(ಕೇದಾರ ಇಪ್ಪತ್ತೆಂಟು ವರ್ಷಗಳ ಮೇಲೆ! – ಉತ್ತರಾರ್ಧ)

ಸೆರ್ಸಿಯಿಂದ ಬದರಿಗೆ ಹೋಗುವ ವಾಹನಗಳ ಸಾಂಪ್ರದಾಯಿಕ ದಾರಿ ಹೆದ್ದಾರಿಗಳಲ್ಲೇ ಇತ್ತು. ಅಂದರೆ ನಾವು ಬಂದಿದ್ದ ಹೆದ್ದಾರಿ ೧೦೭ರಲ್ಲಿ ರುದ್ರಪ್ರಯಾಗಕ್ಕೆ ಮರಳಿ, ಡೆಹ್ರಾಡೂನಿನಿಂದ ಬಂದಿದ್ದ ಹೆದ್ದಾರಿ ೭ರಲ್ಲಿ ಎಡ ತಿರುವು ತೆಗೆದುಕೊಂಡು, ಕರ್ಣಪ್ರಯಾಗ್ ಎಂದೆಲ್ಲ ಮುಂದುವರಿಯಬೇಕಿತ್ತು. ಅಲ್ಲಿನ ದಾರಿ-ದುರವಸ್ಥೆಯಲ್ಲಿ ನಮಗೆ ‘ಹೆದ್ದಾರಿ’ ಎನ್ನುವ ವಿಶೇಷಣವೇ ತಮಾಷೆಯಾಗಿ ಕೇಳುತ್ತಿತ್ತು. ಸಾಲದ್ದಕ್ಕೆ ನಕ್ಷೆಯಲ್ಲಿ ಅದೊಂದು ಬಳಸಂಬಟ್ಟೆ ಎಂದೂ ಕಾಣಿಸಿತು. ಬದಲಿಗೆ, ರುದ್ರಪ್ರಯಾಗದ ಅರ್ಧ ದಾರಿಯಲ್ಲೇ ಸಿಗುವ ಊಖಿಮಠದ ಎಡದಾರಿ ಹಿಡಿದು, ಕರ್ಣ ಪ್ರಯಾಗದಿಂದಲೂ ಮುಂದಿನ ಚಮೋಲಿಗೆ ಹೋಗುತ್ತಿದ್ದ ದಾರಿ ಉತ್ತಮ ಒಳದಾರಿ ಎಂದೇ ಅನಿಸಿತು. “ಏನಲ್ಲದಿದ್ದರೂ ಅದರ ಡಾಮರ್ ಒಳ್ಳೇದಿದೆ” ಎಂದೇ ಹಿಂದೆ ಹೋದವರ ಅನುಭವದ ನುಡಿ ಸೇರಿಕೊಂಡಿತು. ಕೊನೆಯಲ್ಲಿ ಕಿಮೀ ಲೆಕ್ಕದ ಉಳಿತಾಯ ನಿಜವಾದರೂ (೧೩ ಕಿಮೀ!) ತುಂಬ ಸಪುರ ಮತ್ತು ವಿಪರೀತ ತಿರುವುಮುರುವುಗಳಿದ್ದುದರಿಂದ ಸತಾವಣೆಯ ಅಂಶವೇ ಹೆಚ್ಚು.ಈ ವಲಯದ ‘ಹೆದ್ದಾರಿ’ಗಳ ನದೀಪಾತ್ರೆ ಅನುಸರಿಸುವ ವಿಧಾನ, ಊಖಿಮಠದ ಒಳದಾರಿಯಲ್ಲಿರಲಿಲ್ಲ. ಹಾಗಾಗಿ ಇಲ್ಲಿ ನಿಜ ‘ಕೇದಾರನಾಥ ವನ್ಯ ಸಂರಕ್ಷಣಾಧಾಮ’ವನ್ನು ಹೊಕ್ಕು ಹೊರಟ ಲಾಭ ನಮಗೆ ದಕ್ಕಿತು. ಅದರ ನಡುವಲ್ಲೆಲ್ಲೋ – ಪೋಥಿಭಾಶಾ, ಎನ್ನುವ ಹಳ್ಳಿಯ ದೇವಲೋಕ ಎನ್ನುವ ಹೋಟೆಲಿನಲ್ಲಿ ಮಧ್ಯಾಹ್ನದ ಊಟಕ್ಕೆಂದು ನಿಂತಿದ್ದೆವು. ಅದು ಬಹುತೇಕ ‘ಏಕವ್ಯಕ್ತಿ’ ಸಾಹಸ. ಆತನಿಗೆ ಸಹಾಯ ಮತ್ತು ನಮ್ಮ ಅವಸರಕ್ಕೆ ಅನುಕೂಲ ಎಂದು ನಮ್ಮವರೂ ಕೆಲವರು ಅಡುಗೆಯಲ್ಲಿ ಸಹಕರಿಸಿದರು. ಆ ಸಣ್ಣ ಬಿಡುವಿನಲ್ಲಿ ನಾನು, ಹರಿಯೂ ಅಲ್ಲೇ ಮೇಲಿನ ಕಾಡುದಾರಿಯನ್ನು ಸ್ವಲ್ಪ ದೂರ ಅನುಸರಿಸಿ ವನಧಾಮ ಕಂಡದ್ದು ಹೆಚ್ಚಿನ ಲಾಭ. ಊಟವಾಗಿ ಮುಂದೆ ಸಾಗಿದಂತೆ, ಹಲವೆಡೆಗಳಲ್ಲಿ ‘ಪ್ರಕೃತಿ ಶಿಬಿರ’ಗಳನ್ನೂ ಕೆಲವು ಬೋರ್ಡುಗಳನ್ನೂ ಕಂಡೆವು. ಕಥುರ್ ಎಂಬಲ್ಲಿ ಒಂದು ಶ್ರೇಣಿಯ ತೆರೆದ ಶಿಖರವಲಯವಂತೂ ನಮ್ಮ ಇಡೀ ತಂಡವನ್ನೇ ನಿಂತು, ನೋಡಿ, ಕನಿಷ್ಠ ಒಂದು ಚಾ ಕುಡಿಯುವ ಹೊತ್ತಿಗಾದರೂ ವಾತಾವರಣವನ್ನು ಅನುಭವಿಸಿ ಹೋಗುವಷ್ಟು ಆಕರ್ಶಿಸಿತ್ತು. ಮೊತ್ತದಲ್ಲಿ ನಮ್ಮ ಮಾರ್ಗಕ್ರಮಣ ಯೋಚಿಸಿದ್ದಕ್ಕಿಂತಲೂ ನಿಧಾನವೇ ಆಯ್ತು.

ಗಾಯದ ಮೇಲೆ ಬರೆಯಂತೆ……

ಅದೊಂದು ಪುಟ್ಟ ಹಳ್ಳಿಯನ್ನು ಹೊಕ್ಕು ಹೊರಡುವ ಇಳಿಜಾರಿನ ಸನ್ನಿವೇಶ. ಇಲ್ಲೆಲ್ಲ ವಾಹನ ನಿಲುಗಡೆಗಳು ಬಹುತೇಕ ಮಾರ್ಗಗಳಲ್ಲೇ ಮಾಡುವ ಅನಿವಾರ್ಯತೆ ಇದೆ. ಹಾಗೇ ಅಲ್ಲಿ ಎಡ ಪಕ್ಕದಲ್ಲಿ ನಿಂತಿದ್ದ ಕಾರೊಂದನ್ನು ನಿವಾರಿಸಿ ನಮ್ಮ ಬಸ್ ಮುಂದುವರಿಯುವಾಗ ಎದುರಿನಿಂದ ಬಂದೊಂದು ಕಾರಿಗೆ ಸಣ್ಣದಾಗಿ ಒರೆಸಿತ್ತು. ಥಾಪಾ ಕೂಡಲೇ ಬಸ್ಸಿಳಿದು ವಿಚಾರಿಸಿಕೊಳ್ಳಲು ಮುಂದಾದ. ಆದರೆ ಕಾರಿನಾತ, ಮಾತಿಗೆ ಸಿಗದೇ ಮುಂದುವರಿದಿದ್ದ. ಮತ್ತೆ ತುಸು ಹೊತ್ತಿನಲ್ಲಿ ನಾವು ನಿಶ್ಚಿಂತರಾಗಿ ಚಮೋಲಿಯಲ್ಲಿ ಹೆದ್ದಾರಿ ತಲಪಿದಾಗ, ಬಸ್ಸನ್ನು ಪೊಲಿಸ್ ತಡೆದರು. ಒರೆಸಿಕೊಂಡ ಕಾರಿನಾತ ಸ್ಥಳೀಯ ಮತ್ತು ತುಸು ಪ್ರಭಾವಿ ಇದ್ದಿರಬೇಕು. ಚರವಾಣಿಯಲ್ಲಿ ದೂರು ಕೊಟ್ಟು, ಕಾರು ತಿರುಗಿಸಿಕೊಂಡು ನಮ್ಮನ್ನು ಹಿಂಬಾಲಿಸಿಯೇ ಬಂದಿದ್ದ. ಥಾಪಾ ನಮ್ಮನ್ನು ವ್ಯಾಜ್ಯದ ಗೋಠಾಳೆಗೇನೂ ಸಿಕ್ಕಿಸದೇ (ಕಾರಿನವನಿಗೆ ತುಸು ನಷ್ಟಭರ್ತಿ ಕೊಟ್ಟು) ಸುಧಾರಿಸಿಕೊಂಡ. ಅಷ್ಟು ಸಾಲದೆಂಬಂತೆ, ಅಲ್ಲೇ ನಮ್ಮ ಚಕ್ರವೊಂದು ನಿಟ್ಟುಸಿರು ಬಿಟ್ಟಿತ್ತು. ಧಾಪಾ ಅದರಲ್ಲೂ ಪೂರ್ಣಾಂಕ ಪಾಸ್! ನಮ್ಮ ಯಾರ ಸಹಾಯ ಪಡೆಯದೇ ಚುರುಕಾಗಿಯೇ ಬದಲಿ ಚಕ್ರ ಹಾಕಿ ಮುಂದುವರಿದ. ಮೊದಲೇ ಕೊರತೆಯಾದ ಸಮಯಕ್ಕೆ, ಇವೂ ಸೇರಿ, ಕತ್ತಲಾಯ್ತು. ಪಿಪಲ್ ಕೋಟಿ ಎಂಬ ಸಾಕಷ್ಟು ದೊಡ್ಡ ಪೇಟೆಗೆ ನಮ್ಮ ದಿನದ ಓಟ ಮುಗಿಸಿದೆವು.

ಪಿಪಲ್ ಕೋಟಿಯಲ್ಲಿ ನಾವು ಹಿಡಿದ ಹೋಟೆಲಿಗೆ ಖಾನಾವಳಿ ಜತೆಗಿರಲಿಲ್ಲ. ಸಹಜವಾಗಿ ನಾವು ರಾತ್ರಿ ಊಟಕ್ಕೆ ಸನಿಹದಲ್ಲೇ ಇದ್ದ ಜನಪ್ರಿಯ ಹೋಟೆಲಿಗೆ ಹೋಗಿದ್ದೆವು. ಅಲ್ಲಿ ಊಟ ಚೆನ್ನಾಗಿತ್ತು. ಜತೆಗೇ ಹೋಟೆಲ್ ಎದುರಿನ ಸಾರ್ವಜನಿಕ ವಾಹನ ತಂಗುದಾಣದಲ್ಲಿ, ಅನಿರೀಕ್ಷಿತವಾಗಿ ರಾಮಲೀಲಾದ (ಘಡವಾಲೀ ಹಿಂದಿಯಲ್ಲಿದ್ದಿರಬೇಕು) ಸ್ಯಾಂಪಲ್ಲೂ ನೋಡ ಸಿಕ್ಕಿತು. ವಾಹನಗಳನ್ನು ತೆರವು ಮಾಡಿ, ಹೆದ್ದಾರಿಯನ್ನು ತುಸು ಒತ್ತುವರಿ ಮಾಡಿ, ತತ್ಕಾಲೀನ ವೇದಿಕೆ ಮಾಡಿದ್ದರು. ಉಳಿದ ನೆಲದ ಕಸ ಬಳಿದು, ಹಾಸಿದ್ದ ಜಮಖಾನ ತುಂಬ ಊರ ಮಂದಿ ಗಿಜಿಗಿಜಿ ತುಂಬಿದ್ದರು. ನಾವು ದೂರದಲ್ಲೇ ನಿಂತಿದ್ದರೂ ಹಿರಿಯರೊಬ್ಬರು ಬಂದು, ಒತ್ತಾಯಿಸಿ, ಹಿಂದಿನ ಸಾಲಿನ ಕುರ್ಚಿ ಜನಗಳೆಡೆಯಲ್ಲಿ ನಮಗೆ ವಿಶೇಷ ಕುರ್ಚಿ ಹಾಕಿಸಿದರು. ಅಲ್ಲೂ ಸಣ್ಣ ಸಂತೋಷವೆಂದರೆ, ಮೊದಲೇ ಕುರ್ಚಿಯಲ್ಲಿದ್ದವರಲ್ಲಿ ಹಲವರು ಚಿಕ್ಕಮಗಳೂರಿನ (ಕನ್ನಡಿಗ) ಯಾತ್ರಿಗಳು. ಪೂರ್ವರಂಗದಲ್ಲಿ, ಊರ ಮಕ್ಕಳ ಕುಣಿತ, ಕರ್ತವ್ಯದ ಮೇಲಿದ್ದ ಪೋಲಿಸಪ್ಪನ ಹಾಡೂ ನಡೆಯಿತು. ಮತ್ತೆ ಬಂದ ನಿರ್ವಾಹಕ, ಸ್ವಾಗತದ ಮಾತುಗಳಲ್ಲಿ “….ಉಪಸ್ಥಿತ್ ದೂರ್ ದೇಸ್ಕಾ ಯಾತ್ರಿಯೋಂಕೋ ಭೀ ಸ್ವಾಗತ್” ಎಂದು ನಮಗೆ ಹೆಚ್ಚಿನ ಮಾನ್ಯತೆಯನ್ನೂ ಕೊಟ್ಟ! ನಿರ್ವಾಹಕ ಚುಟುಕಿನಲ್ಲಿ ಕಥಾಸ್ವಾರಸ್ಯವನ್ನೂ ಬಿತ್ತರಿಸಿದ. ಹತ್ತೋ ಹನ್ನೆರಡೋ ದಿನಗಳ ರಾಮಾಯಣ ನಾಟಕ ಸರಣಿಯಲ್ಲಿ ಅಂದು ಏಳನೆಯದಿತ್ತು. ಇತ್ತ ವಾನರಸೇನೆ ಶ್ರೀರಾಮ ನೇತೃತ್ವದಲ್ಲಿ ಲಂಕೆಗೆ ಸೇತುಬಂಧದ ವಿಚಾರದಲ್ಲೂ ಅತ್ತ ರಾವಣ ಮಂಡೋದರಿಯ ಹಿತವಾಕ್ಕಿನ ಸುಳಿಯಲ್ಲೂ ಬಿದ್ದಲ್ಲಿಂದ ಪ್ರದರ್ಶನ ತೊಡಗಿತ್ತು. ಒಂಬತ್ತು ತಲೆಯ ರಾವಣ (ನಿಜ ತಲೆಯ ಆಚೀಚೆ ನಾಲ್ನಾಲ್ಕು ಮುಖ ಕಟ್ಟಿಕೊಂಡಿದ್ದ. ಪುಣ್ಯಾತ್ಮ ಹೆಚ್ಚುವರಿ ತಲೆ ರೈಟಿಸ್ಟೋ ಲೆಫ್ಟಿಸ್ಟೋ ಎಂಬ ಗೊಂದಲದಲ್ಲಿ ನೋಟಾ ಪ್ರಯೋಗಿಸಿದಂತಿತ್ತು!) ನಮ್ಮನ್ನು ಮೊದಲು ಆಕರ್ಷಿಸಿದ. ಆತನ ಪಟ್ಟಮಹಿಷಿ (ಸ್ತ್ರೀಪಾತ್ರಿ) ಮಂಡೋದರಿ ಮಾತುಗಳನ್ನು ಕರಾರ್ಚಿತ ಚರವಾಣಿಯಿಂದ ತಡವರಿಸಿ ಓದಿದ್ದಂತೂ ಜನಪದ ತಂತ್ರಜ್ಞಾನವನ್ನು ಒಳಗೊಳ್ಳುವ ಪರಿಗೆ ಉತ್ತಮ ಉದಾಹರಣೆಯಾಗಿಯೇ ಕಾಣಿಸಿತು. ನಾವು ಹೆಚ್ಚಿನ ಜ್ಞಾನಸಂಪಾದನೆ ಬಯಸದೆ ಹೋಟೆಲಿಗೆ ಮರಳಿ, ಕೇದಾರದ (ನಿದ್ದೆಯಿಲ್ಲದ ರಾತ್ರಿಯ) ದುಃಸ್ವಪ್ನಗಳನ್ನೆಲ್ಲ ತೊಡೆದುಕೊಂಡೆವು.

