( ಓದಿ: ಕಳೆದ ವರ್ಷದ ‘ಹಾಮಭ ಸ್ಮೃತಿದಿನ’ ) ಪುಸ್ತಕೋದ್ಯಮ ನಿಸ್ಸಂದೇಹವಾಗಿ ನನಗೆ ಬಹು ಪ್ರೀತಿಯ ವೃತ್ತಿ. ಅದು ನನಗೆ ಆದಾಯ ಮತ್ತು ಬಹಳ ಗೌರವಯುತ ಜೀವನವನ್ನು ಕೊಟ್ಟಿದೆ. ನಾನೂ ಅದನ್ನು ಅಷ್ಟೇ ಜವಾಬ್ದಾರಿಯಲ್ಲಿ ನಡೆಸಿದೆ, ಕೇವಲ ಹೊಟ್ಟೇಪಾಡು ಎಂದಲ್ಲ. ಹಾಗಾಗಿ ಮೂವತ್ತಾರು ವರ್ಷಗಳನಂತರ ಅದರ ಮೇಲಿನ ಪ್ರೀತಿ ಇಳಿಮುಖವಾದಾಗ, ನನ್ನ ಜೀವನ ಸ್ಥಿರವೆನ್ನಿಸಿದಾಗ, ದಿಢೀರನೆ ನಿವೃತ್ತನಾದೆ (೨೦೧೨) (ಓದಿ: ಅತ್ರಿ ಮುಚ್ಚಿ, ವಾನಪ್ರಸ್ಥ ). ಹಾಗೆಂದು ತುಮರಿಯಲ್ಲಿ ನಾನು ಆತ್ಮ ಕತೆ ಹೇಳಲಿಲ್ಲ. ಮೊದಲು ಹತ್ತು – ಹದಿನೈದು ಮಿನಿಟಿನ ಮಾತು, ಅನಂತರ ಚರ್ಚೆ ಎಂದುಕೊಂಡಿದ್ದೆ. ಆದರೆ ಮೂವತ್ತಾರು ವರ್ಷಗಳ ನೆನಪಿನ ಹೊರೆ ನನ್ನನ್ನು ದಿಕ್ಕೆಡಿಸಿತು. ಆಗ ವಿಷಯ ಹಾಗೂ ಸಮಯಗಳ ಸಮತೋಲನಕ್ಕಾಗಿ ಪುಟ್ಟ ಪ್ರಬಂಧವನ್ನೇ ಬರೆದೆ. ಅದನ್ನೇ ಮುಂದೆ ಓದಿ:

ಹಿನ್ನೆಲೆ

ನಾನು ಬಯಸಿ ಪುಸ್ತಕ ವ್ಯಾಪಾರಿಯಾದವನಲ್ಲ. ನಾನು ೧೯೭೩ – ೭೪ನೇ ವರ್ಷದ ಇಂಗ್ಲಿಷ್ ಎಮ್ಮೆಯಲ್ಲಿದ್ದೆ. ಜತೆಗೇ ಹವ್ಯಾಸೀ ಪರ್ವತಾರೋಹಿಯೂ ಆಗಿದ್ದೆ. ಸಹಜವಾಗಿ ಎಮ್ಮೆ ನಡುವಣ ಬೇಸಗೆ ರಜೆಯಲ್ಲಿ ಕರ್ನಾಟಕ ಸೈಕಲ್ ಯಾನದ ಸಾಹಸ ಯೋಜಿಸಿದ್ದೆ. ಅದನ್ನು ತಿಳಿದ ನಮ್ಮ ಕುಟುಂಬದ ಹಿರಿಯ ಸ್ನೇಹಿತ, ಪುಸ್ತಕ ಪ್ರಕಾಶಕ ಡಿವಿಕೆ ಮೂರ್ತಿ, ನನಗೊಂದು ಭಿನ್ನ ಸವಾಲು ಒಡ್ಡಿದರು. ಅವರು ವೈವಿಧ್ಯಮಯ ಕನ್ನಡ ಪುಸ್ತಕಗಳು ತುಂಬಿದ ನಲ್ವತ್ತೈವತ್ತು ಭಾರೀ ಭಾಂಗಿಗಳನ್ನು ಲಾರಿಯಲ್ಲಿ ಮುಂಬೈಗೆ ಕಳಿಸಿದರು. ಮತ್ತೆ ಆ ರವಾನೆ ರಸೀದಿಯನ್ನೂ ರೈಲ್ವೇ ಟಿಕೆಟನ್ನೂ ನನ್ನ ಕೈಯಲ್ಲಿಟ್ಟು “ಮುಂಬೈ ನೋಡು, ಮನೆಮನೆಗೆ ಕನ್ನಡ ಮಾರು” ಎಂದು ಶುಭ ಹಾರೈಸಿದರು. ನಾನು ಎರಡನೇ ಯೋಚನೆ ಮಾಡದೇ ಸೈಕಲ್ ಬಿಟ್ಟು, ರೈಲು ಹತ್ತಿದೆ. ಅದೇ ಪ್ರಥಮ ಬಾರಿಗೆ ಮುಂಬೈ, ಪುಣೆ ನೋಡುವ ಅವಕಾಶ ತಪ್ಪಿಸಿಕೊಳ್ಳುವುದುಂಟೇ? ಸುಮಾರು ಒಂದೂವರೆ ತಿಂಗಳ ಭರ್ಜರಿ ಪುಸ್ತಕ ಮಾರಾಟವನ್ನೂ ಮಾಡಿದೆ. ಅಷ್ಟಕ್ಕದುವೇ ನನ್ನನ್ನು ವೃಕ್ತಿಯನ್ನಾಗಿ ವರಿಸಿತ್ತು.

