ಉದಾಸೀನನಾಗಿಯೇ ಉಳಿದೆ.
ನನ್ನ ಫೇಸ್ ಬುಕ್ ಖಾತೆಯಲ್ಲಿರುವ ಅಸಂಖ್ಯ ಗೆಳೆತನಗಳಲ್ಲಿ `ಶ್ರೀಹರ್ಷ ಹೆಗಡೆ, ಉದಯವಾಣಿ’ಯೂ ಒಂದು. ಆ ವ್ಯಕ್ತಿಯನ್ನು ನೋಡಿದ, ವ್ಯವಹರಿಸಿದ ನೆನಪುಗಳು ನನಗೇನೂ ಇರಲಿಲ್ಲ. ಆತ ಬಹುಸಂಖ್ಯಾತ ಫೇಸ್‍ಬುಕ್ಕಿಗರಿಗಿಂತ ಭಿನ್ನವಾಗಿಯೂ ಆದರೆ ತೀವ್ರವಾಗಿಯೂ ತೊಡಗಿಕೊಂಡವ ಎಂದಷ್ಟೇ ನಾನು ಗುರುತಿಸಿದ್ದೆ. ತನ್ನ ಸಂಗ್ರಹದ ಅಸಂಖ್ಯ ಸಾಂಸ್ಕೃತಿಕ, ಪ್ರಾಕೃತಿಕ ಸುಂದರ ಫೋಟೋಗಳನ್ನು ನಿಯತವಾಗಿ ಹಾಕುತ್ತಿದ್ದರು. (ತನ್ನ ವಿಭಿನ್ನ ಭಾವಭಂಗಿಗಳಿರಲಿ, ಸ್ಪಷ್ಟ ಮುಖವನ್ನು ಎಂದೂ ಹಾಕಿಕೊಂಡವರಲ್ಲ. ಆತನೊಡನೆ ನನ್ನ ಒಂದೂವರೆ ದಿನದ ಒಡನಾಟ ಕೊನೆಗಂಡ ಮೇಲೆ ತಿಳಿಯಿತು, ನನ್ನ ಕ್ಯಾಮರಾಕ್ಕೆ ಆತ ಸಿಕ್ಕಲೇ ಇಲ್ಲ!!) ಕೆಲವಕ್ಕೆ ಭಾವಪೂರ್ಣ ಸಾಹಿತ್ಯ ಜತೆ ಕೊಡುತ್ತಿತ್ತು, ಹೆಚ್ಚಿನವಕ್ಕೆ `ಹಣೆಯ ಮೇಲೆ ಹೆಸರ ಹಂಗು ಬೇಕಿಲ್ಲದ ಬರಿ ಚಿತ್ರಗಳು’ ಎಂಬುದೇ ಶೀರ್ಷಿಕೆ! ಒಳ್ಳೊಳ್ಳೆ ಸಿನಿಮಾ ಹಾಡುಗಳ ಸೇತು, ಒಳ್ಳೇ ಪುಸ್ತಕಗಳ ಪರಿಚಯಾತ್ಮಕ ವಿಮರ್ಶೆ, ಚಾಣಕ್ಯನೀತಿಯ ಕನ್ನಡಾನುವಾದದ ಧಾರಾವಾಹಿ, ಆಗೀಗ ರಾಜಕೀಯ ವಿಚಾರಗಳ ಗಂಭೀರ ಚರ್ಚೆ ಎಂದೆಲ್ಲ ತೊಡಗಿಕೊಂಡು, ಸ್ವಪರಿಚಯಾತ್ಮಕ ಚಿತ್ರದಲ್ಲಿ ಒಂದು ಬಾಲಮುಖವನ್ನಷ್ಟೇ ಕಾಣಿಸುತ್ತಿದ್ದ ಹೆಸರು ಶ್ರೀಹರ್ಷ ಹೆಗಡೆ. ನಾನು ಆಗೀಗ ಅವರ ಚಿತ್ರಗಳಿಗೆ ನನಗೆ ಸ್ಫುರಿಸಿದ ಹೆಸರು ಕೊಡುವುದಿತ್ತು. ಅವರ ಪುಸ್ತಕ ವಿಮರ್ಶೆಗಳನ್ನು ಸ್ವತಂತ್ರ ಜಾಲತಾಣ ಮಾಡಿ ಸಂಕಲಿಸಿ ಎಂದು ಬಿಟ್ಟಿ ಶಿಫಾರಸು