“ಬೆಳಿಗ್ಗೆ ಬದರಿಗೆ ಬೇಗ ಹೋಗುವುದು” ಎನ್ನುವುದು ಸರ್ವಾನುಮತ ನಿರ್ಧಾರವೇ ಆಗಿತ್ತು. ಆದರೆ ಪ್ರತಿಯೊಬ್ಬರ ಸ್ನಾನಕ್ಕೂ ‘ರೂಂಬಾಯ್’ ಕೆಳಗಿನಿಂದ ಒಂದೊಂದೇ ಬಕೆಟ್ ಬಿಸಿನೀರು ಹೊತ್ತು ಕೊಡುವಲ್ಲಿ ಸ್ವಲ್ಪ ತಡವಾದಂತನ್ನಿಸಿತು. ಥಾಪಾ ಮಾತ್ರ ರಾತ್ರಿಯೇ ಪಂಚೇರ್ ಚಕ್ರ ರಿಪೇರಿ ಮಾಡಿಸಿ, ಸಕಾಲಕ್ಕೇ ಬಸ್ ಹೊರಡಿಸಿದ. ಬದರೀ ಮಾರ್ಗ ಅಲಕನಂದಾ ಪಾತ್ರೆಯಲ್ಲಿತ್ತು. ಮಳೆಗಾಲದ ಸಹಜ ಕುಸಿತವನ್ನೇ ಚೊಕ್ಕ ಮಾಡಲಾಗದವರು, ಅಗಲೀಕರಣದ ಕಗ್ಗಂಟನ್ನೂ ಬಿಡಿಸುತ್ತಲಿದ್ದರು. ಬದರಿ ಸಮೀಪಿಸುತ್ತಿದ್ದಂತೆ ಕೆಲವು ಕಿಮೀ ಉದ್ದಕ್ಕಂತೂ ಒಂದು ಬದಿಯಲ್ಲಿ ಮಹಾಗಿರಿಯೇ ಸಡಿಲ ಬಂಡೆ, ಮಣ್ಣಿನ ಮೊತ್ತವಾಗಿ ಕವಿದು ಬೀಳುವ ಭಯ, ಇನ್ನೊಂದು ಬದಿಯಲ್ಲಿ ಅದರದೇ ಮುಂದುವರಿಕೆ ನಮ್ಮನ್ನು ಅಲಕನಂದೆಯ ಪ್ರವಾಹಕ್ಕೆ ಮುಟ್ಟಿಸುವ ಬೆದರಿಕೆ ಹಾಕುವಂತಿತ್ತು. ಥಾಪಾನ ಕೌಶಲಗಳೇನೂ ಉಪಯೋಗಕ್ಕೆ ಬಾರದಂತೆ, ಭಾರೀ ಶಿಲಾವರ್ಷದಲ್ಲಿ ಹೂತುಹೋದಂತೆ, ಪ್ರಚಂಡ ನೆಲ ಕುಸಿತದಲ್ಲಿ ಪಾತಾಳಕ್ಕೆ ಉರುಳಿಬಿದ್ದಂತೆ ಯೋಚನೆಗಳು ಕಾಡುತ್ತಲೇ ಇದ್ದಂತೆ, ಬದರೀ ಬಂದಿತ್ತು (ಅಂತರ ಸುಮಾರು ೭೬ ಕಿಮೀ). ಕಳೆದ ರಾತ್ರಿಯ ಗರಿಷ್ಠ -೨ ಡಿಗ್ರಿ ಚಳಿಯಿಂದ ಬದರಿ ಆಗಷ್ಟೇ ಮೈಮುರಿದೆದ್ದಿತ್ತು. ತಿಳಿಯಾದ ವಾತಾವರಣ, ಬೆಚ್ಚನೆ ಸೂರ್ಯ “ನಾವಿದ್ದೇವೆ” ಎಂದು ಅನುಮೋದಿಸುತ್ತಲೂ ಇದ್ದರು.

ಬದರಿಗೂ ಎರಡು ಪಕ್ಕಗಳಲ್ಲಿ ಭಾರೀ ಬೆಟ್ಟಗಳೇ ಇತ್ತು. ಆದರೆ ಹಿನ್ನೆಲೆಯ ಕಣಿವೆ ನಾಲ್ಕೈದು ಕಿಮೀ ಲಂಬಿಸಿದೆ. ಆ ಕೊನೆಯಲ್ಲಿ ಭಾರೀ ಹಿಮವದ್ ಶಿಖರ ಗೋಡೆ ಕಟ್ಟುವ ಮುನ್ನ, ಮಾನ ಎಂಬ ಇನ್ನೊಂದು ಹಳ್ಳಿಗೂ ಉದಾರವಾಗಿ ನೆಲ ಕೊಟ್ಟಿತ್ತು. ಬದರಿಯ ಪೇಜಾವರ ಮಠದ ಶಾಖೆಯಲ್ಲಿ ನಮಗೆ ವಾಸ ವ್ಯವಸ್ಥೆಯಾಗಿತ್ತು. ಆದರೆ ನಾವದನ್ನು ತತ್ಕಾಲೀನವಾಗಿ ನಮ್ಮ ಗಂಟು ಮೂಟೆಗಳನ್ನು ಬಿಡಿಸಿಕೊಳ್ಳಲಷ್ಟೇ ಬಳಸಿದೆವು. ಮಠದ ಉಸ್ತುವಾರಿ ಕೊಟ್ಟ ಖಾಲಿ ಕಾಫಿಯನ್ನಷ್ಟು ಸೊರ್ರೆಂದು ಏರಿಸಿದ್ದಾಯ್ತು. ತಂಡದಲ್ಲಿ ಹೆಚ್ಚಿನವರು ಕ್ಷೇತ್ರ ನಿರ್ದೇಶಿಸುವ ಕ್ರಿಯೆಗಳಿಗೆ ಅವಸರವಸರವಾಗಿ ಸಜ್ಜುಗೊಂಡು, ದೇವಳದತ್ತ ಧಾವಿಸಿದರು. ಹರಿಯ ಮಾರ್ಗದರ್ಶನದೊಡನೆ ನಾವು (ದೇವಕೀ ಸಹಿತ) ಮೂವರು ಮಾತ್ರ, ನಿಧಾನಕ್ಕೆ ಮುಖ್ಯ ದೇವಳ ದಾರಿಯ ಸಂತೆ ನೋಡುತ್ತ ಹೋದೆವು. ಅಲಕನಂದೆಯನ್ನು ದೃಢ ಸೇತುವೆಯಲ್ಲಿ ದಾಟಿ, ತಪ್ತಕುಂಡ ಅಥವಾ ಬಿಸಿನೀರ ಬುಗ್ಗೆಯನ್ನು ಹಿಡಿದಿಟ್ಟ ಕೊಳದಲ್ಲಿನ (ಗಂಡಸರ ವಿಭಾಗದ್ದು ಮಾತ್ರ!) ಸ್ನಾನದ ವೈಭವ ನೋಡಿ, ದೇವಳದೊಳಗೊಂದು ಸುತ್ತು ಹಾಕಿ, ಊರು ತಿಳಿಯಲು ಪಾದ ಬೆಳೆಸಿದೆವು.
ಊರ ಪ್ರವೇಶದಲ್ಲೇ ಎಡ ಮಗ್ಗುಲಿನ ಬೆಟ್ಟದ ಅರ್ಧ ಎತ್ತರದಲ್ಲಿ ಕಾಣುತ್ತಿದ್ದ ಭಾರೀ ನೀರ ಟಾಂಕಿ, ಅದರ ನೆರಳಲ್ಲಿದ್ದ ಊರ್ವಶಿ ಮಂದಿರವನ್ನು ಗುರಿಯಾಗಿಟ್ಟುಕೊಂಡು, ಗಲ್ಲಿಗಳ ಕಾರುಭಾರು ನೋಡುತ್ತ ನಡೆದೆವು. ಊರಿಗೆಲ್ಲ ಭೂಗತ ಕೊಳಚೆ ನೀರು ಸಂಗ್ರಹದ ವ್ಯವಸ್ಥೆಯಾಗುತ್ತಿದ್ದಂತಿತ್ತು. ಊರಿನ ಕುಡಿನೀರ ವ್ಯವಸ್ಥೆ ಹೇಗೋ ತಿಳಿಯಲಿಲ್ಲ. ಬೆಟ್ಟದ ಟಾಂಕಿಯ ನೀರು ಕೊಳವೆಗಳಲ್ಲಿ ವಿದ್ಯುದಾಗರಕ್ಕೆ ಧಾವಿಸಿತ್ತು. ಬಹುಶಃ ಇಲ್ಲಿನ ವಿದ್ಯುಚ್ಛಕ್ತಿ, ಇಡಿಯ ಬದರೀ ಕಣಿವೆಗೆ (ಮಾನ ಸೇರಿದಂತೆ?) ವಿದ್ಯುತ್-ಸ್ವಾಯತ್ತೆಯನ್ನೇ ಕೊಟ್ಟಂತಿತ್ತು. ಊರಿನಿಂದ ತುಸು ಪ್ರತ್ಯೇಕ, ಎದ್ದು ಕಾಣುವ ಬಣ್ಣಗಳಿಂದ ಊರ್ವಶೀ ಮಂದಿರ ಯಾರದ್ದೂ ಗಮನ ಸೆಳೆಯುವುದೇನೋ ಸರಿ. ಆದರೆ ಅದೂ ಸೇರಿದಂತೆ ಊರಿನೊಳಗಿನ ಇನ್ನೂ ಕೆಲವು ಸಣ್ಣ ಪುಟ್ಟ ವಿಶೇಷಗಳು (ರಾಮಾನುಜಾಚಾರ್ಯರ ಆಧುನಿಕ ಮಂಟಪವೊಂದನ್ನು ನಾವು ದೂರದಿಂದಲೇ ನೋಡಿಬಿಟ್ಟೆವು) ಭಕ್ತಿ ಭಾವದವರಿಗೂ ಭಾರೀ ಪ್ರೇಕ್ಷಣೀಯವಾಗೇನೂ ಇದ್ದಂತಿಲ್ಲ. ಬದ್ರಿ ಗಲ್ಲಿಗಳ ಕಟ್ಟಡಗಳೆಲ್ಲ ಅಲ್ಲಿನ ಹವಾವಿಪರೀತಕ್ಕೆ ತಕ್ಕುದಾಗಿಯೇ ಇವೆ. ಒತ್ತೊತ್ತಾಗಿ, ತಗ್ಗುತಗ್ಗಾಗಿದ್ದು, ವಸತಿ, ವ್ಯವಹಾರಗಳಲ್ಲಿ ತೊಡಗಿಕೊಂಡಿವೆ. ಪ್ರಾಚೀನ ಎನ್ನುವಂತವು ಕುಸಿದು ಬಿದ್ದಿರುವುದನ್ನೂ ಕಾಣಬಹುದು. ಬದರಿಯೂ ಕೇದಾರದಂತೇ ಚಳಿಗಾಲದ ನಾಲ್ಕೈದು ತಿಂಗಳು ಪೂರ್ಣ ನಿರ್ವಸಿತವಾಗುವುದರಿಂದ ಪ್ರಧಾನ ದೇವಾಲಯ ಒಂದನ್ನುಳಿದು, ಭಾರೀ ದೀರ್ಘ ಕಾಲದ್ದು, ವೈಶಿಷ್ಟ್ಯಪೂರ್ಣದ್ದು ಎಂಬಂತವು ನಮ್ಮ ಗಮನಕ್ಕೆ ಬರಲಿಲ್ಲ.

ಬದ್ರಿ ಪೇಟೆಯ ಕಿಷ್ಕಿಂಧೆಯಲ್ಲೂ ಸಣ್ಣ ಜಾನುವಾರು ಕೊಟ್ಟಿಗೆ, ಪುಟ್ಟ ಅಂಗಳ ಉಳಿದುಕೊಂಡಲ್ಲಿ ಸಣ್ಣ ತರಕಾರಿ ಬೆಳೆಗಳೆಲ್ಲ ನಮಗೆ ಕುತೂಹಲಕರವಾಗಿಯೇ ಕಾಣಿಸಿತ್ತು. ಒಂದು ತರಕಾರಿ ಅಂಗಡಿಯಲ್ಲಿ ದೇವಕಿ ಮಾದರಿಗೆಂಬಂತೆ ಅಲ್ಲೇ ಬೆಳೆದ ಒಂದು ಪುಟ್ಟ ಎಲೆಕೋಸು ಕೊಂಡಳು. ಬೆಲೆ ವಿಚಾರಿಸಿದಾಗ, ಅಂಗಡಿಯಾತ ನಮ್ಮ ಮಾತಿನ ನೆಲೆಯರಿತು, ತಾನು ಹಿಂದೆ ಬೆಂಗಳೂರಿನಲ್ಲಿ ಸ್ವಲ್ಪ ಕಾಲ ಇದ್ದದ್ದನ್ನು ನೆನಪಿಸಿಕೊಂಡು “ಇಪ್ಪತ್ತು ಐದು ರೂಪಾಯಿ” ಎಂದೇ ಉತ್ತರಿಸಿದ್ದ. ದೇವಕಿಯ ಮುಂದುವರಿದ ಕುತೂಹಲ ತಣಿಸುವಂತೆ, ಅಲ್ಲಿನ ವಿಶಿಷ್ಟ ಹಾಗಲಕಾಯಿಯ ಒಂದು ಮಿಡಿಯನ್ನೂ ಉಚಿತವಾಗಿ ಕೊಟ್ಟ. ಮುಂದೆಲ್ಲೋ ಹರಿ ಆ ಹಾಗಲಕಾಯಿಯನ್ನು ಹಸಿಯೇ ತಿಂದು, “ಕಹಿಯೇ ಇಲ್ಲ” ಎಂದಾಗ ನಮಗೆ ಸ್ವಲ್ಪ ನಿರಾಶೆಯೇ ಆಯ್ತು! ನೀವಾದರೂ ಹೇಳಿ, ಹಾಗಲಕಾಯಿಯೇ ಕಹಿಯನ್ನು ಕಳೆದುಕೊಂಡರೆ ಉಳಿದದ್ದೇನು? (ಮೂರ್ನಾಲ್ಕು ದಿನಗಳ ಬಂಧನ, ಪ್ರಯಾಣದೊಡನೆ ಮಂಗಳೂರಿಗೆ ಬಂದ ಆ ಎಲೆಕೋಸು, ಚೂರೂ ಕೆಡದೆ, ನಮ್ಮ ಮೂರು ಪಲ್ಯಕ್ಕೆ ರುಚಿಕರವಾಗಿ ಒದಗಿ ಧನ್ಯತೆ ಮೂಡಿಸಿತು.)