ಎಲ್ಲ ಬಿಟ್ಟು ಭಂಗಿ ನೆಟ್ಟಾ?

ಮುಂಬೈ ಯಾತ್ರೆಗೂ ಮುನ್ನ ನಾನು ವೃತ್ತಿಜೀವನದ ಕುರಿತು ಕೆಲವು ಅರೆಬರೆ ಪ್ರಯತ್ನ ನಡೆಸಿದ್ದೆ. ಬೀಯೇಯಲ್ಲಿದ್ದಾಗ ಓಟೀಯೆಸ್ ಮೂಲಕ ಸೈನ್ಯ, ತನಿಖಾ ಪತ್ರಕರ್ತ, ಐಪೀಯೆಸ್ ಮೂಲಕ ಪೋಲಿಸ್, ಕೊನೆಗೆ ಎಲ್ಲ ತಪ್ಪಿದರೂ ಅಧ್ಯಾಪಕ ಹುದ್ದೆ ಸಿಕ್ಕೀತು ಎಂಬ ಭರವಸೆ ಇತ್ತು. ಅವೆಲ್ಲವನ್ನೂ ಹತ್ತಿಕ್ಕಿ ೧೯೭೫ರಲ್ಲಿ ಮಂಗಳೂರಿನಲ್ಲಿ ಪೂರ್ಣ ಪ್ರಮಾಣದ ಪುಸ್ತಕ ಮಳಿಗೆ ತೆರೆದೆ

 

ಮಳಿಗೆಗೆ ಮೂಲಧನ, ಧನವಲ್ಲಾ!

ನನ್ನ, ಅಂದರೆ ತಂದೆ ಕೊಡಬಹುದಾಗಿದ್ದ ಹಣದ ಬಂಡವಾಳ ಬಹುತೇಕ ಸೊನ್ನೆ. ಆದರೆ ಡಿವಿಕೆ ಮತ್ತು ಅವರ ಪರಿಚಯದ ಬಲದಲ್ಲಿ ಎಲ್ಲಾ ಪ್ರಕಾಶಕರು, ನಿಶ್ಶರ್ತವಾಗಿ ನನ್ನಂಗಡಿಯನ್ನು ತುಂಬಿದರು. ಪರೋಕ್ಷವಾಗಿ ನನ್ನ ವೃತ್ತಿಜೀವನಕ್ಕೆ ಗಟ್ಟಿ ಅಡಿಪಾಯ ಹಾಕಿದರು. ಮೊದಲ ಸುಮಾರು ಇಪ್ಪತ್ತು ವರ್ಷ ಕಳೆದ ಮೇಲೆ ಸಣ್ಣ ಮಟ್ಟದ ಪ್ರಕಾಶಕನೂ ಆದೆ. ಸುಮಾರು ಹದಿನಾರು ವರ್ಷಗಳಲ್ಲಿ ಐವತ್ತಕ್ಕೂ ಮಿಕ್ಕು ಪುಸ್ತಕಗಳನ್ನೂ ಪ್ರಕಟಿಸಿದೆ. ಇಂದಿಗೆ ಅವುಗಳಲ್ಲಿ ಕೆಲವಷ್ಟೇ ನನ್ನಲ್ಲಿ ಶಾಶ್ವತ ಸಾಹಿತ್ಯವಾಗಿ ಉಳಿದಿವೆ! ಆಸಕ್ತರಿದ್ದರೆ ಹೊರಗಿಟ್ಟಿದ್ದೇನೆ,