ಮಾಡಿದ್ದೂ ಇತ್ತು. ಅದೊಂದು ದಿನ ನಾನು ತಂದೆಯ ಬಾನಬಯಲಾಟ ಗ್ರಹಣ ಪುಸ್ತಕದ ಪ್ರಚಾರ ಸಾಹಿತ್ಯ ಮುಖಪುಟಕ್ಕೇರಿಸಿದೆ. ಶ್ರೀಹರ್ಷ ಹೆಗಡೆ ತನಗೆ ಒಂದು ನೂರು ಪ್ರತಿ ಬೇಕೆಂದು ಪ್ರತಿಕ್ರಿಯೆ ಹಾಕಿದರು. “ಸರಿ, ಎಲ್ಲಿಗೆ, ಹೇಗೆ ಕಳಿಸಲಿ” ನಾನು `ಮೆಸೇಜಿ’ನಲ್ಲಿ ವಿಚಾರಿಸಿದೆ. “ಕಳಿಸಬೇಡಿ, ಒಂದು ವಾರದೊಳಗೆ ನಾನೇ ಕೇರಳದಿಂದ ಸ್ವಂತ ಕಾರಿನಲ್ಲಿ ಬರುವಾಗ, ನಗದು ಕೊಟ್ಟು ಒಯ್ಯುತ್ತೇನೆ” ಎಂಬ ಉತ್ತರ ಚಾಟಿನಲ್ಲೇ ಬಂತು. ಕೇರಳ ಎಂದು ನೋಡಿದ ಕೂಡಲೇ ನನ್ನ ತಲೆಯೊಳಗಿನ `ಕಯಾಕ್-ಪ್ರಜ್ಞೆ’ ಒಮ್ಮೆಗೆ ಜಾಗೃತವಾಯ್ತು. ಚಾಟಿನಲ್ಲಿ ಬಹು ವಿವರಗಳಲ್ಲಿ ವಿಚಾರಿಕೊಂಡೆ. ಶ್ರೀಹರ್ಷ ಹೆಗಡೆ ನನಗೆ ಅಯಾಚಿತವಾಗಿ ರಾಯಭಾರಿಯಾಗಿ ಒದಗಿದರು.
ಶ್ರೀಹರ್ಷ ಕೊಚಿನ್ ಸಮೀಪದ ಕೊಡಂಗಲ್ಲೂರಿನಲ್ಲಿದ್ದರು. ಅವರು ಅಲ್ಲಿನ ಉಪನಗರವಾದ ಅರೂರಿನಲ್ಲಿದ್ದ ಸಮುದ್ರ ಶಿಪ್ ಯಾರ್ಡ್ (ಪ್ರೈ) ಲಿಮಿಟೆಡ್ ಅವರೊಡನೆ ನನ್ನ ಅಗತ್ಯದ ಕುರಿತು ಮಾತಾಡಿ ನನ್ನ ಆಸೆಯ ಬಳ್ಳಿ ಬಲವಾಗಿ ಪಲ್ಲವಿಸುವಂತೆ ಮಾಡಿದರು. ಬೆಲೆ ಕೇವಲ ಇಪ್ಪತ್ತೆರಡು ಸಾವಿರ (+ಕರಗಳು) ಎಂದ ಮೇಲೆ ಖರೀದಿ ನಿಶ್ಚೈಸಿದೆ. ಪ್ರಾಥಮಿಕ ಸಂಪರ್ಕ ಸಾಧಿಸಿಕೊಟ್ಟದ್ದಲ್ಲದೆ, ಇನ್ನೆರಡು ದಿನಗಳೊಳಗೆ ಬಂದರೆ ತಾನೇ ಓಡಾಡಿಸಿ ಕೆಲಸವನ್ನು ಮಾಡಿಸಿಯೂ ಕೊಡಬಲ್ಲೆ ಎಂದು ಶ್ರೀಹರ್ಷ ಹೇಳಿದ ಮೇಲಂತೂ ತಡೆಯಲಿಲ್ಲ. ದೇವಕಿಯನ್ನು ಜೊತೆ ಮಾಡಿಕೊಂಡು, ಮಾರಣೇ ದಿನ ಬೆಳಗ್ಗಿನ ಪರಶುರಾಮ ಎಕ್ಸ್‍ಪ್ರೆಸ್ ರೈಲೇರಿಯೇ ಬಿಟ್ಟೆ.