ದಾಬಾ ಒಂದರಲ್ಲಿ ಚಾ ಕುಡಿದು ಮತ್ತೆ ದೇವಳದೆದುರಿನ ಅಲಕನಂದಾ ಸ್ನಾನ ಘಟ್ಟಕ್ಕೆ ಹೋದೆವು. ಎಕೆ ರಾಯರು ಕೆದಿಲಾಯರ ನಿರ್ದೇಶನದಲ್ಲಿ, ಉಳಿದ ಹಿರಿಯ ನಾಲ್ವರು, ಅಂದರೆ ಜೋಶಿ, ಉಡುಪ, ಸುಬ್ರಹ್ಮಣ್ಯ ಮತ್ತು ರಘುಪತಿಯವರು ಸ್ಥಾನಿಕ ಪುರೋಹಿತನೊಬ್ಬನ ನಿರ್ದೇಶನದಲ್ಲಿ ಕುಲದ ಪೂರ್ವಜರಿಗೆಲ್ಲ ಪಿಂಡ ತರ್ಪಣಾದಿಗಳನ್ನು ಕೊಡುತ್ತಿದ್ದರು! (ಮತ್ತೂ ಉಳಿದವರೆಲ್ಲ ಬರಿಯ ಪ್ರೇಕ್ಷಕರು.) ವಾತಾವರಣದ ಶೈತ್ಯಕ್ಕೆ ಸಹಜವಾಗಿ ಅವರೆಲ್ಲ ತಪ್ತ ಕುಂಡದಲ್ಲೇ ಮಿಂದು, ಒಮ್ಮೆಗೆ ಚಂಡಿಯುಟ್ಟದ್ದಿರಬಹುದುದು. ಆದರೆ ಮುಂದುವರಿದ ದೀರ್ಘ ಕ್ರಿಯಾಭಾಗಗಳನ್ನು ಬರಿಮೈಯಲ್ಲೇ ಕುಳಿತು ನಡೆಸುವಲ್ಲಿ, ಮನೋಸಂಕಲ್ಪಕ್ಕೆ ಸೂರ್ಯರಶ್ಮಿಯೂ ಜತೆಗೊಟ್ಟಂತಿತ್ತು. ಆ ಪುರೋಹಿತ ಸುಮಾರು ಹದಿನಾಲ್ಕು ಭಾಷೆಗಳಲ್ಲಿ, ಅಷ್ಟಕ್ಕೂ ಮಿಕ್ಕ ಸಂಪ್ರದಾಯ ರೀತ್ಯಾ ಕ್ರಿಯಾ ನಿರ್ದೇಶನ ಕೊಡಬಲ್ಲವನಂತೆ. ಆತ ಆ ವಲಯದ ಎಲ್ಲ ಪುರೋಹಿತ/ ಅರ್ಚಕರಂತೇ ತಲೆಗೆ ಟೊಪ್ಪಿಯಿಂದ ತೊಡಗಿ ಪೂರ್ಣ ಬೆಚ್ಚನೆ ಉಡುಪಿನಲ್ಲೇ ಇದ್ದ. ಎಲ್ಲವನ್ನೂ ಎಲ್ಲರೂ ಸಕಾಲದಲ್ಲಿ ಮುಗಿಸಿ, ಮೊದಲೇ ಮಠದ ಉಸ್ತುವಾರಿ ಎಚ್ಚರಿಸಿದ್ದಂತೆ, ಹನ್ನೆರಡೂವರೆಯ ಸುಮಾರಿಗೆ ಪೇಜಾವರ ಮಠದಲ್ಲಿ ಊಟಕ್ಕೆ ಹಾಜರಾದೆವು. ಹಗಲೂ ರಾತ್ರಿ ರೊಟ್ಟಿ, ದಾಲ್, ಆಲೂ ತಿಂದು (ನಡು ನಡುವೆ ಅನ್ನ ಸಿಕ್ಕರೂ ಪೂರಕಗಳ ಹೊಂದಿಕೆಯಾಗದೆ) ಜಡವಾಗಿದ್ದ ರಸನೆಗಳು ಊರ ಊಟದಿಂದ ನಮ್ಮಲ್ಲಿ ಉತ್ಸಾಹದ ಬುಗ್ಗೆಯನ್ನೇ ಎಬ್ಬಿಸಿದವು.

ಉನ್ನತ ಬೆಟ್ಟದ ಅಂಚುಗಳಲ್ಲಿ ಆಗೀಗ ಇಣುಕಿದಂತೆ ಕಾಣುತ್ತಿದ್ದ ಮೋಡ, ನಮ್ಮನ್ನು ರಾತ್ರಿವಾಸಕ್ಕೆ ಒಲಿಸುವಂತಿರಲಿಲ್ಲ. ಹಾಗಾಗಿ ನಮ್ಮೆಲ್ಲ ಗಂಟುಗದಡಿಗಳನ್ನು ಮತ್ತೆ ಬಸ್ಸಿಗೇ ಹೇರಿ, ಮಾನ ಹಳ್ಳಿಯನ್ನು ಒಂದಷ್ಟು ನೋಡಿ, ರಾತ್ರಿ ವಾಸಕ್ಕೆ, ತಿರುಗಿ ಕೆಳಗಿನೂರಿಗೆ ಹೋಗುವ ಅಂದಾಜು ಮಾಡಿದೆವು. ಬಹುತೇಕ ಮಟ್ಟವಾಗಿಯೇ ಮೂರ್ನಾಲ್ಕು ಕಿಮೀ ಮುಂದುವರಿದ ದಾರಿಯನ್ನು ಬಸ್ಸಿನಲ್ಲಿ ಕ್ರಮಿಸಿದೆವು. ಅಲ್ಲಿನ ಸ್ವಾಗತ ಕಮಾನು ಹೇಳುವಂತೆ ಮಾನ, (ಆ ವಲಯದಲ್ಲಿ) ಭಾರತದ ಕೊನೆಯ ಹಳ್ಳಿ. ಆಸಕ್ತಿ, ತಾಕತ್ತು, ಉದಾಸೀನಗಳ ಮೇಲಾಟದಲ್ಲಿ ನಮ್ಮ ತಂಡದೊಳಗೇ ಮೂರ್ನಾಲ್ಕು ಗುಂಪುಗಳಾದವು. ಹಾಗಾಗಿ ಕೆಲವರು ಬಸ್ಸಿನಲ್ಲೂ ಮತ್ತೊಂದಷ್ಟು ಮಂದಿ ವಿವಿಧ ವೇಗಗಳಲ್ಲೂ ಹೆಜ್ಜೆ ಹಾಕಿದರು.

ಬೆಳಗ್ಗಿನಂತೇ ನಾವು ಮೂವರು ಸ್ವಲ್ಪ ಚುರುಕಾಗಿಯೇ ನಡೆದೆವು. ಊರೆಲ್ಲ ಪುಟ್ಟಪಥಗಳದ್ದೇ. ಎಲ್ಲೋ ನಡುವೆ ಒಂದು ಸಾಮಾನ್ಯ ಸೈಕಲ್ ಕಾಣಿಸಿ ತುಸು ಆಶ್ಚರ್ಯವನ್ನೇ ಹುಟ್ಟಿಸಿತು. ಕಲ್ಲ ಚಪ್ಪಡಿ, ಕಾಂಕ್ರೀಟ್ ಹಾಸು, ಮೆಟ್ಟಿಲುಗಳ ಸರಣಿ ಎಂದೆಲ್ಲಾ ನಾವು ಮುಖ್ಯ ಪಥದ ಗುಂಟ, ಸಾವಕಾಶವಾಗಿ ಏರುತ್ತ ಹೋದೆವು. ಹಳ್ಳಿಯ ಮಂದಿ ಅದರ ಉದ್ದಕ್ಕೂ ಅಲ್ಲಲ್ಲಿ, ತಮ್ಮ ಮನೆಯದ್ದೇ ವಿಸ್ತರಣೆ ಎನ್ನುವಂತ ಕಟ್ಟೆಗಳಲ್ಲಿ ಕುಳಿತು, ತಮ್ಮ ಕೈ ಕಸುಬನ್ನು ನಡೆಸುತ್ತ, ಉತ್ಪನ್ನಗಳನ್ನು ಹಾಗೇ ರಾಶಿ ಹಾಕಿ ಮಾರಾಟಕ್ಕೆ ಇಟ್ಟಿದ್ದರು.

(ಅಂಗಡಿ, ಶೋ ಕೇಸ್ ತುಂಬ ಕಡಿಮೆ.) ಅವುಗಳಲ್ಲೂ ಮುಖ್ಯ ಉತ್ಪನ್ನಗಳು ತಾವೇ ಸಾಕಿದ ಕುರಿಗಳ ಉಣ್ಣೆಯವು ಮತ್ತು ಪ್ರಾದೇಶಿಕ ಮೂಲಿಕಾದಿಗಳು. ಜನ, ಜಾನುವಾರು, ತರಕಾರೀ ಬೆಳೆಯ ಪುಟ್ಟ ಅಂಗಳಗಳು… ಎಲ್ಲ ಬದರಿಯದ್ದೇ ಸಣ್ಣ ರೂಪ.

ಮಾನದಲ್ಲಿ ಮೊದಲ ಎತ್ತರದಲ್ಲೊಂದು ಗುಹೆ – ಗಣಪನದ್ದು. ಪುರಾಣ ತಿಳಿಸುವಂತೆ, ಆತ ವ್ಯಾಸ ಮಹರ್ಷಿಯ ಲಿಪಿಕಾರ. ಸಹಜವಾಗಿ ಸ್ವಲ್ಪ ಮೇಲಿನಿನ್ನೊಂದು ಗುಹೆ – ವ್ಯಾಸರದ್ದೇ. ಗಣಪನದ್ದು ಸಾಮಾನ್ಯ ಬಂಡೆಯಡಿಯ ಸಣ್ಣ ಆರಾಧನೀಯ ಗುಡಿಯಷ್ಟೇ ಆಗಿದೆ. ವ್ಯಾಸ ಗುಹೆಯಲ್ಲಿನ ಪ್ರಾಕೃತಿಕ ಬಂಡೆ ಚಪ್ಪರ ಪಳೆಯುಳಿಕೆಗಳ ವಿಶಿಷ್ಟ ರಚನೆ (ಫಾಸಿಲೈಸ್ಡ್ ರಾಕ್?). ಇದು ಕಾಗದಕ್ಕೂ ಮುನ್ನ ಲೇಖನ ಮಾಧ್ಯಮವೇ ಆಗಿದ್ದ ತಾಳೆಗರಿಗಳ ಭಾರೀ ಕಡತದಂತೇ ಕಾಣಿಸುತ್ತದೆ. ಸ್ಥಳ ಪುರಾಣಿಕರ ಕಲ್ಪನಾಲಹರಿಗೆ ತಲೆದೂಗಲೇ ಬೇಕು.