ನೋಡಿ, ನೀವು ಕೊಳ್ಳಲೂಬಹುದು. [ಮತ್ತೆ ಸೇರಿಸಿದ್ದು: ನನ್ನ ಭಾಷಣಕ್ಕೂ ಮೊದಲ ಪುಸ್ತಕಗಳನ್ನು ಹರಡಿಟ್ಟಿದ್ದ ಸುಮಾರು ಒಂದು ಗಂಟೆಯಲ್ಲಿ ನನಗೆ ಸಾವಿರದ ಇನ್ನೂರು ರೂಪಾಯಿಯ ವ್ಯಾಪಾರವಾಯ್ತು!]

ಪ್ರಥಮ ತಲೆಮಾರಿನ ಪ್ರಕಾಶಕರು

ಆಧುನಿಕ ಕನ್ನಡದ ಪ್ರಥಮ ತಲೆಮಾರಿನ ಪುಸ್ತಕ ಪ್ರಕಾಶಕರೆಂದೇ ಖ್ಯಾತರಾದ ಜಿಬಿ ಜೋಶಿ – ಮನೋಹರ ಗ್ರಂಥಮಾಲಾ, ಗೋವಿಂದ ರಾವ್ – ಸಾಹಿತ್ಯ ಭಂಡಾರ, ಕೂಡಲಿ ಚಿದಂಬರಂ – ಕಾವ್ಯಾಲಯ, ಕೆವಿ ಸುಬ್ಬಣ್ಣ – ಅಕ್ಷರ ಪ್ರಕಾಶನ ಮುಂತಾದವರಲ್ಲದೇ ಲೇಖಕ ಪ್ರಕಾಶಕರಾಗಿಯೂ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಜೀವನ ಕಾರ್ಯಾಲಯ, ಕುವೆಂಪು – ಉದಯರವಿ ಪ್ರಕಾಶನ, ಶಿವರಾಮ ಕಾರಂತ – ಹರ್ಷ ಪ್ರಕಾಶನ ಮುಂತಾದವರನ್ನೆಲ್ಲಾ ಸ್ಮರಿಸುವಾಗ ಅಗ್ರಗಣ್ಯನಾಗಿಯೂ ಅದ್ವೈತಿಯಾಗಿಯೂ ನಿಲ್ಲುವವರು ಡಿವಿಕೆ ಮೂರ್ತಿ ಒಬ್ಬರೇ. (ಅಲ್ಲಿ ವ್ಯಕ್ತಿ ಮತ್ತು ಪ್ರಕಾಶನಕ್ಕೆ ಭಿನ್ನತೆಯಿಲ್ಲ) ಅದಕ್ಕಿರುವ ಹಲವು ಕಾರಣಗಳಲ್ಲಿ ಕೆಲವನ್ನಾದರೂ ಪುಸ್ತಕೋದ್ಯಮದ ಹಿತಕ್ಕಾಗಿ ನಾನು ಹೇಳಲೇಬೇಕು.