“ಇರಿಙ್ಞಾಲಕುಡಕ್ಕೆ ಟಿಕೇಟ್ ಮಾಡಿಸಿ. ಅದು ಹತ್ತಿರಾಗುತ್ತಿದ್ದಂತೆ ನನಗೆ ಕರೆ ಕೊಡಿ. ಕಡಂಗಲ್ಲೂರಿನಿಂದ ಬಂದು ಎದುರುಗೊಳ್ಳುವೆ” ಎಂದಿದ್ದರು ಶ್ರೀಹರ್ಷ. ದಾರಿಯಲ್ಲಿ ಸಿಗುವ ಶೋರನೂರು ದೊಡ್ಡ ಕವಲೂರು – ರೈಲ್ವೇ ಭಾಷೆಯಲ್ಲಿ ಜಂಕ್ಷನ್ನು. ಅಲ್ಲಿ ರೈಲು ಸುಮಾರು ಒಂದು ಗಂಟೆ ನಿಂತು ನಮ್ಮ ಸಮಯದ ಅಂದಾಜು, ತಾಳ್ಮೆ ಹಾಳು ಮಾಡಿತ್ತು. ಅಲ್ಲೂ ಮುಂದೆ ನಮ್ಮ ಇಳಿಯೂರು – ಇರಿಙ್ಞಾಲಕುಡದಲ್ಲಿ ಶ್ರೀಹರ್ಷರನ್ನು ಕಾಯುವಾಗಲೂ ದೊಡ್ಡ ಸಂಖ್ಯೆಯಲ್ಲಿ ಬೀಡುಬಿಟ್ಟ ವಲಸೆ ಹಕ್ಕಿಗಳ ಸಂಸಾರ ತಾಪತ್ರಯದ ಕತೆ ಕೇಳಿದ್ದಷ್ಟೇ ನಮಗಾದ ಲಾಭ.
ನಮ್ಮ ವಿಳಂಬದ ಕತೆ ರೈಲಿಳಿದ ಮೇಲೂ ಮುಂದುವರಿಯಿತು. ಯೋಜನೆಯಂತೇ ನಾನು ದೂರವಾಣಿಸಿದ್ದೆ. ಸ್ಪಂದಿಸುವಲ್ಲಿ ಶ್ರೀಹರ್ಷ ಯಶಸ್ವಿಯಾಗಿದ್ದರೆ ಅವರು ಗಂಟೆ ಮೊದಲೇ ಬಂದು ರೈಲ್ವೇ ನಿಲ್ದಾಣದಲ್ಲಿ ನಮ್ಮನ್ನು ಕಾದು ನವೆಯಬೇಕಿತ್ತು. ಆದರೆ ಅವರ ಕಾರು ಕೈಕೊಟ್ಟಿತ್ತು. ಮತ್ತವರು ಪರ್ಯಾಯ ವಾಹನ ಹೊಂದಿಸಿ ಬರುವಾಗ ನಾವು ಇರಿಙ್ಞಾಲಕುಡ ನಿಲ್ದಾಣದ ವಲಸೆ ಹಕ್ಕಿಗಳ ಹಿಕ್ಕೆ ಸ್ನಾನ ತಪ್ಪಿಸುವುದರಲ್ಲಿ ಪ್ರಾವೀಣ್ಯ ಗಳಿಸಿದ್ದೆವು.