ಮಾನದ ಸ್ವಾಗತ ಕಮಾನನ್ನು ಎಡಕ್ಕೇ ಬಿಟ್ಟು, ವಾಹನಯೋಗ್ಯ ದಾರಿ ಹಳ್ಳಿಯಿಂದ ತುಸು ಮೇಲ್ಮಟ್ಟದಲ್ಲಿ ಮುಂದುವರಿದಿದೆ. ಆದರದು ಪೂರ್ಣ ಸೈನ್ಯದ ಬಳಕೆ ಮತ್ತು ಉಸ್ತುವಾರಿಗೇ ಮೀಸಲು. ಹಳ್ಳಿಯ ಪುಟ್ಟಪಥ, ವ್ಯಾಸಗುಹೆಯಿಂದಲೂ ಮುಂದುವರಿದದ್ದು ಬಹುಶಃ ಆ ಸೈನ್ಯದ ದಾರಿಯನ್ನೇ ಸೇರುವುದು ಇರಬಹುದು. ಅದನ್ನು ಹಿಂಬಾಲಿಸುವ ಆವಶ್ಯಕತೆ ಮತ್ತು ಸಮಯ ನಮ್ಮಲ್ಲಿರಲಿಲ್ಲ. ಮರಳುವಾಗ ಮುಖ್ಯ ದಾರಿಯನ್ನು ಸ್ವಲ್ಪದರಲ್ಲಿ ಬಿಟ್ಟು ಬಲಕ್ಕೆ, ನೇರ ಕೊಳ್ಳದತ್ತ ಸಾಗಿದ್ದ ಇನ್ನೊಂದೇ ಪುಟ್ಟಪಥವನ್ನು ಅನುಸರಿಸಿದೆವು. ಈ ಕೊನೆ ನಮ್ಮನ್ನು ಪುರಾಣ ಪ್ರಸಿದ್ಧ ಸರಸ್ವತೀ ನದಿಯ ಪಾತ್ರೆಗೊಯ್ದಿತ್ತು. ಗೂಗಲ್ ನಕ್ಷೆ ಹೇಳುವಂತೆ, ತುಸು ಮೇಲಿನ ಶುದ್ಧ ಬಂಡೆಯ ಕಡಿದಾದ ಪರ್ವತಮುಖದಲ್ಲೆಲ್ಲೋ ಪ್ರಕಟವಾಗುವ ಈ ನೀರರಾಶಿ, ಹಲವು ಸಾವಿರ ವರ್ಷಗಳಿಂದ ಬಂಡೆ ಪಾತ್ರೆಯನ್ನು ಬಹುವಿಧದಲ್ಲಿ ಕೊರೆದು, ಸೀಳಿ, ಆಗೀಗ (ಗಂಟೆ, ದಿನಮಾನಗಳಲ್ಲಲ್ಲ, ಯುಗದ ಲೆಕ್ಕದಲ್ಲಿ!) ಹೋಳುಗಳನ್ನು ಬೀಳಿಸಿಯೂ ಭೋರ್ಗರೆಯುತ್ತಲೇ ಇದೆ. ನಾವು ನಿಂತಲ್ಲಿ ಅಂಥ ಭಾರೀ ಬಂಡೆ ತುಣುಕೊಂದು ಅದರದೇ ಪಾತ್ರೆಗೆ ಅಡ್ಡ ಸೇತುವಿನಂತೆ ಬಿದ್ದಿತ್ತು. ನೀರಮೊತ್ತ ಅದರ ತಳದ ಕೊಳ್ಳಕ್ಕೆ ಜಲಪಾತವಾಗಿ ಅಪ್ಪಳಿಸುತ್ತದೆ. ಸೇತುವಿನಂತೆ ಬಿದ್ದ ಅಗಾಧ ಬಂಡೆಯನ್ನು ಸಾಕ್ಷಾತ್ ಪಾಂಡವ ಮಧ್ಯಮ ಭೀಮನೇ ಸೇತುವಾಗಿಟ್ಟು (ಭೀಮ್ ಶಿಲಾ), ತಳದ ಕೊಳ್ಳವನ್ನು ಈಜಿಗೆ (ಭೀಮ್ ಪುಲ್) ಬಳಸಿದನೆಂದೂ ಐತಿಹ್ಯ ಸಾರುತ್ತದೆ! ಅಲ್ಲಿ ನಿಂತಂತೇ, ಕೊಳದಿಂದಾಚೆ ಹರಿಯುವ ಸರಸ್ವತಿ, ಅಲಕನಂದಾವನ್ನು ಸೇರುವ ದೃಶ್ಯವನ್ನೂ ನೋಡಬಹುದು. ಅಲಕನಂದೆಯ ಎದುರು ದಂಡೆಯಲ್ಲೂ ಪುಟ್ಟಪಥಗಳಿವೆ (ಬಹುಶಃ ಬದರಿಯನಂತರ ಹೊಳೆಗೆ ಸೇತುವೆಗಳಿಲ್ಲ). ಇಂದು ಅಲ್ಲಿ ವಿಶೇಶವಾಗಿ ಗುರುತಿಸಿದ ದಿಬ್ಬದ ಮೇಲೆ ದ್ರೌಪದಿ ಪ್ರಾಣತ್ಯಾಗ ಮಾಡಿದ್ದಳಂತೆ. ಮುಂದುವರಿದಂತೆ ಪಾಂಡವರು ಸ್ವರ್ಗಾರೋಹಣ ನಡೆಸಿದ ಜಾಡು. ಅವನ್ನೆಲ್ಲ ನಾವು ಈ ಬದಿಯಿಂದಲೇ ನೋಡಿ ತೃಪ್ತರಾದೆವು. ಹಾಗೇ ಮುಂದುವರಿದು ವಸುಧಾರಾ ಎನ್ನುವ ಇನ್ನೊಂದು ಭಾರೀ ಜಲಪಾತವನ್ನೂ ಭಾರತ – ಚೀನಾ ಗಡಿ ಎಂಬ ಕಾಲ್ಪನಿಕ ರೇಖೆಯನ್ನೂ ನಮ್ಮ ಸೈನ್ಯದ ಅನುಮತಿ ಮತ್ತು ಸಹಕಾರದೊಂದಿಗೇ ನೋಡಿ ಬಂದ ಕೆಲವರನ್ನೂ ನೆನಪಿಸಿಕೊಂಡು ಸುಖಿಸಿದೆವು. ಮತ್ತೂ ಆಚೆಗೆ ಇರುವ ಭಾರೀ ಹಿಮನದಿ, ಈ ವಲಯದ ಅತಿ ಗಣ್ಯ ಶಿಖರಗಳಲ್ಲಿ ಒಂದಾದ ಕಾಮೆಟ್ (ಬದರೀ ದಾರಿ, ಅದನ್ನು ಏರುವ ದಿಕ್ಕಲ್ಲ ಬಿಡಿ.) ಮತ್ತು ಅದರ ಸಾಧನೆಯಲ್ಲಿ ಜೀವ ತೆಯ್ದ, ತೆತ್ತ ಮತ್ತು ಯಶಸ್ವಿಯಾಗಿ ಮನುಷ್ಯ ಸಾಧನೆಯ ಗಡಿಗಳನ್ನು ವಿಸ್ತರಿಸಿದವರಿಗೆಲ್ಲ ಕೇವಲ ಮನಸಾ ಸ್ಮರಣೆಗಳು.

ಭೀಮಶಿಲಾ ಮತ್ತು ಪುಲ್ ದರ್ಶನಕ್ಕೆ ಬರುವ ಸಾರ್ವಜನಿಕರ ರಕ್ಷಣೆಗೆ ಮೆಟ್ಟಿಲು, ಪುಟ್ಟಪಥ, ಬೇಲಿ ಎಲ್ಲ ಬಂದಿರುವುದು ಸರಿಯೇ ಇರಬಹುದು. ಆದರೆ ಒಟ್ಟಾರೆ ಮಾನ ಹಳ್ಳಿಯಲ್ಲಿ, ಪುಟ್ಟಪಥಗಳ ಆಚೀಚೆ ಹಾಕಿದ ಅವಶ್ಯ ಸೂಚನೆಗಳು ಹಾಳಾಗಿ ರಾಶಿಬಿದ್ದಿರುವುದು, ಜಾಹೀರಾತು ಫಲಕಗಳು ಹೆಚ್ಚಿರುವುದನ್ನೆಲ್ಲ ನಿವಾರಿಸಬೇಕು. ವ್ಯಾಸ, ಗಣೇಶರ ಮಹತ್ವವನ್ನು ಚಂದ ಮಾಡುವ ನೆಪದಲ್ಲಿ ಸಾವಿರಾರು ವರ್ಷಗಳ ಪ್ರಾಕೃತಿಕ ರಚನೆಗಳಿಗೆ ಇನ್ನಾದರೂ ಯದ್ವಾತದ್ವಾ ಸಿಮೆಂಟು, ಪೈಂಟಿನ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಅವಶ್ಯ ಸೂಚನೆಗಳಿಗೆ ಒಂದು ಚೊಕ್ಕ ಬೋರ್ಡು ಮತ್ತದನ್ನು ಸರಿಯಾಗಿ ಉಳಿಸಿಕೊಳ್ಳುವ ಕಾಳಜಿಯಷ್ಟೇ ಸಾಕು. ಭೀಮಶಿಲಾದ ಪಕ್ಕದ ಪೊಳ್ಳೊಂದನ್ನು ಒಬ್ಬ ಸಾಧು ತನ್ನ ಠಿಕಾಣಿ ಮಾಡಿಕೊಂಡಿದ್ದಾನೆ. ಭೀಮಶಿಲಾದ ಕೆಳಗಿನ ಇನ್ನೊಂದೇ ಭಾರೀ ಬಂಡೆಯ ಮಂಡೆಯಲ್ಲಿ ತನ್ನೆಲ್ಲ ಕೊಳಕಿನೊಡನೆ ದಾಬಾ ಒಂದು ವ್ಯವಹಾರ ನಡೆಸಿದೆ. ಇಂಥವನ್ನೆಲ್ಲ ಅವಶ್ಯ ನಿವಾರಿಸಬೇಕು. ಎಲ್ಲಕ್ಕೂ ಮುಖ್ಯವಾಗಿ ಮಾನ ಹಳ್ಳಿಯ ಜನಪದ ಶೈಲಿಯನ್ನು ವಿರೋಧಿಸುವ ರಚನೆಗಳು (ಕವಲು ದಾರಿಯಲ್ಲಿ ನಾವು ಚಾ ಕುಡಿದ ಕ್ಯಾಂಟೀನೂ ಸೇರಿ) ಮತ್ತು ವ್ಯವಹಾರಗಳನ್ನು ಈಗಲಾದರೂ ಸ್ಥಳೀಯ ಆಡಳಿತ ದೃಢವಾಗಿ ನಿವಾರಿಸದಿದ್ದರೆ, ವಾಣಿಜ್ಯಾಸುರ ಹಳ್ಳಿಯ ಹೆಸರನ್ನು ಅವ-ಮಾನಕ್ಕೆ ಬದಲಿಸುವುದು ಖಾತ್ರಿ. ನಾಲ್ಕೂವರೆಯ ಸುಮಾರಿಗೆ ಎಲ್ಲರೂ ಬಸ್ಸಿಗೆ ಮರಳಿ, ಬದರೀನಾಥ ಕ್ಷೇತ್ರಕ್ಕೇ ವಿದಾಯ ಹೇಳಿದೆವು. ಈ ದಿನ ತುಸು ಹೆಚ್ಚೇ ದಾರಿ ಸವೆಯಿಸಬೇಕೆಂದಿದ್ದ ನಿರ್ಧಾರ ಮತ್ತೆ ದಾರಿಯ ದುರವಸ್ಥೆಯಲ್ಲಿ ಸೋತು, ಪಿಪಲ್ ಕೋಟಿನಲ್ಲೇ ರಾತ್ರಿಗೆ ತಂಗುವಂತಾಯ್ತು. ಹಿಂದಿನ ರಾತ್ರಿಯ ಹೋಟೆಲ್ ವಾಸ ಕೆಲವರಿಗೆ ಅಹಿತವಾಗಿತ್ತೆಂದು ಈ ಬಾರಿ ಬೇರೊಂದೇ ಹೋಟೆಲ್ ಹಿಡಿದಿದ್ದೆವು. ಇಲ್ಲಿ ಪ್ರತಿ ಕೋಣೆಯ ಪ್ರತ್ಯೇಕ ನಲ್ಲಿಯಲ್ಲಿ ಎಲ್ಲ ವೇಳೆಗೂ ಬಿಸಿನೀರು ಲಭ್ಯವಿದ್ದದ್ದು ಹೆಚ್ಚಿನ ಅನುಕೂಲವೇ ಆಯ್ತು. ರಾತ್ರಿ ಊಟಕ್ಕೆ ಮಾತ್ರ ನಾವು ಹಿಂದಿನ ದಿನದ ಹೋಟೆಲಿಗೇ ಹೋಗಿದ್ದೆವು. ಹಿಂದಿನ ರಾತ್ರಿ ನಾವು ಕೆಲವರಷ್ಟೇ ನೋಡಿ, ರಾಮಲೀಲಾವನ್ನು ರಂಗಾಗಿ ವಿವರಿಸಿದ್ದೆವು. ಇಂದು ಅದರ ಮುಂದಿನ ಕಂತಿನ ರುಚಿ ನೋಡುವ ‘ಭಾಗ್ಯ’ ಎಲ್ಲರಿಗೂ ಸಿಕ್ಕಂತಾಯ್ತು! ಅದಕ್ಕೂ ಮುಖ್ಯ, ಹಗಲಲ್ಲೇ ನಮ್ಮನ್ನು ನಡುಗಿಸಿದ್ದ ಬದರೀನಾಥದ ಚಳಿ, ರಾತ್ರಿಗೆ ಇಮ್ಮಡಿಸಿ ಅಪ್ಪಳಿಸುತ್ತಿದೆಯೆಂದು ‘ಹವಾಮಾನ ಯಾಪ್’ ಘೋಷಿಸಿತು. ಆಗ, ನಾವು ಪಿಪಲ್ ಕೋಟಿಯ ಹಿತವಾದ ಬಿಸುಪಿನಲ್ಲಿ ನಿದ್ರಿಸುವಂತಾದ ಭಾಗ್ಯವನ್ನು ಹೆಚ್ಚಿನ ಮಾತುಗಳಲ್ಲಿ ಕೊಂಡಾಡಿದೆವು.

ಹವಾಮಾನ ಮತ್ತು ಹೇಳಲಾಗದ ಆಕಸ್ಮಿಕಗಳು ನಮ್ಮ ಯೋಜನೆಗಳನ್ನು ವಿಳಂಬಿಸಬಹುದೆಂಬ ಸರಿಯಾದ ಅಂದಾಜನ್ನೇ ಎಕೆ ರಾವ್ ಮತ್ತು ಹರಿ ಮಾಡಿದ್ದರು. ಹಾಗಾಗಿ ಒಂದು ಹೆಚ್ಚುವರಿ ದಿನವನ್ನಿಟ್ಟುಕೊಂಡೇ ವಾಪಾಸಾಗುವ ವಿಮಾನಕ್ಕೆ ಸೀಟು ಕಾಯ್ದಿರಿಸಿದ್ದರು. ಆ ಲೆಕ್ಕದಲ್ಲಿ ನಮ್ಮೆದುರು ಪೂರ್ಣ ಎರಡೂವರೆ ದಿನವೇ ಇತ್ತು. ಬೆಳಗ್ಗಿನ (೨೪-೧೦-೧೮) ತಿಂಡಿಯನ್ನು ದಾರಿಯಲ್ಲೆಲ್ಲಾದರೂ ಮಾಡಿದರಾಯ್ತು ಎಂದುಕೊಂಡು, ಆರಾಮವಾಗಿಯೇ ಹೊರಟೆವು. ಹೊಟ್ಟೆಯ ಶಿಸ್ತನ್ನು ತುಸು ಹೆಚ್ಚೇ ಹಚ್ಚಿಕೊಂಡ ಸೈಕ್ಲಿಸ್ಟರಾದ ಹರಿ, ನಾನು, ಸಹವಾಸ ದೋಷದಿಂದ ದೇವಕಿ, ಸ್ನಾನೇತ್ಯಾದಿಗಳನ್ನು ನಮ್ಮಂತೆಯೇ ಬೇಗ ಮುಗಿಸಿಕೊಂಡಿದ್ದ ಸುಬ್ರಹ್ಮಣ್ಯ ಭಟ್ ದಂಪತಿಯಷ್ಟು ಮಂದಿ ಅಲ್ಲಿ ಮೊದಲು ತೆರೆದ ಹೋಟೆಲಿನಲ್ಲೇ ತಿಂಡಿ ಮುಗಿಸಿಕೊಂಡಿದ್ದೆವು. ನಮ್ಮ ಅಂದಿನ ಗುರು ಹರಿದ್ವಾರ (೨೩೯ ಕಿಮೀ).

ಊಖಿಮಠದ ಒಳದಾರಿಯಿಂದ ಬಂದು ಹೆದ್ದಾರಿ ಸೇರಿದ ಸ್ಥಳ – ಚಮೋಲಿಯಲ್ಲಿ, ಒಳ್ಳೆಯ ಹೋಟೆಲ್ ಮತ್ತು ನಮ್ಮ ಬಸ್ಸಿನ ವಿರಾಮಕ್ಕೆ ತಕ್ಕ ಸ್ಥಳ ಹೊಂದಾಣಿಕೆಯಾಗದೇ ಉಪಾಹಾರ ನಿಲುಗಡೆಯನ್ನು ಕರ್ಣಪ್ರಯಾಗಕ್ಕೆ ನಿಕ್ಕಿ ಮಾಡಿದಾಗ, ನನಗೂ ದೇವಕಿಗೂ ಒಳಗೊಳಗೇ ಸಣ್ಣ ಸಂಭ್ರಮ ಮೂಡಿತ್ತು. ಕಾರಣ ಇಷ್ಟೇ – ಇಪ್ಪತ್ತೆಂಟು ವರ್ಷಗಳ ಹಿಂದಿನ ಚಾರ್ಧಾಮ್ ಯಾತ್ರೆಯಲ್ಲಿ, ಅನಿವಾರ್ಯವಾಗಿ ನಾವಿಬ್ಬರು ಮಾತ್ರ ಎರಡು ದಿನ ಉಳಿದುಕೊಂಡಿದ್ದ ಊರದು. ಇಂದು ಅದು ಎಷ್ಟು ಬದಲಾದರೂ ನಮ್ಮ ನೆನಪುಗಳನ್ನು ಪುನಾರಚಿಸುವ ಕುರುಹುಗಳು ಕೆಲವಾದರೂ ಉಳಿದಿರಬಹುದೆಂಬ ನಿರೀಕ್ಷೆ ನಮಗಿತ್ತು.