ಡಿವಿಕೆ ಮೂರ್ತಿ

ಡಿವಿಕೆಯಲ್ಲಿಗೆ ಬಂದು “ಪುಸ್ತಕ ಮಾರುತ್ತೇನೆ” ಎಂದ ಯಾವುದೇ ಉತ್ಸಾಹಿಯನ್ನು ಅವರು ಖಾಲೀ ಕಳಿಸಿದ್ದಿಲ್ಲ. ಬಂದವರ ವಿಶ್ವಾಸಾರ್ಹತೆಯನ್ನಷ್ಟೇ ಗಮನದಲ್ಲಿಟ್ಟುಕೊಂಡು, ನಿಶ್ಶರತ್ತಾಗಿ ಅವರು ಕೇಳಿದಂತೆಲ್ಲ ಪುಸ್ತಕ, ಹಿತನುಡಿ ಕೊಟ್ಟು ನಡೆಸುತ್ತಿದ್ದರು. ಮತ್ತೆ ಆ ವ್ಯಕ್ತಿ ಬಯಸಿದಂತೇ ಮಳಿಗೆಯೋ ಪ್ರಕಾಶನವೋ ಧಾರಾಳ ಸಲಹೆ, ಆಸರೆಗಳನ್ನೂ ಒದಗಿಸುತ್ತಿದ್ದರು. ಅದಕ್ಕೆರಡು ಹೆಸರು ಉದಾಹರಿಸುವುದಾದರೆ – ಮೈಸೂರಿನ ಗೀತಾ ಬುಕ್ ಹೌಸ್ ಮತ್ತು ಅಭಿರುಚಿ ಪ್ರಕಾಶನ. ಹಾಗೆಂದು, ಡಿವಿಕೆ ತಾನು ಪುಸ್ತಕೋದ್ಯಮದ ಸಾರ್ವಭೌಮ, ಇತರರು ಸಾಮಂತರು ಎಂಬಂತೆ ಯಾರನ್ನೂ ನಡೆಸಿಕೊಳ್ಳಲಿಲ್ಲ. ಸ್ವತಃ ತಾನು ಬಿಡಿ ಮಾರಾಟಕ್ಕೂ ಇಳಿಯಲೇ ಇಲ್ಲ. ಅವರ ಜೀವಮಾನದಲ್ಲಿ ಸ್ವಂತಕ್ಕೆ ಅಯಾಚಿತವಾಗಿಯೇ ಬಂದ ಸಮ್ಮಾನ, ಪ್ರಶಸ್ತಿಗಳನ್ನೂ ಮಾರು ದೂರದಿಂದಲೇ ಓಡಿಸಿಬಿಟ್ಟರು. ಇದಕ್ಕೊಂದೇ ಉದಾಹರಣೆ:

ಕನ್ನಡ ಪುಸ್ತಕ ಪ್ರಾಧಿಕಾರ ಒಮ್ಮೆ ತನ್ನ ವಾರ್ಷಿಕ ಪ್ರಶಸ್ತಿ – ‘ಕನ್ನಡದ ಅತ್ಯುತ್ತಮ ಪ್ರಕಾಶಕ’ಕ್ಕೆ ಡಿವಿಕೆಯನ್ನು ಆಯ್ದುಕೊಂಡಿತು. ಘೋಷಣೆಗೂ ಮುನ್ನ, ಅವರ ಅಂಗೀಕಾರಕ್ಕೆಂದು ಪತ್ರ ಕಳಿಸಿದ್ದರು. ಅಂದು ಡಿವಿಕೆ ಮುಖ ಗಂಟಿಕ್ಕಿಕೊಂಡು ನನ್ನಲ್ಲಿ ಹೇಳಿದ್ದ ಮಾತು “ಇವರಿಗೆ ಮಾಡೋಕ್ ಬೇರೆ ಕೆಲಸ್ವಿಲ್ಲಾ…” ನನ್ನಲ್ಲಿನ್ನೂ ಅನುರಣಿಸುತ್ತದೆ. ಅದು ಆದರ್ಶ. ಅವರು ಕೂಡಲೇ ಆ ಪ್ರಶಸ್ತಿಯನ್ನು ತಿರಸ್ಕರಿಸಿ ಕಪುಪ್ರಾಕ್ಕೆ ಬರೆದ ಪತ್ರ ನನಗಂತೂ ಸದಾ ಸ್ಮರಣೀಯ. (ಓದಿ: ಇನ್ನು ಬರುವುದಿಲ್ಲ ಡಿವಿಕೆ)