ವಾಸ್ತವದಲ್ಲಿ ನಮ್ಮ ಕೆಲಸವಿದ್ದದ್ದು ಅರೂರಿನಲ್ಲಿ. ಅಂದರೆ ರೈಲಿನಲ್ಲೇ ಎರ್ನಾಕುಲಂ ತಲಪಿಯೂ ದಕ್ಷಿಣಕ್ಕೆ ಪಯಣಿಸಬೇಕಾಗುತ್ತಿದ್ದ ಸ್ಥಳ. ಆದರೆ ಶ್ರೀಹರ್ಷ ವೃತ್ತಿ ಅಗತ್ಯಕ್ಕಾಗಿ ಹೋಟೆಲ್ ಕೊಠಡಿ ಹಿಡಿದು ನಿಂತಿದ್ದದ್ದು ಕಡಂಗಲ್ಲೂರಿನಲ್ಲಿ. ಇದಕ್ಕೆ ಸಮೀಪದ ರೈಲ್ವೇ ನಿಲ್ದಾಣವೆಂದು ಇರಿಙ್ಞಾಲಕುಡ. ಹೀಗಾಗಿ ಒಟ್ಟಾರೆ ೪೦-೫೦ ಕಿಮೀ ರಸ್ತೆ ಪಯಣ ನಮ್ಮೆದುರಿತ್ತು. ಅಖಿಲ ಭಾರತ ಮಟ್ಟದಲ್ಲಿ ನಡೆಯಬೇಕಾದ ಹೆದ್ದಾರಿಗಳ ಪರಿಷ್ಕರಣ ರಸ್ತೆ-ಕ್ರಾಂತಿ (ಚತುಷ್ಪಥೀಕರಣ) ಕರ್ನಾಟಕದಲ್ಲೇನೋ ಕುಂಟುತ್ತ, ಎಡವುತ್ತ ನಡೆದಿದೆ. ಉಪಯುಕ್ತತೆ ಇದ್ದೋ ಇಲ್ಲದೆಯೋ ಸೊಕ್ಕಿದ ಹೆಬ್ಬಾವಿನಂತೆ ಸಾಮಾಜಿಕ ಸ್ಥಿತ್ಯಂತರವನ್ನು ಹೇರುತ್ತ ನಾಲ್ಕೋ ಆರೋ ಜಾಡಿನಗಲಕ್ಕೆ ಹರಿಯುವ ಕೆಲಸಗಳು ನಡೆದೇ ಇವೆ. ಆದರೆ ಅದೇ ಆಶಯಗಳು ಕೇರಳದೊಳಗೆ ಬಳಲಿದ ಕೇರೇ ಹಾವಿನಂತಾಗಿರುವುದು ಆಶ್ಚರ್ಯ. ಇಲ್ಲಿ ಹೆದ್ದಾರಿಗೆ, ಕಛೇರಿ ದಾಖಲೆಗಳಲ್ಲಿ, ಹಳೇ ಕಿಲೋ ಕಲ್ಲಿನ ಮೇಲಿನ ಬರಹದಲ್ಲಿ ಮಾತ್ರ ಮಾನ್ಯತೆ. ಇರುವುದೊಂದೇ ರಸ್ತೆ; ಅಗಲವೂ ಇಲ್ಲ, ಡಾಮರಂಚಿನ ಆಚೆ ತುಸು ದೃಢನೆಲದ ಅವಕಾಶವೂ ಇಲ್ಲದ ಅವಸ್ಥೆ. ನಮ್ಮಲ್ಲಿ ಹೊಂಡ ಮುಚ್ಚದಿದ್ದರೂ ಹೆಜ್ಜೆಗೊಂದು ಸಿಗುವ ವೇಗತಡೆಗಳು, ನಗರಗಳ ವಲಯದ ವಿಸ್ತಾರದ ಬಳಸುಮಾರ್ಗಗಳ ಯೋಗವೂ ಕೇರಳದಲ್ಲಿ ಅಲಭ್ಯ. ಪಾದಚಾರಿಗಳು, ನಿತ್ಯ ಓಡಾಟದ ಸಣ್ಣಪುಟ್ಟ ವಾಹನಗಳು ಜೀವವನ್ನು ಅಂಗೈಯ್ಯಲ್ಲಿಟ್ಟುಕೊಂಡು ಹಿರಿ ವಾಹನಗಳ, ಅತಿವೇಗಿಗಳ ಕೃಪೆಯಲ್ಲಿರುವುದು ಅನಿವಾರ್ಯ. ಸಾಲದ್ದಕ್ಕೆ ನಮ್ಮ ಉಡುಪಿ ಮಠಗಳಂತೆ ಕೇರಳದಲ್ಲೂ ಅಂದೇ (ತಿಂಗಳು ತಡವಾದ) ಶ್ರೀಕೃಷ್ಣ ಜನ್ಮಾಷ್ಠಮಿ ನಡೆಯುವುದಿತ್ತು.