ಹತ್ತು ಗಂಟೆಯ ಸುಮಾರಿಗೆ ನಾವು ಕರ್ಣಪ್ರಯಾಗ ತಲಪಿದ್ದೆವು. ಆಕಸ್ಮಿಕ ಎನ್ನುವಂತೆ ನಾವು ನಿಂತ ಸ್ಥಳ, ಇಪ್ಪತ್ತೆಂಟು ವರ್ಷಗಳ ಹಿಂದೆ ನಾವಿಬ್ಬರು ತಿಂಡಿ, ಊಟಕ್ಕೆ ಬರುತ್ತಿದ್ದ ಹೋಟೆಲಿದ್ದ ಜಾಗವೇ ಎಂದನ್ನಿಸಿತು! ಆದರೆ ಅಂದಿನ ಸಣ್ಣ ಮತ್ತು ಸಾಮಾನ್ಯ ದಾಬಾದ ಜಾಗದಲ್ಲಿ ಇಂದು ಬಹುಮಹಡಿಗಳ ಹೋಟೆಲ್ – ಶ್ರೀ ಕೃಷ್ಣಾ ಪ್ಯಾಲೇಸ್ ಶೋಭಿಸಿತ್ತು. ಒಳ ಹೋದಾಗ, ತರುಣ ಮ್ಯಾನೇಜರನನ್ನು ಕಂಡಾಗ, ನಾನು ಕೇಳಿದ ಮೊದಲ ಪ್ರಶ್ನೆಯಾದರೂ ಅದೇ “ಹೋಟೆಲ್ ಎಷ್ಟು ಹಳತು?” ಹತ್ತೊಂಬತ್ತು ವರ್ಷ ಪ್ರಾಯದ ಹೋಟೆಲಿನ ಹುಟ್ಟನ್ನೇ ಸರಿಯಾಗಿ ಕಾಣದವ ಆತ. ಇನ್ನು ಅಲ್ಲಿ ಹಿಂದೇನಿತ್ತೆಂದು ಹೇಳುವುದಾದರೂ ಹೇಗೆ! ಎಲ್ಲರೂ ತಿಂಡಿಗೆ ಕುಳಿತಾಗ, ಮೊದಲೇ ಹೊಟ್ಟೆ ತುಂಬಿಸಿಕೊಂಡಿದ್ದ ಹರಿ ಸೇರಿದಂತೆ ನಾವಿಬ್ಬರು ಸಾಕಷ್ಟು ಚುರುಕಾಗಿಯೇ ಪೇಟೆ ಸುತ್ತಿದೆವು.

ಕರ್ಣಪ್ರಯಾಗದಲ್ಲಿ ಅಲಕನಂದಾಕ್ಕೆ ಪಿಂಡಾರಿ ನದಿ ಬಂದು ಕೂಡಿಕೊಳ್ಳುತ್ತದೆ. ನನ್ನ ನೆನಪಿನಂಗಳದಲ್ಲೂ ಎಷ್ಟೋ ಹಿಂದಿನ ಜಿಂ ಕಾರ್ಬೆಟ್ ಬೇಟೆ ಕಥಾನಕದಲ್ಲೂ (ರುದ್ರ ಪ್ರಯಾಗದ ನರಭಕ್ಷಕ) ಲೆಕ್ಕಕ್ಕೆ ಸಿಗುವುದು ಕಬ್ಬಿಣದ ತೊಲೆಗಳನ್ನು ಜೋಡಿಸಿ ಮಾಡಿದ ಒಂದೇ ಸೇತುವೆ, ಅದೂ ಸಪುರದ್ದು. ಆದರೆ ಈಗ ಕೃಷ್ಣ ಪ್ಯಾಲೇಸ್ ಒತ್ತಿನದು, ಪಿಂಡಾರಿ ನದಿಗಡ್ಡಲಾಗಿರುವುದು (ಪಶ್ಚಿಮ – ಪೂರ್ವ), ಕಬ್ಬಿಣದ ತೊಲೆಗಳದ್ದೇ ಆದರೂ ತುಂಬ ಅಗಲವಿತ್ತು. ಇದಕ್ಕೆ ಎರಡೂ ಬದಿಗಳಲ್ಲಿ ಸ್ವತಂತ್ರ ಪಾದಚಾರಿ ಪಥಗಳೂ ಇದ್ದವು. ಇದಲ್ಲ ಎಂದುಕೊಳ್ಳುತ್ತ ನಾವು ಅದನ್ನು ನಡೆದು ದಾಟುವಾಗಲೇ ಸ್ವಲ್ಪ ಮೇಲ್ದಂಡೆಯಲ್ಲಿ ಇನ್ನೊಂದೇ ಕಬ್ಬಿಣ ಸೇತುವೆ (ಉತ್ತರ-ದಕ್ಷಿಣ) – ಹಳತು ಮತ್ತು ಸಪುರದ್ದು, ಕಂಡೆವು. ಅದರ ಉತ್ತರ ಕೊನೆಗಷ್ಟೇ ಅವಸರದ ನೋಟ ಹಾಕಿ, ಹೊಸತಕ್ಕೇ ಮರಳಿದೆವು. ಇಲ್ಲಿ ಸೇತುವೆಯ ಒತ್ತಿನ ವ್ಯವಸ್ಥಿತ ಮೆಟ್ಟಿಲುಗಳಲ್ಲಿಳಿದು, ಸಂಗಮದ ಸ್ನಾನ ಘಟ್ಟದ ವಿವರಗಳನ್ನೆಲ್ಲ ಕಂಡೆವು. ಆಗ ಕೆಳಪಾತ್ರೆಯಲ್ಲೂ ಅಂದರೆ ಪಿಂಡಾರಿ ಸೇರಿ ಮುಂದುವರಿದ ಅಲಕನಂದಾದ ಮೇಲೆ ಮೂರನೆಯ ಕಬ್ಬಿಣದ ಸೇತುವೆ (ದಕ್ಷಿಣ-ಉತ್ತರ) ಕಾಣಿಸಿತು. ಕುತೂಹಲ ನಮ್ಮನ್ನು ಅದರತ್ತವೂ ಓಡಿಸಿತು. ಈ ಮೂರನೆಯ ದಾರಿ ಪೊಖಾರಿ ಎಂಬ ಊರಿನತ್ತ ಸಾಗಿತ್ತು. ಇಲ್ಲಿ ದಾರಿ ಸೇತುವೆ ಕಳೆದು ಉತ್ತರ ಕೊನೆಯಲ್ಲಿ ಲಂಬ ಕೋನದಲ್ಲಿ ಬಲಕ್ಕೆ ತಿರುಗುತ್ತದೆ. ಅಲ್ಲಿ ಅಡ್ಡ ಬಿದ್ದೊಂದು ರಕ್ಕಸ ಬಂಡೆಯಲ್ಲಿ, ದಾರಿಗೆಂದು ಸುರಂಗ ಮಾರ್ಗವನ್ನೇ ಮಾಡಿದ್ದರು. ಅದರಲ್ಲಿ ಹೊಕ್ಕು ಹೊರಟು, ಎಲ್ಲರನ್ನು ಸೇರಿಕೊಂಡೆವು. ಒಟ್ಟಾರೆ ಕರ್ಣಪ್ರಯಾಗದ ನಮ್ಮ ಅಲೆದಾಟ ಹಳೆ ಚಿತ್ರಕ್ಕೆ ಬಣ್ಣ ಕೊಡದಿದ್ದರೂ ವರ್ತಮಾನದ ತಿಳಿವಿಗೆ ಅಪಾರ ಹೊಳಪನ್ನಂತೂ ನಿಸ್ಸಂದೇಹವಾಗಿ ಕೊಟ್ಟಿತು. ಇಷ್ಟರಲ್ಲಿ ಉಪಾಹಾರ ಸೇವನೆ ಸಾಂಗವಾಗಿ ಮುಗಿದುದರಿಂದ ನಮ್ಮ ಹರಿದ್ವಾರದತ್ತಣ ಪಯಣ ಮುಂದುವರಿಯಿತು.

ಹತ್ತೂವರೆಯ ಸುಮಾರಿಗೆ ಬೆಳಗ್ಗಿನ ತಿಂಡಿ ತಿಂದವರಿಗೆ (ನಮಗಲ್ಲ!), ಅಪರಾಹ್ನ ಮೂರೂವರೆಯ ಸುಮಾರಿಗೆ ಊಟದ ನೆನಪಾದದ್ದು ಸರಿಯೇ! ಭೋಜನ ಧ್ಯಾನ ಶುರುವಾದಂತೆ, ಎಲ್ಲೂ ಅಲ್ಲದಲ್ಲಿ, ತುಸು ವ್ಯವಸ್ಥಿತವಾಗಿ ಕಾಣಿಸಿದ ದಾರಿ ಬದಿಯ ಹೋಟೆಲೊಂದರಲ್ಲಿ ಬಸ್ ನಿಂತೇ ಬಿಟ್ಟಿತು. ಭಾರೀ ಬೆಟ್ಟಕ್ಕೆ ಬೆನ್ನೊತ್ತಿ ನಿಂತಂತೆ, ಒಂದು ಮಹಡಿಯ ಹೋಟೆಲ್. ಎಡ ಮೂಲೆಯಲ್ಲೊಂದು ದಾಬಾ, ಬಲಕ್ಕೆ ಸುವಿಸ್ತಾರ ಭೋಜನಾಲಯ. ಪ್ರಾದೇಶಿಕ ಊಟಕ್ಕೇನೂ ಕೊರತೆಯಾಗದಂತೆ ಅತ್ತ ದಾಬಾದಲ್ಲಿ (ರೋಟಿ, ದಾಲ್, ಸಬ್ಜೀ, ಚಾವಲ್, ದಹೀ…) ತಯಾರಿಸಿ, ಇತ್ತ ಚೆನ್ನಾಗಿಯೇ ಬಡಿಸಿದರು. ರಸ್ತೆಯ ಇನ್ನೊಂದು ಮಗ್ಗುಲಿನಲ್ಲಿ, ಮರಗಳ ಮರೆಯ ಪಾತಾಳದಲ್ಲಿ, ಅಲಕನಂದೆಯ ಶ್ರುತಿ ನಿರಂತರವಿದ್ದಂತೆ, ಹೋಟೆಲ್ ಎದುರು ಬಂದು ನಿಂತ ನೀರ ಟ್ಯಾಂಕರ್, ಪುಟ್ಟ ಮೋಟಾರ್ ಚಾಲೂ ಮಾಡಿ ಹೋಟೆಲ್ ಟ್ಯಾಂಕ್ ತುಂಬತೊಡಗಿತ್ತು. ನನ್ನಲ್ಲಿ ಪ್ರಶ್ನೆ ಸಹಜವಾಗಿ ಮೂಡಿತ್ತು – ಬಗಲಲ್ಲಿ ಅಲಕನಂದಾ, ಅಲ್ಲದಿದ್ದರೂ ಅಸಂಖ್ಯ ಝರಿ ತೊರೆಗಳ ಮಡಿಲು, ಬಾವಿ-ಬೋರಿಗೂ ನೀರ ಕಾಣಿಸಬಹುದಾದ ನೆಲ – ಇಲ್ಲೂ ಟ್ಯಾಂಕರ್ರೇ? ಹೋಟೆಲ್ ಯಜಮಾನರ ಪುತ್ರ ಉತ್ತರಿಸಿದ, “ಹೌದು, ನದಿಯೋ ಎತ್ತಲಾಗದ ಆಳ, ಸ್ಥಿರವಿಲ್ಲದ ಪಾತ್ರೆ (ಕಾನೂನಿನ ಜಂಝಾಟವೂ ಇರಬಹುದು). ಬೆಟ್ಟದ ಮೇಲೆಲ್ಲಾದರೂ ತಿರುಗಿಸೋಣವೆಂದರೆ, ಸಮೀಪದಲ್ಲಿ ಝರಿಗಳ ಕೊರತೆ. ಕೊನೆಯ ಪ್ರಯತ್ನವೆಂದು ನಾಲ್ಕೈದು ಬಾರಿ ತೂತು ಬಾವಿಯೇನೋ ಕೊರೆಸಿ, ನೀರು ಸಿಕ್ಕಿ, ಎಲ್ಲ ಸಜ್ಜುಗೊಳಿಸಿದ್ದರಂತೆ. ಆದರೆ ನೆಲದ ಅಸ್ಥಿರತೆಯಲ್ಲಿ, ಹಾಕಿದ ಅಷ್ಟು ಪೈಪು, ಪಂಪುಗಳು ಇಂದು ಸಮಾಧಿಸ್ಥವಾಗಿವೆ!” ಇಂಥ ನೂರೆಂಟು ಸಂಕಟಗಳೊಡನೆ, ಅದನ್ನು ಕುಟುಂಬದ ಉದ್ದಿಮೆಯಾಗಿ, ದಾಬಾದಿಂದ ಭದ್ರ ಕಟ್ಟಡದವರೆಗೆ ಬೆಳೆಸಿದ ಸಾಹಸಿ ಜ್ಯೋತಿ ಸೇಠ್. ತಾರುಣ್ಯದಲ್ಲಿ ಭಾರತೀಯ ಸೇನೆಯ ಯೋಧ, ಹಲವು ಯುದ್ಧಗಳ ವೀರ, ಸದ್ಯ ಎಂಬತ್ತನ್ನು ಮೀರಿದ ಪ್ರಾಯದಲ್ಲೂ ಅಲ್ಲಿದ್ದ ಕಿರು ಅಂಗಡಿಯ ವಹಿವಾಟು ನೋಡಿಕೊಳ್ಳುತ್ತಿದ್ದರು. ಅವರನ್ನು ಅಭಿನಂದಿಸಿ, ನಮ್ಮ ನೆನಪಿಗಷ್ಟು ಪಟ ಕ್ಲಿಕ್ಕಿಸಿ, ಪಯಣ ಮುಂದುವರಿಸಿದೆವು.