ಸ್ವಾನುಭವದಲ್ಲಿ ಸಾರ್ವಜನಿಕ ಸೇವೆ

ಡಿವಿಕೆ ಆದರ್ಶದಲ್ಲೇ ನನ್ನ ಮಳಿಗೆ ಹಾಗೂ ಪ್ರಕಾಶನ ವಿಕಸಿಸಿತು. ಹಾಗಾಗಿ ನನ್ನ ಸಾರ್ವಜನಿಕ ಅಭಿವ್ಯಕ್ತಿಗಳು ವೈಯಕ್ತಿಕ ಅನುಭವದ ಆಧಾರದಿಂದ ಹೊರಟರೂ ಒಟ್ಟಾರೆ ಪುಸ್ತಕೋದ್ಯಮದ ಪರವಾಗಿತ್ತು. ನೆನಪಿಡಿ, “ನನಗೆ ದಕ್ಕಲಿಲ್ಲ, ನನ್ನನ್ನು ವಂಚಿಸಿದರು” ಎಂಬ ಕೊರಗಾಗಲಿಲ್ಲ. ಇದಕ್ಕೊಂದು ಸಣ್ಣ ನಿದರ್ಶನ ೧೯೯೭ರ…

ಮಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನ.

ಸಮ್ಮೇಳನಕ್ಕೂ ಸಾಕಷ್ಟು ಮುಂಚೆ, ಸ್ವಾಗತ ಸಮಿತಿಯ ಅಧ್ಯಕ್ಷ – ವೀರೇಂದ್ರ ಹೆಗ್ಗಡೆ ಮತ್ತು ಕಾರ್ಯದರ್ಶಿ – ಹರಿಕೃಷ್ಣ ಪುನರೂರು, ಒಂದು ಫರ್ಮಾನು ಹೊರಡಿಸಿದ್ದರು. “ಮಳಿಗೆ ಇಡುವ ಎಲ್ಲ ಪುಸ್ತಕ ವ್ಯಾಪಾರಿಗಳೂ ಸಾರ್ವಜನಿಕರಿಗೆ ಶೇಕಡಾ ಇಪ್ಪತ್ತರ ರಿಯಾಯಿತಿ ಕೊಡತಕ್ಕದ್ದು.” ಇದನ್ನು ವೈಚಾರಿಕ ಜಾಗೃತಿಯ ಕೆಲವು ಪ್ರಕಾಶನ ಸಂಸ್ಥೆಗಳು ವಿರೋಧಿಸಿದವು. ಮತ್ತೆ ಎಲ್ಲ ಸರಿಹೋದೀತೆಂದು ಭಾವಿಸಿ, ಮಳಿಗೆ ಕಾಯ್ದಿರಿಸಿ, ಪುಸ್ತಕಗಳ ಸಮೇತ ಮಂಗಳೂರಿಗೆ ಬಂದರು. ಆದರೆ ಸ್ವಾಗತ ಸಮಿತಿ ತಗ್ಗಿರಲಿಲ್ಲ. ನಾನು ಎಂದೂ ಟೂರಿಂಗ್ ಟಾಕೀಸ್, ಅಂದರೆ ಸಾಹಿತ್ಯ ಜಾತ್ರೆಗಳಲ್ಲಿ ಮಳಿಗೆ ಇಟ್ಟವನಲ್ಲ, ಇಲ್ಲೂ ಸುಮ್ಮನಿದ್ದೆ. ಆದರೆ ಪ್ರತಿಭಟಿಸಿದ್ದ ಅನೇಕ ಉದ್ಯಮ-ಗೆಳೆಯರು, ನನ್ನಂಗಡಿಗೇ ಬಂದು, ಹೋರಾಟಕ್ಕೆ ನನ್ನ ಬೆಂಬಲ ಬಯಸಿದರು. ನಾನು ಮುಂಚೂಣಿಯಲ್ಲಿ ನಿಂತು, ಮಹಾರಥಿಗಳ ಎದುರು ಹೋರಾಡಿ, ವಿಜಯ ಸಾಧಿಸಿದ್ದೆ.