ಆ ಪ್ರಯುಕ್ತದ ಮೆರವಣಿಗೆಗಳೂ ಹೆದ್ದಾರಿಯನ್ನೇ ಆಶ್ರಯಿಸುವುದರಿಂದ ನಾವು ಅವಸರಿಸಿದೆವು. ಕಡಂಗಲ್ಲೂರು ದಾರಿಯಲ್ಲಿ ಸಿಕ್ಕ ಹೋಟೆಲಿನಲ್ಲಿ ತಡವಾದ ಊಟ ಮುಗಿಸಿದೆವು. ಶ್ರೀಹರ್ಷರ ಕೊಠಡಿಗೆ ಔಪಚಾರಿಕ ಫ್ರೆಷ್ ಆಗುವುದಕ್ಕಷ್ಟೇ ನುಗ್ಗಿ, ಹೊರಟೆವು. ಎರ್ನಾಕುಲಂ ವಲಯ, ಕೊಚಿನ್ ಊರುಗಳನ್ನು ಅವಸರವಸರವಾಗಿಯೇ ದಾಟಿ ಅರೂರಿನ ದೋಣಿ ತಯಾರಿಯ ಕಾರ್ಖಾನೆ – ಸಮುದ್ರ ಶಿಪ್ ಯಾರ್ಡ್, ತಲಪುವಾಗ ಅವರ ದಿನದ ವಹಿವಾಟು ಮುಚ್ಚುವ ಅವಧಿಗೆ ಇನ್ನೇನು ಮಿನಿಟುಗಳ ಅಂತರವಷ್ಟೇ ಉಳಿದಿತ್ತು!
ದೋಣಿಯ ಮಾದರಿಗಳನ್ನು ನೋಡಿ, ನಮ್ಮ ಅಗತ್ಯಗಳನ್ನು ತಿಳಿಸಿ, ಬೆಲೆಯಲ್ಲಿ ಚೌಕಾಶಿ ಮಾಡಿ, ಮುಂಗಡ ಸಹಿತ ಆದೇಶ ಸಲ್ಲಿಸಿ ಮುಗಿಸುವಾಗ ಮುಸ್ಸಂಜೆಯಾಗಿತ್ತು.
ಶ್ರೀಹರ್ಷ “ಸಮಯ ಉಳಿದರೆ…” ನಮಗೆ ತೋರಿಸಲೆಂದು ಎರಡು ಸ್ಥಳಗಳ – ಒಂದು ಮಸೀದಿ ಮತ್ತೊಂದು ಮಂದಿರ, ಭೇಟಿ ಅಂದಾಜಿಸಿದ್ದರು. ಮಿತಾಲದ (ಕಡಂಗಲ್ಲೂರಿನ ಭಾಗ) ಚೇರಮನ ಮಸೀದಿ ಭಾರತದಲ್ಲಿ ಸರ್ವಪ್ರಥಮದ್ದು. ಕೇರಳದ ಚೇರ ಅರಸೊತ್ತಿಗೆಯ (ಚೇರ್ಮನ್ ?) ಚೇರಮನ ಪೆರುಮಾಳ – ಪ್ರವಾದಿ ಮಹಮ್ಮದ್ ಪೈಗಂಬರರ ಸಮಕಾಲೀನ. ಆತನಿಗೆ ಅರಬರೊಡನೆ ವ್ಯಾಪಾರೀ ಸಂಬಂಧಗಳು ಚೆನ್ನಾಗಿದ್ದವು. ಅದರ ಫಲವಾಗಿಆತ ಒಮ್ಮೆ ಅರಬ್ ದೇಶಕ್ಕೆ ಹೋಗಿದ್ದನಂತೆ. ಅಲ್ಲಿ ಇಸ್ಲಾಂ ಧರ್ಮದಿಂದ ಪ್ರಭಾವಿತನಾಗಿ ಪೂರ್ಣ ಸ್ವಪ್ರೇರಣೆಯಿಂದ ತಾಜುದ್ದೀನ್ ಆದನಂತೆ. ಅನಂತರ ಇಲ್ಲಿ ತನ್ನಾಳ್ವಿಕೆಗೊಳಪಟ್ಟ ಕೆಲವು ಭಗವತೀ ಮಂದಿರಗಳನ್ನು ಮಸೀದಿಯಾಗಿ ಪರಿವರ್ತಿಸಿದ. ಅವುಗಳಲ್ಲಿ (ಕ್ರಿ.