ಸಂಜೆಗೆಂಪು ಅಡರುತ್ತಿದ್ದಂತೆ ನಾವು ಹರಿದ್ವಾರದಲ್ಲಿದ್ದೆವು. ನಗರದ ಹೊರವಲಯದಲ್ಲಿದ್ದ ಪೇಜಾವರ ಮಠದ ಶಾಖೆ, ಇಲ್ಲೂ ನಮಗೆ ಊಟ ವಸತಿಗಳನ್ನು ಒದಗಿಸಿತ್ತು. ಹರಿದ್ವಾರದಲ್ಲಿ ಗಂಗೆ ಸಹಜವಾಗಿ ಮತ್ತು ಮನುಷ್ಯ ನಿಯಂತ್ರಣದಿಂದಲೂ ಅನೇಕ ಸೀಳು, ಪ್ರವಾಹಗಳನ್ನು ಪ್ರದರ್ಶಿಸುತ್ತದೆ. ಅಲ್ಲಿನ ವಿವಿಧ ಸ್ನಾನಘಟ್ಟಗಳ ಗಲ್ಲಿಗಳಲ್ಲಿ ಬಸ್ಸು ಓಡಾಡಲಾರದೆಂದು, ಮೊದಲ ಬೆಳಿಗ್ಗೆಗೆ (೨೫-೧೦-೧೮) ನಮ್ಮನ್ನೆಲ್ಲ ಯುಕ್ತ ಗಂಗಾ ತಟಕ್ಕೊಯ್ಯಲು ಎರಡು ಟಂಟಂ ವ್ಯವಸ್ಥೆ ಮಾಡಿದ್ದರು. ಅಲ್ಲಿ ನಮ್ಮಿಬ್ಬರನ್ನುಳಿದು ಎಲ್ಲರೂ ಸ್ನಾನ, ತರ್ಪಣಾದಿಗಳಲ್ಲಿ ತೀವ್ರವಾಗಿ ತೊಡಗಿಕೊಂಡರು. ಅನಂತರ ಮಠಕ್ಕೆ ಮರಳಿ, ಕೊರತೆಯಾದವರು ಬಿಸಿನೀರ ಸ್ನಾನ ಮಾಡಿ, ಹೊಟ್ಟೆಗೆ ಪುಷ್ಕಳ ಅವಲಕ್ಕಿ ಕಾಫಿ ಜಡಿದು, ನಗರ ಪ್ರದಕ್ಷಿಣೆಗೆಂದು ನಮ್ಮ ಬಸ್ಸನ್ನೇ ಏರಿದೆವು. ಮೊದಲ ಭೇಟಿ – ಚಂಡಿಕಾದೇವಿ ಬೆಟ್ಟ. ಸಹಜ ಕಾಡು ಆವರಿಸಿದ ಪುಟ್ಟ ಗುಡ್ಡೆಯ, ಕಲ್ಲ ಶಿಖರದ ಮಂದಿರದಲ್ಲಿ ಸ್ಥಿತಳಾಗಿ, ಪರಿವಾರ ದೇವರುಗಳೊಡನೆ ಭಕ್ತರಿಗೆ ಆಶ್ವಾಸನೆ ಕೊಡುತ್ತಾಳೆ – ಚಂಡಿಕಾದೇವಿ. ಗುಡ್ಡೆಯ ಪಶ್ಚಿಮ ಮೈಯಲ್ಲಿರುವ ಸುಮಾರು ಮೂರೂವರೆ ಕಿಮೀ ಉದ್ದದ ಪುಟ್ಟಪಥ ಅಥವಾ ಈಚಿನ ಸುಮಾರು ಏಳ್ನೂರೈವತ್ತು ಮೀಟರ್ ಉದ್ದದ ತೊಟ್ಟಿಲ ಮಾರ್ಗ, ಭಕ್ತಾದಿಗಳನ್ನು ಶಿಖರ ಮುಟ್ಟಿಸಬಲ್ಲವು. ನಾವು ತೊಟ್ಟಿಲ ಮಾರ್ಗದಲ್ಲಿ ಮೇಲೇರಿ, ಮಂದಿರ ಸುತ್ತಿ, ಪ್ರಸಾದರೂಪವಾಗಿ ಸಿಕ್ಕ ಬಿಸಿಬಿಸಿ ಬಿಸಿಬೇಳೆ ಬಾತ್ ಚಪ್ಪರಿಸಿ ಮರಳಿದೆವು. ಶಿಖರದಲ್ಲೂ ತಪ್ಪಲಿನ ತೊಟ್ಟಿಲಮಾರ್ಗದ ಪ್ರವೇಶದಲ್ಲೂ ಪ್ರವಾಸೋದ್ಯಮದ ಫಸಲು ಕೊಯ್ಯಲು ಇರುವ ಅನೇಕ ಮಳಿಗೆ, ತಂತ್ರಗಳನ್ನು ನಾವಂತೂ ದೃಷ್ಟಿ ಮಾತ್ರದಲ್ಲಿ ಗ್ರಹಿಸಿ ತೃಪ್ತರಾದೆವು. ನಮ್ಮ ಮುಂದಿನ ಗುರಿ – ದಕ್ಷ ಪ್ರಜಾಪತಿ ನಡೆಸಿದ ಕುಖ್ಯಾತ ಹವನ ಕುಂಡದ ದರ್ಶನ.

ಹರಿದ್ವಾರದ ಗಲ್ಲಿಗಳಲ್ಲಿ ನುಸುಳಿ, ಪರದಾಡಿ, ಬಸ್ಸಿಗೊಂದು ನಿಲುದಾಣ ಕಲ್ಪಿಸಿ, ದಕ್ಷನ ಹೆಸರಿನ ಭಾರೀ ಮಂದಿರವನ್ನೇ ಕಂಡೆವು. ಕಾಲದ ಮಹಿಮೆಯಲ್ಲಿ ಅಥವಾ ಅಂಧಭಕ್ತಿಯಲ್ಲಿ, ‘ದಕ್ಷೇಶ್ವರ್ ಮಹಾದೇವ’ ಮಂದಿರದ ಒಳಗೆ ಯಜ್ಞ ಕುಂಡಾದಿಗಳು ದಾಕ್ಷಾಯಣಿಯ ದುರಂತ ಕತೆಯ ಸಾಕ್ಷಿಯಾಗಿ ಉಳಿದಿಲ್ಲ. ಮುಖ್ಯವಾಗಿ ಒಂದು ಖಾಲೀ ಯಜ್ಞಕುಂಡವೇನೋ ಇದೆ. ಉಳಿದಂತೆ ಕಟ್ಟಡದ ಬೇರೆ ಬೇರೆ ಎಡೆಗಳಲ್ಲಿ ಇನ್ನೇನೋ ದೇವಬಿಂಬಗಳು, ಆರಾಧನೆ, ತೀರ್ಥ, ಪ್ರಸಾದ ಎಲ್ಲಾ ನಡೆದಿತ್ತು. ತಮಾಷೆ ಎಂದರೆ, ನಿಜ ಮಹಾದೇವನ ಬಿಂಬವನ್ನು, (ಸಿಮೆಂಟ್?) ಇಂದಿನ ದಕ್ಷರೂ ಹೊರಗೇ ನಿಲ್ಲಿಸಿದ್ದಾರೆ! ಮಂದಿರದ ಅಂಗಳದಲ್ಲಿ, ಯಾವುದೇ ಪೂಜೆ, ಔಪಚಾರಿಕತೆಗಳಿಗೆ ಸಿಕ್ಕದಂತೆ ಕಟ್ಟೆಯ ಮೇಲೆ, ಬೇಲಿಯ ನಡುವೆ, ಎರಡಾಳೆತ್ತರಕ್ಕೆ ಕನಲಿದ ರುದ್ರ ದುರಂತ ದಾಕ್ಷಾಯಿಣಿಯ ಶವವನ್ನು ತೋಳ ತೊಟ್ಟಿಲಲ್ಲಿ ಎತ್ತಿ ಹಿಡಿದಂತೇ ಕಲ್ಲಾಗಿದ್ದಾನೆ! ಮುಂದಿನ ಪ್ರೇಕ್ಷಣೀಯ ಸ್ಥಳ – ಹಳೆಯದೊಂದು ರುದ್ರಾಕ್ಷೀ ಮರ. ಸಾಕಷ್ಟು ದೊಡ್ಡ ವಠಾರದ ಮೂಲೆಯಲ್ಲಿ, ಸುಮಾರು ನಲ್ವತ್ತಡಿ ಎತ್ತರಕ್ಕಿರುವ ರುದ್ರಾಕ್ಷಿ ಮರಕ್ಕೆ, ಸುಂದರ ಕಟ್ಟೆ, ಅದರ ಸುತ್ತೆಲ್ಲ ಶಿವಲಿಂಗದ ಬಿಂಬಗಳು, ಭದ್ರ ಬೇಲಿ ರಚಿಸಿದ್ದಾರೆ. ಇನ್ನೊಂದು ಭಾಗದಲ್ಲಿ ದೊಡ್ಡ ಭವನವೂ ಇದೆ. ಭವನದ ವಿಸ್ತಾರ ಜಗುಲಿಯಲ್ಲಿ ಹಲವು ನಮೂನೆಯ ರುದ್ರಾಕ್ಷಿಗಳು (ಅಲ್ಲಿನ ಮರದ್ದೂ ಧಾರಾಳ ಇದ್ದವು) ಮತ್ತು ಅನೇಕ ನಮೂನೆಯ ಪೂಜಾ ಸಾಮಾಗ್ರಿಗಳ (ಉದಾ: ಶಂಖ, ಜಪಮಣಿ, ಸ್ಫಟಿಕ ಹಾರ ಇತ್ಯಾದಿ) ವ್ಯವಸ್ಥಿತ ಮಾರಾಟ ವಿಭಾಗವೂ ಇತ್ತು. ಅವಕ್ಕೆ ನಮ್ಮಲ್ಲಿ ಗಿರಾಕಿಗಳೂ ಇದ್ದರು. ಇಷ್ಟಾಗುವಾಗಲೇ ಎಲ್ಲರ ಹೊಟ್ಟೆಯ ತಾಳ ಹೊರಗಿನ ಕಿವಿಗೆ ಮುಟ್ಟುವಷ್ಟಾಗಿತ್ತು. ಆದರೆ ಅಲ್ಲಿ ಯೋಗ್ಯ ಹೋಟೆಲಿರಲಿಲ್ಲ. ಬದಲಿಗೆ ಅಲ್ಲಿನ ವಿಶಿಷ್ಟ ರುಚಿಯನ್ನು ನಮಗೆಲ್ಲ ಪರಿಚಯಿಸುವುದಕ್ಕಾಗಿ ಎಕೆ ರಾಯರು, ದಾರಿ ಬದಿಯ ನಿಂಬೂ ಶರಬತ್ತು ಕೊಡಿಸಿದರು.

ಯೋಜನೆಯಂತೆ ಪೂರ್ವಾಹ್ನದ ಕೊನೆಯ ಭೇಟಿ – ಪವನ್ ಧಾಮ್. ಪವನಪುತ್ರ ಹನುಮಂತನಿಗೆ ಸಂಬಂಧಿಸಿದ ಪುರಾತನ ಮಂದಿರವೆಂದೇ ಪ್ರಚಾರ ಪತ್ರಗಳು ಹೇಳುತ್ತವೆ. ಆದರೆ ಇಲ್ಲಿ ನಮಗೆ ಮುಖ್ಯವಾಗಿ ಕಾಣಿಸಿದ್ದು ವೈಭವೋಪೇತ ಅಲಂಕಾರಗಳ ಕೆಲವು ಪುರಾಣ ಬೊಂಬೆಗಳು ಮತ್ತವನ್ನು ಆಧುನಿಕ ಪ್ರತಿಫಲಕ ಹಾಗೂ ದೀಪ ವ್ಯವಸ್ಥೆಯೊಡನೆ ವಿಶಿಷ್ಟವಾಗಿ ಸಂಯೋಜಿಸಿದ ಜಾಣ್ಮೆ. ಮ್ಯೂಸಿಯಂ ಒಂದರ ಅಂಕಣಗಳಂತೇ ಇರುವ ಆವರಣಕ್ಕೊಂದೊಂದು ದೊಡ್ಡ ಗೊಂಬೆಗಳನ್ನು ಕೂರಿಸಿದ್ದಾರೆ. ಅವುಗಳ ಎದುರಿನ ಕಟಕಟೆ ಆಧರಿಸಿ, ಮುಂಬಾಗಿ ಎಡ ಬಲ ನೋಡಿದರೆ ಒಂದೇ ಬೊಂಬೆಯ ಅಸಂಖ್ಯ ಪ್ರತಿಕೃತಿಗಳು ಅನಂತಕ್ಕೆ ಸಂದಂತೆ ಕಾಣುತ್ತದೆ. ಇದು ನನ್ನ ಲೆಕ್ಕಕ್ಕೆ ಸೌಂದರ್ಯ, ಬೆರಗು, ಭಕ್ತಿಗಳಿಗಿಂತ ಹೆಚ್ಚಿಗೆ ಎದುರುಬದಿರು ಕನ್ನಡಿ ಜೋಡಿಸಿಟ್ಟ ಕ್ಷೌರದಂಗಡಿಯ ನೆನಪನ್ನಷ್ಟೇ ಹುಟ್ಟಿಸಿತು. ಹೀಗೇ ಅದರೊಳಗೂ ಅಷ್ಟು ಕಾಲೆಳೆದು ಮುಗಿಯುವಾಗ ಸಂಜೆ ನಾಲ್ಕು ಕಳೆದಿತ್ತು.

ಉತ್ತರಾಖಂಡದಲ್ಲಿ ಈ ದಿನಗಳಲ್ಲಿ ಸೂರ್ಯಾಸ್ತ ಬೇಗನೇ ಆಗುತ್ತದೆ. ಹಾಗಾಗಿ ನಮ್ಮ ದಿನದ ಕೊನೆಯ ಕಾರ್ಯಕ್ರಮ – ಗಂಗಾರತಿ. ಅದು ತಪ್ಪಿಹೋಗದಂತೆ, ಪವನಧಾಮದ ಹೊರಗಿನ ಒಂದು ದಾಬಾದಲ್ಲಿ ಮಧ್ಯಾಹ್ನದ ಊಟದ ಶಾಸ್ತ್ರಮುಗಿಸಿದೆವು. ಮತ್ತೆ ಆರತಿ-ಪ್ರದರ್ಶನದ ಗಂಗಾತಟಕ್ಕೆ ಪಯಣಿಸಿದೆವು. ಹರಿದ್ವಾರದ ವಿಸ್ತೃತ ಗಂಗಾ ಪಾತ್ರೆಯಲ್ಲಿ ಅಸಂಖ್ಯ ಸೀಳುಗಳೂ ಕುದುರುಗಳೂ ಇವೆ. ಅವನ್ನು ಮೀರುವಂತೆ ಅಸಂಖ್ಯ ಗುಡಿಗಳು, ಸ್ನಾನ ಘಟ್ಟಗಳು, ಕಟ್ಟೆಗಳು, ಸೇತುವೆಗಳು ಎಲ್ಲಾ ಇವೆ. ಎಲ್ಲ ಸೀಳುಗಳಲ್ಲಿ, ಎಲ್ಲ ಕಾಲಕ್ಕೂ ನೀರು ತುಂಬಿ ಹರಿಯುತ್ತದೆಂದು ಇಲ್ಲ. ಈ ಗೊಂದಲಗಳ ನಡುವೆ, ಕಾಶಿಯಂತೆ ಇಲ್ಲೂ ಒಂದು ‘ಗಂಗಾರತಿ ಸಂಘ’ ಹುಟ್ಟಿಕೊಂಡು, ಮುಖ್ಯ ಎನ್ನುವ ಸೀಳಿನ ವಲಯದಲ್ಲಿ ಪ್ರತಿ ಸಂಜೆ ನದಿಗೆ ಆರತಿ ಬೆಳಗುವುದನ್ನು ಸಂಘಟಿಸುತ್ತಿದ್ದಾರೆ. ಅವರು ಮಠ ದೇವಾಲಯಗಳ ಬೆಂಬಲ, ಉದ್ಧಾಮ ಪೋಷಕರ ಆರ್ಥಿಕ ಬಲ ಮತ್ತು ನಿತ್ಯ ಬರುವ ಭಕ್ತಾದಿಗಳ ದಾನದಲ್ಲಿ ವ್ಯವಸ್ಥಿತವಾಗಿ ನಡೆದಿದ್ದಾರೆ.