ಗಂಭೀರ ಮತ ಪ್ರಸಂಗಗಳು

ಕನ್ನಡ ಪುಸ್ತಕೋದ್ಯಮದ ಸಮಸ್ಯೆಗಳ ಕುರಿತು ಮುಖ್ಯವಾಗಿ ನಾನು ಮೂರು ಮಹಾಸಭೆಗಳಲ್ಲಿ ಪ್ರಬಂಧ ಮಂಡಿಸಿದ್ದೆ. ೧೯೮೩ – ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಸುವರ್ಣಮಹೋತ್ಸವ, ೧೯೮೫ – ಕನ್ನಡದ ಪ್ರಥಮ ವಿಶ್ವ ಸಮ್ಮೇಳನ ಮತ್ತು ೧೯೯೫ – ಮುಧೋಳ ಕನ್ನಡ ಸಾಹಿತ್ಯ ಸಮ್ಮೇಳನ. ಸಮ್ಮೇಳನಗಳೆಂಬ ಹುಚ್ಚರ ಸಂತೆಯಲ್ಲಿ ಚರ್ಚೆಗೆ ಅವಕಾಶವೇ ಇಲ್ಲ, ಬಿಡಿ. ಆದರೆ ಅವೂ ನನ್ನ ಇಂದಿನ ಮಾತುಗಳಲ್ಲಿ ಸಂಕ್ಷಿಪ್ತವಾಗಿ ಉಲ್ಲೇಖಗೊಳ್ಳುವ ಎಲ್ಲಾ ದಾಖಲೆಗಳೂ ಹೆಚ್ಚಿನ ಲೇಖನ, ಟಿಪ್ಪಣಿ, ಭಾಷಣ ಹಾಗೂ ಅನಿವಾರ್ಯವಾಗಿ ಕೆಲವು ವೇದಿಕೆಗಳಲ್ಲಿ ನಡೆಸಿದ ಚರ್ಚೆಗಳೆಲ್ಲವನ್ನೂ ಸಂಕಲಿಸಿ, ೧೯೯೯ರಲ್ಲಿ ‘ಪುಸ್ತಕ ಮಾರಾಟ ಹೋರಾಟ’ ಎಂಬ ಪುಸ್ತಕವನ್ನೇ ಪ್ರಕಟಿಸಿದೆ. ಅದರ ಸಾವಿರ ಪ್ರತಿ ಬಿಡಿ ಬಿಡಿಯಾಗಿಯೇ ಮಾರಿ ಮುಗಿಯಿತು. ಆದರೆ ಅಲ್ಲಿ ನಾನು ಮಾಡಿದ್ದ ಕಟುವಿಮರ್ಶೆಗೆ ವಿರುದ್ಧವಾಗಿ ನನಗೊಂದೂ ಸವಾಲು ಬರಲೇ ಇಲ್ಲ.

‘ಪುಸ್ತಕ ಮಾರಾಟ ಹೋರಾಟ’ದ ಕುರಿತು ಈಗ ನಿಮ್ಮಲ್ಲಿ ಮೂಡಿದ್ದರೆ ನಿರಾಶರಾಗಬೇಕಿಲ್ಲ. ಅದೂ ಸೇರಿದಂತೆ ನನ್ನೆಲ್ಲಾ ಬರಹಗಳೂ ಪ್ರಕಾಶನದ ಎಲ್ಲ ಪುಸ್ತಕಗಳೂ ಹೆಚ್ಚಿನ ವಿವರಗಳೊಡನೆ, ಕೆಲವು ದೃಶ್ಯ ಶ್ರಾವ್ಯ ಸೌಕರ್ಯದೊಡನೆ, ಉಚಿತವಾಗಿ ನನ್ನ ಜಾಲತಾಣ www.athreebook.comದಲ್ಲಿವೆ, ಬಳಸಿಕೊಳ್ಳಿ, ಹಂಚಿಕೊಳ್ಳಿ. ಆ ನನ್ನ ಪುಸ್ತಕದ ಕುರಿತಂತೆ ಒಂದು ಪ್ರಸಂಗವನ್ನು ಇಲ್ಲಿ ತುಸು ವಿಸ್ತರಿಸುತ್ತೇನೆ.

 

ಪುಸ್ತಕೋದ್ಯಮದ ಭಗವದ್ಗೀತೆ!