ಶ. ೬೨೯) ಮೊದಲನೆಯದು ಮಿತಾಲದ್ದು. ಇದು ಇಂದಿಗೂ ಸ್ವಸ್ಥ ಇತಿಹಾಸದ ಭಾಗವಾಗಿಯೇ ಪ್ರಚಾರದಲ್ಲಿದೆ. ಮತ್ತು ನಿರ್ಭಯವಾಗಿ ಸಾರ್ವಜನಿಕ ಸಂದರ್ಶನಕ್ಕೆ (ಇತರ ಮತೀಯರು, ಮಹಿಳೆಯರಿಗೂ) ಮುಕ್ತವಾಗಿಯೂ ಇದೆ. ಸನಿಹದಲ್ಲೇ ಸುಮಾರು ಅಷ್ಟೇ ಪ್ರಾಚೀನದ ಭಗವತೀ ಮಂದಿರವೊಂದಕ್ಕೂ ನಾವು ಭೇಟಿ ಕೊಟ್ಟಿದ್ದೆವು. ಈ ಮಂದಿರ ಕೇರಳದ (ಗುರುವಾಯೂರು, ಶಬರಿಮಲೈ ಸೇರಿದಂತೆ) ಕೆಲವು ಕಡು ಸಂಪ್ರದಾಯವಾದೀ ದೇವಾಲಯಗಳಂತೆ ಸಾರ್ವಜನಿಕರಿಗೆ ವಿಧಿ ನಿಷೇಧಗಳನ್ನು ಹೇರುವುದಿಲ್ಲವಂತೆ.
(ಹಿಂದೂಗಳೇ ಆಗಬೇಕು, ಗಂಡಸರು ಅಂಗಿ ಬನಿಯನ್ನು ತೆಗೆಯಬೇಕು, ಹೆಂಗಸರಿಗೆ ಸೀರೆ ರವಿಕೆ ಕಡ್ಡಾಯ ಇತ್ಯಾದಿ). ಆದರೆ ಅರೂರಿನಿಂದ ಕಡಂಗಲ್ಲೂರಿಗೆ ಬರುವ ದಾರಿಯಲ್ಲಿ ಅಷ್ಠಮಿ ಮೆರವಣಿಗೆಯ ದರ್ಶನ ಭಾಗ್ಯ ನಮಗೆ ಕಡ್ಡಾಯವಾಯ್ತು. ಹೀಗಾಗಿ ಮಸೀದಿ ಮತ್ತು ಭಗವತೀ ಮಂದಿರದ ಆಯ್ಕೆಯ ದರ್ಶನಗಳಿಗೆ ನಾವು ವೇಳೆ ಮೀರಿದ್ದೆವು; ಎರಡೂ ಕೇಂದ್ರಗಳಲ್ಲಿ `ಬಾಗಿಲೊಳು ಕೈಮುಗಿ’ಯುವುದಷ್ಟೇ ಸಾಧ್ಯವಾಯ್ತು. ನಮ್ಮ ದೇವತ್ತಿಂಡೆ ನಾಡಿನಲ್ಲಿ ನಾವು ನಿಜವಾಗಿ ಉದ್ದೇಶಿಸಿದ್ದ ಪುಣ್ಯಕಾರ್ಯದ ಫಲಾಫಲಗಳ ಮುಂದಿನ ಕಥನಕ್ಕೆ ಇಷ್ಟು ಪೀಠಿಕೆ ಸಾಕೆಂದು ಭಾವಿಸುತ್ತೇನೆ. ಸಾಗರಕ್ಕೆ ಸವಾರರೊಡನೆ ಎರಡು ಕಂತುಗಳಲ್ಲಿ ಸಾಗಿದ ನನ್ನ ದೋಣಿ, ಸೇರಿದ ದೂರತೀರದ ಕಥನಕ್ಕೆ ಮುಂದಿನ ಕಂತು ಮೀಸಲು. ನಿಮ್ಮ ತೇಲು ಸಾಧನಗಳನ್ನು, ಯುಕ್ತ ಹುಟ್ಟು ಚುಕ್ಕಾಣಿಗಳ ನಿಯಂತ್ರಣದಲ್ಲಿ ಪ್ರತಿಕ್ರಿಯಾ ಕೊಳದೊಳಗೆ ತೇಲಿಬಿಡುತ್ತೀರಲ್ಲಾ…?