ಪ್ರತಿ ಸಂಜೆಯ ಕತ್ತಲ ಮೊದಲ ಪಾದದಲ್ಲೇ (ನಾವು ಹೋದಂದು ಸಂಜೆ ಆರೂಕಾಲು), ವಾಹನ ನಿಲುಗಡೆ, ವೀಕ್ಷಣಾ ಸೌಕರ್ಯ, ಆರತಿ ಎಲ್ಲವನ್ನೂ ದಕ್ಷವಾಗಿ ನೋಡಿಕೊಳ್ಳುತ್ತಾರಂತೆ. ನಮ್ಮ ಬಸ್ಸಿಗೆ ಗಂಗಾರತಿಯ ನೆಲೆಯಿಂದ ಅನತಿ ದೂರದಲ್ಲೇ ಗಂಗೆಯದೇ ಒಣ ಪಾತ್ರೆಯಲ್ಲಿ ನಿಲುಗಡೆಯ ಅವಕಾಶ ಸಿಕ್ಕಿತ್ತು. ಸ್ವಲ್ಪೇ ಕಚ್ಚಾ ಮಾರ್ಗದಲ್ಲಿ ನಡೆದು, ಪಾದಚಾರಿಗಳಿಗೆಂದೇ ಮಾಡಿದ ವಿಸ್ತಾರ ಸೇತುವೆ ಕಳೆದರಾಯ್ತು. ಕತ್ತಲಾಗುತ್ತಿದ್ದಂತೆ ಹೆಚ್ಚುತ್ತಿದ್ದ ಜನಸಂದಣಿಯನ್ನು ಸ್ವಯಂ ಸೇವಕರು ವಿವಿಧ ಅಟ್ಟಳಿಗೆಗಳು, ನೀರ ಮೇಲಿನ ಸೇತು-ಗ್ಯಾಲರಿಗಳು, ದಂಡೆಯ ಮೆಟ್ಟಿಲ ಸಾಲು, ಇಂಟರ್ಲಾಕ್ ಹಾಕಿದ ನೆಲಗಳಲ್ಲೆಲ್ಲ ಶಿಸ್ತುಬದ್ಧವಾಗಿ ಕೂರಿಸುತ್ತಲೇ ಇದ್ದರು. ಸ್ಪಷ್ಟ ಮೈಕ್ ವ್ಯವಸ್ಥೆಯಲ್ಲಿ ಹರಿಯುತ್ತಿದ್ದ ಭಕ್ತಿ ಸಂಗೀತದೊಡನೆ ಆಗಾಗ ಎಚ್ಚರಿಕೆಯ ನುಡಿಗಳೂ ಬಿತ್ತರಗೊಳ್ಳುತ್ತಿದ್ದವು. ಸಂಜೆಯವರೆಗೂ ಅಲ್ಲಿನ ಗಂಗಾ ಕವಲಿನಲ್ಲಿ ನೀರು ತುಂಬಾ ಕಡಿಮೆಯಿತ್ತು. ಭಕ್ತರು, ಪಾದ ಮುಳುಗುವಷ್ಟೇ ನೀರಿನಲ್ಲಿ, ಮುಷ್ಟಿಗಾತ್ರದ ಅಸಂಖ್ಯ ಉರುಟು ಬಂಡೆಗಿಡಿದಂಥಾ ಪಾತ್ರೆಯಲ್ಲಿ, ಸ್ನಾನದ ಶಾಸ್ತ್ರ ಮುಗಿಸುತ್ತಿದ್ದರು. ನದಿಯ ಮೇಲಿನ ಪಾತ್ರೆಯಲ್ಲೆಲ್ಲೋ ಗಂಗಾರತಿಗಾಗಿಯೇ ಅಡ್ಡೈಸಿ ಕಟ್ಟಿದ ತಡೆ ಮತ್ತು ಕವಾಟಗಳ ವ್ಯವಸ್ಥೆ ಇದೆಯೆಂದು ಕೇಳಿದ್ದೆ. ಕತ್ತಲೇರುತ್ತಿದ್ದಂತೆ ಕವಾಟ ತೆರೆದದ್ದಕ್ಕೇ ಇರಬೇಕು, ನದಿ ಕಲ್ಲುಗಳನ್ನು ಮರೆಸುವಷ್ಟು ಮೈದುಂಬಿಕೊಂಡಿತು. ಭಕ್ತಿ ಸಂಗೀತ ಮೊರೆಯುತ್ತಿದ್ದಂತೆ, ಭಕ್ತ ಸಾಗರ ಜೈಕಾರ ಹಾಕುತ್ತಿದ್ದಂತೆ, ಆರೆಂಟು ದೊಡ್ಡ ದೊಡ್ಡ ದೀಪಗುಚ್ಛಗಳನ್ನು ನಿಗದಿತ ಅಂತರದಲ್ಲಿ ನಿಂತವರು, ನೃತ್ಯಶೈಲಿಯಲ್ಲಿ ಗಂಗೆಗೆ ಬೆಳಗಿದರು. ದಂಡೆಗೆ ಸಮೀಪ ಕುಳಿತವರಲ್ಲಿ ಅನೇಕ ಮಂದಿ ಮಣ್ಣಿನ ಹಣತೆಗಳಿಗೂ ಎಲೆಯ ಮೇಲಿಟ್ಟ ಕರ್ಪೂರಗಳಿಗೂ ಜ್ವಾಲೆ ಮುಟ್ಟಿಸಿ ಗಂಗಾ ಪ್ರವಾಹದಲ್ಲಿ ತೇಲಿ ಬಿಟ್ಟರು. ಹತ್ತು ಹದಿನೈದು ಮಿನಿಟಿನಲ್ಲಿ ಗಂಗಾರತಿಯ ವೈಭವ ಮುಗಿದಿತ್ತು.

ಗಂಗಾರತಿಯ ಬೆನ್ನಿಗೆ ನಾವು ಎದುರು ದಂಡೆಯಲ್ಲಿ ‘ಜಾತ್ರೆ ಸುತ್ತು’ವ ಕೆಲಸ ನಡೆಸಿದೆವು. ನಮ್ಮೂರ ಜಾತ್ರೆಗಳಂತೆಯೇ ಇದ್ದರೂ ಅವೆಲ್ಲ ನಿತ್ಯ ಮಳಿಗೆಗಳು. ಯಾತ್ರಾರ್ಥಿಗಳನ್ನು ಆಕರ್ಷಿಸಲು ಸಾವಿರಾರು ಬಗೆಯ ಸಾಮಗ್ರಿಗಳ ಸಂತೆ ನಡೆಸಿದ್ದಾರೆ. ಅದರಲ್ಲೊಂದೆರಡು ಗಂಟೆ ಗಸ್ತು ಹೊಡೆದು, ಬಸ್ ಸೇರಿಕೊಂಡೆವು. ಊಟದ ಸಮಯಕ್ಕೆ ಸರಿಯಾಗಿ ಮತ್ತೆ ಪೇಜಾವರ ಮಠ ತಲಪಿದ್ದೆವು. ಮಧ್ಯಾಹ್ನದ ಕೊರತೆ ನೀಗುವಂತೆ ಪುಷ್ಕಳ ಉಂಡದ್ದಾಯ್ತು. ಇನ್ನೇನು ಪ್ರವಾಸದ ಕೊನೆಯ ರಾತ್ರಿಯನ್ನು ಗಮ್ಮತ್ತಿನ ನಿದ್ರೆಯಲ್ಲಿ ಮುಗಿಸುವುದೆಂದುಕೊಂಡಿದ್ದೆ. ಆಗ ಎಕೆ ರಾಯರು, ಪೂರ್ವಸೂಚನೆ ಕೊಟ್ಟಂತೇ ದೊಡ್ಡದಾಗಿದ್ದ ನಮ್ಮ ಕೋಣೆಯಲ್ಲೇ ಎಲ್ಲರ ಅನೌಪಚಾರಿಕ ಸಭೆ ನಡೆಸಿದರು. ಅದರ ಉದ್ದೇಶ ಒಟ್ಟು ಯಾತ್ರೆಯ ಕುರಿತು, ಎಲ್ಲರೊಡನೊಂದು ಆಪ್ತ ವಿಚಾರವಿನಿಮಯ (ಸತ್ಸಂಗ್!). ಹೆಚ್ಚಿನೆಲ್ಲರೂ ಚುಟುಕಾಗಿಯೇ ಮತ್ತು ಬಹುತೇಕ ಪ್ರಾಮಾಣಿಕವಾಗಿಯೇ ತಮ್ಮ ಭಕ್ತಿ-ಭಾವ ಪೂರೈಸಿದ ಸಂತೋಷ ಹಂಚಿಕೊಂಡರು, ಅವಕಾಶ ಮಾಡಿಕೊಟ್ಟವರಿಗೆ ಕೃತಜ್ಞತೆಗಳನ್ನು ತಿಳಿಸಿದರು. ಆಗ ನಾವಿಬ್ಬರೂ ಎಕೆ ರಾವ್ ಮತ್ತು ಹರಿಪ್ರಸಾದರ ಔದಾರ್ಯ ಮತ್ತು ವಿಶ್ವಾಸಕ್ಕೆ ನ್ಯಾಯ ಒದಗಿಸಲು, ನಮ್ಮ ಭಿನ್ನಮತವನ್ನು ಬಿಡಿಸಿಡುವುದು ಅನಿವಾರ್ಯವಾಯ್ತು. ನಾನು ವಾಗ್ಮಿಯಲ್ಲ. ಹಾಗಾಗಿ ಅಲ್ಲಿನ ಸೂತ್ರರೂಪದ ಮಾತುಗಳನ್ನು ಇಲ್ಲಿ ಸ್ವಲ್ಪ ವಿವರದಲ್ಲಿ ದಾಖಲಿಸುತ್ತಿದ್ದೇನೆ.

ಈ ಕಥನದ ಆದಿಯಲ್ಲೇ ಹೇಳಿದಂತೆ ನಾವು ಕೇವಲ ಅರ್ಧ ಗಂಟೆಯ ಮುನ್ಸೂಚನೆ ಮತ್ತು ನಿರ್ಧಾರದಲ್ಲಷ್ಟೇ ಈ ಯಾತ್ರೆಯಲ್ಲಿ ಸೇರಿಹೋದವರು. ಹಾಗೆ ನಿರ್ಧರಿಸುವಲ್ಲಿ ನಮಗೆ ಹೊಳೆದ ವಿಚಾರ ಒಂದೇ – ಇಪ್ಪತ್ತೆಂಟು ವರ್ಷಗಳ ಹಿಂದೆ, ಕೇವಲ ಸಾಹಸ-ಪ್ರವಾಸದ ಯೋಜನೆಯಲ್ಲಿ ನಾವು ಕೇದಾರವನ್ನು ನೋಡಿದ್ದೆವು. ಈಗ ಅದು ಐದು ವರ್ಷಗಳ ಹಿಂದಿನ ಭೀಕರ ಪ್ರವಾಹದಲ್ಲಿ ತೊಳೆದು ಹೋಗಿ, ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಅದನ್ನೀಗ ನಾವು ನೋಡಬಹುದು. ಅದೇ ಇಪ್ಪತ್ತೆಂಟು ವರ್ಷಗಳ ಹಿಂದೆ, ನಾವು ಚತುರ್ಧಾಮಗಳ ಲೆಕ್ಕದ ಕೊನೆಯಾಗಿ ಬದರೀನಾಥವನ್ನು ನೋಡಬೇಕಿತ್ತು. ಆದರೆ ನನ್ನ ಅನಾರೋಗ್ಯದಿಂದಾಗಿ ಹೋಗಲಾಗಲಿಲ್ಲ. (ನೋಡಿ: ಕಾಯಿಲ ಮನಸ್ಕತೆಗೆ ಪರಮಾನಂದ ದಾರಿ) ಅದನ್ನೂ ಈಗ ನಾವು ನೋಡಬಹುದು. ನಾವು ಕೈಗೊಂಡ ಯಾವುದೇ ಪ್ರವಾಸದಲ್ಲಿ ‘ತೀರ್ಥಯಾತ್ರೆ’ ನಮ್ಮ ಕಲ್ಪನೆಯಲ್ಲೂ ಬಂದದ್ದಿಲ್ಲ. (ತಿರುಪತಿ, ವೈಷ್ಣೋದೇವಿ ಕಥನಗಳನ್ನು ನನ್ನ ಜಾಲತಾಣದಲ್ಲಿ ಓದಿಕೊಳ್ಳಬಹುದು)

ವೈಯಕ್ತಿಕವಾಗಿ ನಾವು ಯಾವುದೇ ವೈದಿಕ ಆಚರಣೆ ಮತ್ತು ನಂಬಿಕೆಗಳನ್ನು ಇಟ್ಟುಕೊಂಡವರಲ್ಲ. ವೈಜ್ಞಾನಿಕ ಮನೋಧರ್ಮದಲ್ಲೇ ಸುಖ ಕಂಡವರು. ಇದಕ್ಕೆ ಪೂರಕವಾಗಿ ಸಣ್ಣ ಒಂದು ಉದಾಹರಣೆ ಕೊಡುತ್ತೇನೆ. ನನ್ನ ತಂದೆ ಮತ್ತು ತಾಯಿಯರು (ಬೇರೆ ಬೇರೆ ಕಾಲದಲ್ಲಿ) ವಯೋಸಹಜವಾಗಿ ತೀರಿಕೊಂಡಾಗ, ಅವರಿಬ್ಬರ ಲಿಖಿತ ಇಚ್ಛೆ ಮತ್ತು ನಮ್ಮ (ಮೂವರು ಮಕ್ಕಳು) ಅನುಮೋದನೆಯಂತೇ ಅವರ ಮೃತ ದೇಹವನ್ನು ವೈದ್ಯಕೀಯ ಕಾಲೇಜೊಂದಕ್ಕೆ ದಾನ ಮಾಡಿದ್ದೇವೆ. (ಹೆಚ್ಚಿನ ಓದಿಗೆ ನೋಡಿ: ದೇಹದಾನ ಮತ್ತು ಅಮ್ಮನ ವಿದಾಯದೊಡನೆ ಉಕ್ಕಿದ ನುಡಿಗಳು) ಉತ್ತರೋತ್ತರದಲ್ಲಿ ಯಾವುದೇ ಸಾಂಪ್ರದಾಯಿಕ ಔರ್ಧ್ವದೇಹಿಕ ವಿಧಿಗಳನ್ನು ನಾವು ನಡೆಸಿದ್ದೂ ಇಲ್ಲ, ಆ ಕುರಿತು ಎಂದೂ ಕೊರಗಿದ್ದೂ ಇಲ್ಲ. ಹಾಗಾಗಿ ನಾವು ಈ ಯಾತ್ರಾ ತಂಡದ ಮುಖ್ಯ ಕಲಾಪಗಳ ಲೆಕ್ಕದಲ್ಲಿ ಪ್ರತ್ಯೇಕವಾಗಿಯೇ ಉಳಿದುಹೋದೆವು. ಗಮನಿಸಿ, ಇದನ್ನು ನಾವು ಬಯಸಿ ಯಾತ್ರೆಗೆ ಬಂದವರೂ ಅಲ್ಲ, ಇತರರನ್ನು ಸಣ್ಣ ಮಾಡಲು ಆ ಕ್ಷಣದಲ್ಲಿ ತಳೆದ ನಿಲುವೂ ಅಲ್ಲ.