ಕನ್ನಡ ಪುಸ್ತಕ ಪ್ರಾಧಿಕಾರ (ಕಪುಪ್ರಾ) ಸಂಘಟಿಸಿದ ಐದು ದಿನಗಳ ಪುಸ್ತಕ ಮೇಳವೊಂದು ಉಡುಪಿಯಲ್ಲಿ ನಡೆಯುವುದಿತ್ತು. ನಾನು ಇಲ್ಲಿ ಕೇವಲ ಅನುಭವ ಹೆಚ್ಚಿಸಿಕೊಳ್ಳಲು ಒಂದು ಮಳಿಗೆ ಹಿಡಿದಿದ್ದೆ. ಮೊದಲ ದಿನ ನಾನು ಅಲ್ಲಿ ಪುಸ್ತಕ ಜೋಡಿಸುತ್ತಿದ್ದಂತೆ ಕಪುಪ್ರಾ ಅಧ್ಯಕ್ಷ – ನನಗೆ ಪೂರ್ವಪರಿಚಿತರು, ಮುಖ್ಯ ಅತಿಥಿಯೋರ್ವರೊಡನೆ ಸುತ್ತು ಹಾಕುತ್ತಾ ನನ್ನಲ್ಲಿಗೂ ಬಂದರು. ಅವರು ನನ್ನ ‘ಪುಸ್ತಕ ಮಾರಾಟ ಹೋರಾಟ’ ಪುಸ್ತಕ ಎತ್ತಿ ಗಣ್ಯರಿಗೆ ತೋರಿಸುತ್ತಾ “ನೋಡ್ರೀ ಇದು ಕನ್ನಡ ಪುಸ್ತಕೋದ್ಯಮದ ಭಗವದ್ಗೀತೆ” ಎಂದರು.

ಉಡುಪಿ ಮೇಳದಲ್ಲಿ ಮೊದಲ ಎರಡು ದಿನ ಪೂರ್ಣ ಸಭಾಭವನದೊಳಗೆ, ಕನ್ನಡ ಪುಸ್ತಕೋದ್ಯಮಕ್ಕೆ ಏನೂ ಸಂಬಂಧವಿಲ್ಲದ ದಲೈಲಾಮಾ ಪ್ರವಚನವೋ ಸತ್ಸಂಗವೋ ನಡೆಯಿತು. ನಾವು ಅಂಗಳದ ಜಿಂಕ್ ಶೀಟ್ ಮಾಡಿನಡಿ ಪ್ರಚಾರವೂ ಇಲ್ಲ, ಜನವೂ ಇಲ್ಲದೇ ಒಣಗುತ್ತಿದ್ದೆವು. ಅದರಲ್ಲೂ ಉತ್ತರ ಕರ್ನಾಟಕದಿಂದ ಬಂದ ಕೆಲವು ಬಡ ಪ್ರಕಾಶಕರಂತೂ ದೈನಂದಿನ ಹೊಟ್ಟೆಪಾಡು, ಊರಿಗೆ ಮರಳುವ ಖರ್ಚನ್ನು ಯೋಚಿಸಿ ಕಂಗಾಲಾಗಿದ್ದರು. ಅಲ್ಲಿನ ಅಪರಾತಪರಾ ಎಲ್ಲರನ್ನೂ ಕೆರಳಿಸಿತ್ತು.

ಮೂರನೇ ದಿನ ಸಭಾಭವನದೊಳಗೆ ಪುಸ್ತಕ ಮೇಳಕ್ಕೊಂದು ಔಪಚಾರಿಕ ಉದ್ಘಾಟನೆ ಎಂದು, ನಮ್ಮೆಲ್ಲರನ್ನೂ ಪ್ರತ್ಯೇಕವಾಗಿ ಕರೆದರು. ಅಲ್ಲಿ ಸಭಾ ನಿರೂಪಕ ಅತಿಥಿಗಳನ್ನು  ವೇದಿಕೆಗೆ ಆಹ್ವಾನಿಸುತ್ತಿದ್ದಂತೆ, ನಾನು ವೇದಿಕೆಗೆ ಏರಿ. ಮೈಕ್ ಸೆಳೆದುಕೊಂಡೆ. ಮತ್ತೆ ಎರಡೇ ಮಾತಿನಲ್ಲಿ, ಉಚ್ಛಧ್ವನಿಯಲ್ಲಿ ಪುಸ್ತಕ ಮೇಳದ ಅವ್ಯವಸ್ಥೆಯನ್ನು ಖಂಡಿಸಿ, ಪ್ರಕಾಶಕರೆಲ್ಲರಿಗೆ ಸಮಾರಂಭವನ್ನು ಬಹಿಷ್ಕರಿಸಲು ಕರೆ ಕೊಟ್ಟೆ, ಎಲ್ಲರೂ ಅನುಸರಿಸಿದರು. ತಮಾಷೆ ಎಂದರೆ, ವೇದಿಕೆಗೆ ಬರಲು ಹೊರಟಿದ್ದ ಕಪುಪ್ರಾ ಅಧ್ಯಕ್ಷ ಹಾಗೂ ಮುಖ್ಯ ಸದಸ್ಯರೊಬ್ಬರು ಹಲ್ಲೆ ಮಾಡುತ್ತಾರೆಂದು ಹೆದರಿ ಸಭೆ ಬಿಟ್ಟೋಡಿದ್ದರು. ವಾಸ್ತವವಾಗಿ ನಮಗೆ ಅಂಥಾ ಉದ್ದೇಶವೇನೂ ಇರಲಿಲ್ಲ, ಬಿಡಿ.