(ಮುಂದುವರಿಯಲಿದೆ)
ಶುಭ ಮುಂಜಾನೆ!
ಸದಾ ನೆಲದಲ್ಲೇ ಸಾಗುತ್ತಿದ್ದ ನನ್ನ ಸವಾರಿಯನ್ನು ನೀರಿಗಿಳಿಸಿಬಿಟ್ಟಿರಿ.
ಕಯಾಕ್ ಗಳ ಬಗ್ಗೆ ಆಸಕ್ತಿ ಹುಟ್ಟುತ್ತಾ ಇದೆ.
ಮಸೀದಿಗಳಾದ ಭಗವತೀ ಮಂದಿರ ಗಳಲ್ಲಿ ದೀಪಬೆಳಗುವ ಕ್ರಮ ಇನ್ನೂ ಇದೆಯೆ?
ಶ್ರೀ ಹರ್ಷ ಹೆಗಡೆ ಅವರ ಬಹುಮುಖ ಆಸಕ್ತಿಗಳ ಪರಿಚಯವೂ ಆಯಿತು.
ಮುಂದಿನ ಕಂತಿಗೆ ಕಾಯುತ್ತಾ ಇರುವೆ.
ಇಂತೀ
ಕೇಸರಿ ಪೆಜತ್ತಾಯ
ಪ್ರೀತಿಯ ಅಶೋಕವರ್ಧನರಿಗೆ ನಮಸ್ಕಾರಗಳು. ನಿಮ್ಮ ಕಯಾಕ್ ಜಲಚಾರಣ ಕಥನಶ್ರವಣ ಕುತೂಹಲಿ ಆನ್. ಮುಂದಿನ ಕಂತಿನಲ್ಲಿ ವಿಸ್ತಾರದಿ ವರ್ಣಿಪುದು!
ನಾನು ಚಿಕ್ಕಂದಿನಿಂದ ಕನಸಿ ಆಶಿಸಿದ ಸಮುದ್ರ ದॐಇಯಾನವನ್ನು ನೀವು ಸಾಧಿಸಿ ಬಿಟ್ಟಿರಿ. ನಮ್ಮಜ್ಜನಿಗೆ ದುಂಬಾಲು ಬಿದ್ದಿದ್ದೆ, ನನ್ನನ್ನು ಕರೆದೊಯ್ವಂತೆ. ಈಗ ಬೆನ್ನು ಮುರಿದ ಮೇಲೆ ಯಾರು ಒಯ್ಯುವರು ?
ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಜಲಕಥನ ಓದಿ ಖುಷಿಯಾಯಿತು. ಜಲಯಾನದ ಅನುಭವ ಕಥನಕ್ಕಾಗಿ ಕಾಯುತ್ತಿರುವೆ. ಆದಷ್ಟು ಬೇಗ ಕಯಾಕನ್ನು ಬ್ಲಾಗಿಗಿಳಿಸಿ 🙂
ಪ್ರಸ್ತುತ ಲೇಖನದಲ್ಲಿ ನಾನು ಉದ್ಧರಿಸಿದ ಮಾತುಗಳ ಮೂಲವಾದ ಗೆಳೆಯ ಶ್ರೀಹರ್ಷ ಹೆಗಡೆಯವರೇ ಎರಡು ವರ್ಷಗಳ ಹಿಂದೆ ಕಡಂಗಲ್ಲೂರು ಮಸೀದಿ ಅಥವಾ ಭಾರತಕ್ಕೆ ಮೊದಲು ಇಸ್ಲಾಂ ಪ್ರವೇಶಿಸಿದ ಬಗ್ಗೆ ಬರೆದ ಲೇಖನವನ್ನು ಅವಶ್ಯ ಇಲ್ಲಿ ಓದಬಹುದು. http://marethamaathugalu.blogspot.in/2012/09/blog-post_5200.html