ಕೌಟುಂಬಿಕವಾಗಿ ನಮ್ಮ ಇತರೆಲ್ಲ ಸಂಬಂಧಿಗಳೂ ಎಲ್ಲ ಸಾಂಪ್ರದಾಯಿಕ ವೈದಿಕಾಚರಣೆಗಳನ್ನು ನಡೆಸುತ್ತಾರೆ ಮತ್ತು ನಮ್ಮ ನಿಲುವನ್ನು ತಿಳಿದೇ ಆಮಂತ್ರಿಸುತ್ತಾರೆ. ನಾವಾದರೂ ಸಮಯಾನುಕೂಲವಿದ್ದರೆ ಅದರಲ್ಲಿ ಕೇವಲ ಆತ್ಮೀಯರ ಕೂಟ ಎಂದೇ ಭಾಗವಹಿಸುತ್ತೇವೆ. ಎಂದೂ ಅವರ ವೈಯಕ್ತಿಕ ನಂಬಿಕೆ ಮತ್ತು ಆಚರಣೆಗಳನ್ನು ಅವಮಾನಕರವಾಗಿ ಕಂಡದ್ದಿಲ್ಲ, ಮತ್ತವರು ಕೇಳದೇ ನಮ್ಮ ಮಿತಿಯಲ್ಲಿ ವಿಮರ್ಶಿಸಿದ್ದೂ ಇಲ್ಲ. ಅದೇ ಸಹೃದಯತೆಯಲ್ಲಿ, ಈ ಯಾತ್ರೆಯಲ್ಲೂ ನಾವು ತಂಡದ ಇತರರ ಪ್ರಾರ್ಥನೆ, ಭಜನೆ, ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಕಲಾಪಗಳನ್ನು ಅನುಭವಿಸಿದ್ದೇವೆ. ನನಗೆ ಪಾಂಡಿತ್ಯದ ಭ್ರಮೆ ಇಲ್ಲ. ಆದರೆ ಎಲ್ಲೂ ಹೇಳಿಕೊಳ್ಳಬಹುದಾದ ಮತ್ತು ಸಮಾಜಕ್ಕೆ ಕೆಡುಕಾಗದ ಜೀವನ ತತ್ತ್ವವನ್ನು ಕಂಡುಕೊಂಡು, ಅನುಸರಿಸುವ ಧೈರ್ಯವಿದೆ. ಇವೆಲ್ಲದರೊಡನೆ “ನಿಮ್ಮೊಡನಿದ್ದೂ ನಿಮ್ಮಂತಾಗದಿದ್ದ” (ಕೆ.ಎಸ್. ನಿಸಾರ್ ಅಹಮದ್ ಮಾತು!) ನಮಗೆ ಎಲ್ಲೂ ಪರಕೀಯತೆ ಕಾಡದಂತೆ ನೋಡಿಕೊಂಡ ನಿಮಗೆಲ್ಲರಿಗೂ ಧನ್ಯವಾದಗಳು.

ಬಹಳ ಮುಖ್ಯವಾಗಿ, ನಮ್ಮ ಮೇಲೆ ಪೂರ್ಣ ವಿಶ್ವಾಸವಿಟ್ಟು ಕರೆಸಿಕೊಂಡ ಹರಿಪ್ರಸಾದರಿಗೆ ಮತ್ತು ಹರಿಯ ನಿರ್ಧಾರವನ್ನು ಪೂರ್ಣ ಗೌರವಿಸುವಂತೆ ನಮ್ಮನ್ನು ನಡೆಸಿಕೊಂಡ ಅನಂತ ಕೃಷ್ಣ ರಾಯರಿಗೆ ಹಾರ್ದಿಕ ಕೃತಜ್ಞತೆಗಳು. ನನ್ನ ಇತರ ಎಲ್ಲಾ ಬರಹಗಳಂತೆ ಈ ಪ್ರವಾಸ ಕಥನವೂ ಸಂಘಟಕರಿಗೆ ಮತ್ತು ಸಾರ್ವಜನಿಕರಿಗೆ ಉಪಯೋಗವಾಗಬಹುದು ಎಂದೇ ಸ್ವಾನುಭವದ ಬಲದಲ್ಲಿ ಬರೆದಿದ್ದೇನೆ. ನಮ್ಮ ಹೆಚ್ಚುಗಾರಿಕೆಯನ್ನು ಮೆರೆಯಿಸಲು ಖಂಡಿತ ಅಲ್ಲ.

ಮತ್ತೆ ಶುಕ್ರವಾರ (೨೬-೧೧-೧೮) ಬಂದಿತ್ತು, ಪ್ರವಾಸದ ಕೊನೆಯ ದಿನ. ಪೇಜಾವರ ಮಠದ ಆಸುಪಾಸಿನಲ್ಲೇ ಇನ್ನೂ ಕೆಲವು ಸಂಗತಿಗಳನ್ನು ನಡೆದೇ ತೋರಿಸುವ ಉತ್ಸಾಹ ಹರಿಪ್ರಸಾದರದ್ದು. ಹಾಗೆ ಮೊದಲ ಭೇಟಿ – ಪೇಜಾವರ ಮಠಕ್ಕೇ ದಾನ ಬಂದಿದ್ದ ಇನ್ನೊಂದು ವಠಾರ. ಅಲ್ಲಿ ಭರ್ಜರಿ ಭವನವೊಂದನ್ನು ನಿರ್ಮಿಸಿ, ಅಷ್ಟೇ ಬೃಹತ್ತಾಗಿ ಕರಿಕಲ್ಲಿನಲ್ಲಿ, ಶ್ರೀಕೃಷ್ಣನ ಪಾದಮೂಲದಲ್ಲಿ ಕುಳಿತ ಆಚಾರ್ಯ ಮಧ್ವರ ವಿಗ್ರಹ ಸ್ಥಾಪಿಸಿದ್ದರು. ಇದು ಅತ್ತ ಸಾರ್ವಜನಿಕ ದೇವಳದ ಸ್ಥಾನಕ್ಕೇರದೆ, ಇತ್ತ ಸಾಮಾಜಿಕ ಉಪಯುಕ್ತತೆಯನ್ನೂ ಸಾಧಿಸದೇ ವ್ಯರ್ಥವಾದಂತೇ ಕಾಣಿಸಿತು.

“ನನಗೂ ಅನಂತಣ್ಣನಿಗೂ ಹರಿದ್ವಾರಕ್ಕೆ ಬಂದಾಗ, ಶ್ರೀಕಾಶೀಮಠ ಸಂಸ್ಥಾನದ ಸುಂದರ ಉದ್ಯಾನವನದಲ್ಲೊಂದು ವಾಕ್ ಮತ್ತು ಅವರ ಖಾಸಗೀ ಗಂಗಾ ಸ್ನಾನ ಘಟ್ಟಕ್ಕೊಂದು ಭೇಟಿ ಆಗಲೇಬೇಕು,” ಎಂದು ಹೇಳುತ್ತ ಅಲ್ಲಿಗೂ ಹರಿ ಕರೆದೊಯ್ದರು. ಆ ವಠಾರ ಸಾಕಷ್ಟು ದೊಡ್ಡದೂ ವ್ಯವಸ್ಥಿತವೂ ಇತ್ತು. ಮಠದ ಮಗ್ಗುಲುಗಳಲ್ಲಿದ್ದ ವಸತಿ ಕಟ್ಟಡಗಳನ್ನು ಉಳಿದು, ಎಲ್ಲೆಡೆ ವ್ಯವಸ್ಥಿತ ಹಸಿರು ಬೆಳೆಸಿದ್ದಾರೆ, ಅದನ್ನು ಸಾರ್ವಜನಿಕ ವಿಹಾರಕ್ಕೆ ಮುಕ್ತಗೊಳಿಸಿದ್ದಾರೆ. ನಾವು ಉದ್ಯಾನದಲ್ಲಿ ನಡೆದು, ಆಚಿನ ಗಂಗಾತಟದ ದರ್ಶನವನ್ನೂ ಪಡೆದೆವು. ಕಟ್ಟೆಯೇನೋ ನಮ್ಮದು, ಹಾಗೆಂದು ಸಾರ್ವಜನಿಕ ಬಳಕೆಯ ನದಿಯನ್ನು ಹೇಳಲಾದೀತೇ. ಗಂಗೆಯ ಆ ಶಾಖೆಯಲ್ಲಿ ನೀರು ಕಡಿಮೆ ಇತ್ತು. ಸಹಜವಾಗಿ ಪಾತ್ರೆಯ ಅಂಚುಗಳಲ್ಲಿ ಎಲ್ಲೆಲ್ಲಿನ ಮಾಲಿನ್ಯ ಮಡುಗಟ್ಟಿ, ನೊಜೆ ಹುಲ್ಲು ಬೆಳೆದು ಸ್ನಾನಯೋಗ್ಯವಾಗಿ ತೋರಲಿಲ್ಲ.

ಕೊನೆಯದಾಗಿ ಸ್ವಾಮೀ ಗೀತಾನಂದಜೀ ಮಹಾರಾಜ್ ಎಂಬ ಸನ್ಯಾಸಿ ಕಟ್ಟಿದ್ದ ಗೋಶಾಲೆಯೊಂದನ್ನು ಹುಡುಕಿ ಹಿಡಿದೆವು. ಶ್ರೀ ಗೀತಾ ಕುಟೀರ್ ಎಂಬ ಹೆಸರಿನಲ್ಲಿ, ಅಸಂಖ್ಯ ಮಕ್ಕಳ ಸನಿವಾಸ ಸಂಸ್ಕೃತ ಪಾಠಶಾಲಾ ಮತ್ತು ಹಿತ್ತಿಲಿನಲ್ಲಿ ದೊಡ್ಡ ಸಂಖ್ಯೆಯಲ್ಲೇ (ಬೀಡಾಡಿ?) ಹಸುಗಳ ವ್ಯವಸ್ಥಿತ ಕೊಟ್ಟಿಗೆಯನ್ನೂ ನಡೆಸಿದ್ದರು. ದನಗಳನ್ನೆಲ್ಲ ಬಿಸಿಲಂಗಳದಲ್ಲಿ ಕೂಡಿಟ್ಟು, ದೈನಂದಿನ ಕ್ರಮದಂತೆ ಕೊಟ್ಟಿಗೆಯನ್ನು ಚಂದಕ್ಕೆ ತೊಳೆದು, ಹುಲ್ಲು ನೀರಿನ ಹೊಸ ವ್ಯವಸ್ಥೆ ನಡೆದಿತ್ತು. ಮೂರು ನಾಲ್ಕು ಭಾರೀ ಹೋರಿಗಳನ್ನಷ್ಟೇ ವಠಾರದೊಳಗಿನ ದಾರಿಯ ಅಂಚುಗಳಲ್ಲಿ ಖಾಯಂ ಕಟ್ಟಿದ್ದಂತಿತ್ತು. ವಸತಿ ಶಾಲೆ ಬೆಳಗ್ಗಿನ ಉಪಾಹಾರದ ಸಂಭ್ರಮದಲ್ಲಿದ್ದುದರಿಂದ, ಮಂತ್ರಘೋಷಾದಿ ಮನೋಹರ ವಾತಾವರಣ ನಮಗೆ ಸಿಗಲಿಲ್ಲ. ಅಲ್ಲೇ ಎಕೆ ರಾವ್ ಮತ್ತು ಕೆಲವರು ಹೀಗೇ ಬೇರೊಂದು ದಿಕ್ಕಿನಲ್ಲಿ ಸುತ್ತು ಹಾಕಿ ಬಂದವರೂ ಸಿಕ್ಕಿದ್ದರು.

ಒಂದು ಮುಂಜಾವಿನ ಸುತ್ತಾಟ ಎಂದು ಹೊರಟ ನಮಗೆ ದಾನನೆಲದ ಅಯಾಚಿತ ಮೂರು ಮಾದರಿಗಳು ಕಾಣ ಸಿಕ್ಕಿದ್ದು ಆಕಸ್ಮಿಕವೇ ಸರಿ. ಅವುಗಳ ಹೋಲಿಕೆ, ವೈರುಧ್ಯಾದಿಗಳ ಚಿಂತನೆಯನ್ನು ಓದುಗರಾದ ನಿಮಗೇ ಬಿಡುತ್ತೇನೆ. ನಾವು ಪೇಜಾವರ ಮಠದ ಎಂಟು ಗಂಟೆಯ “ತಿಂಡಿಗೆ ಬನ್ನೀ” ಮೊದಲ ಕರೆಯನ್ನು ತಪ್ಪಿಸಿಕೊಳ್ಳದಂತೆ ಮರಳಿದ್ದೆವು. ಬಿಸಿನೀರ ಸ್ನಾನ, ಮನಸ್ವೀ ಊರ ರುಚಿಯ ಉಪಾಹಾರ ಮಾಡಿಯಾಗುತ್ತಿದ್ದಂತೆ, ಊರಿನತ್ತ ಗಂಟುಮೂಟೆ ಕಟ್ಟುವ ಸಮಯ ಬಂದಿತ್ತು. ಮಧ್ಯಾಹ್ನ ಒಂದಕ್ಕೆ ವಿಮಾನ ಏರುವ ಸಮಯವಾದರೂ ಹತ್ತೂವರೆ ಹನ್ನೊಂದಕ್ಕೆ ನಿಲ್ದಾಣದಲ್ಲಿರುವಂತೆ ಡೆಹ್ರಾಡೂನ್ ಸೇರಿಕೊಂಡೆವು. ಈ ಸಲ ನಮ್ಮ ಹಾರಾಟ ಹೆಚ್ಚು ಸರಳ. ಜೆಟ್ ಏರ್ವೇಸ್ ತನ್ನ ಊಟದ ಹಾರಾಟದಲ್ಲಿ (ದಿಲ್ಲಿ ಮುಟ್ಟದೆ) ನೇರ ಮುಂಬೈ ಮುಟ್ಟಿಸಿತ್ತು. ಅಲ್ಲಿಂದ ಇನ್ನೊಂದೇ ಜೆಟ್ ಏರ್ವೇಸ್ ಸಂಜೆ ಆರರ ಸುಮಾರಿಗೆ ತನ್ನ ಎಡದಿಂದ ಬಲಕ್ಕೆ: ಅಪರ್ಣ, ರೋಹಿತ್, ಎಕೆರಾವ್,ಶಾಲಿನಿ ಜೋ, ಸೌರಭ್ ಜೋ, ರಘುಪತಿ, ಶ್ರೀಧರ್ ಜೋ, ಶ್ರೀವತ್ಸ ಕೆ, ನಾರಾಯಣಿ, ನರೇಂದ್ರನಾಥ್, ಇಂದುಮತಿ, ಸುಬ್ರಹ್ಮಣ್ಯ ಭ, ದುರ್ಗಾ ಪ್ರ, ದೇವಕಿ, ಹರಿ ಪ್ರಸಾದ್ ಉಪಾಹಾರದ ಹಾರಾಟದಲ್ಲಿ ಮರಳಿ ಮಂಗಳೂರು ಕಾಣಿಸಿತ್ತು. ನಮ್ಮನ್ನು ವಾರದ ಹಿಂದೆ ಮನೆಯಿಂದ ಏಳು ಗಂಟೆಗೆ ಒಯ್ದಿದ್ದ ಕಾರೇ ವಿಮಾನ ಕಾದಿದ್ದು, ಎಂಟರ ಸುಮಾರಿಗೆ ಮನೆ ಮುಟ್ಟಿಸಿತ್ತು.

(ಮುಗಿದುದು)