ಮೇಳದ ಕೊನೆಯ ದಿನ ಅಧ್ಯಕ್ಷರು ಗೋಪ್ಯದಲ್ಲಿ ಪತ್ರಿಕಾಗೋಷ್ಟಿಯೊಂದನ್ನು ನಡೆಸುತ್ತಿದ್ದ ಸುದ್ಧಿ ನಮಗೆ, ಅಂದರೆ ನನ್ನೊಡನಿದ್ದ ಬೆಂಗಳೂರು ಸಾಹಿತ್ಯ ಭಂಡಾರದ ಅರುಣ ಮತ್ತು ಹುಬ್ಬಳ್ಳಿ ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ, ತಿಳಿಯಿತು. ಗ್ರಂಥಾಲಯದ ಮುಚ್ಚಿದ ಕೋಣೆಯೊಳಗೆ ನಡೆದಿದ್ದ ಗೋಷ್ಠಿಯಲ್ಲಿ ಅಧ್ಯಕ್ಷರು ಮೇಳದಲ್ಲಿ ಮಾರಿಹೋದ ಪುಸ್ತಕಗಳ ಸುಳ್ಳೇ ಅಂಕಿಸಂಕಿಯನ್ನು ಪತ್ರಕರ್ತರಿಗೆ ಪ್ರಸರಿಸಿ, ವಿವರಣೆ ಕೊಡುತ್ತಿದ್ದರು. ನಾವು ಅಕ್ಷರಶಃ ಡೋರ್‍ ಕ್ರ್ಯಾಷ್ ಮಾಡಿ ನುಗ್ಗಿದ್ದೆವು. ಗಾಬರಿಗೆಟ್ಟ ಅಧ್ಯಕ್ಷರು, ಸದಸ್ಯನೊಡನೆ ಎದ್ದು ನಿಂತು, “ಗೋಷ್ಟಿ ಮುಗಿಯಿತು, ಮುಗಿಯಿತು..” ಎಂದು ತೊದಲುತ್ತಾ ಅಲ್ಲಿಂದಲೂ ಓಡಿ ಹೋದರು. ನಮ್ಮ ಅದೃಷ್ಟಕ್ಕೆ ಅಂದು ಹಲವು ಸ್ವತಂತ್ರ ಬುದ್ಧಿಯ ಪತ್ರಕರ್ತರು ಇದ್ದರು. ನಾವು ಅವರಿಗೆ ವಾಸ್ತವವನ್ನು ಬಿಡಿಸಿ ಹೇಳಿದೆವು ಮತ್ತದು ಸುದ್ಧಿಯೂ ಆಯ್ತು, ಬಿಡಿ. ಆದರೆ ಅಂದು ಕಣ್ಮರೆಯಾದ ಅಧ್ಯಕ್ಷರು ಮುಂದೆಂದೂ ನನಗೆ ಮುಖ ತೋರಿಸಲೇ ಇಲ್ಲ. ಅಧ್ಯಕ್ಷರು ನನ್ನ ಪುಸ್ತಕೋದ್ಯಮದ ಭಗವದ್ಗೀತೆಗೆ ಕುಂಕುಮ, ಹೂವೇರಿಸಿ ಪೂಜೆ ಮಾತ್ರ ಮಾಡಿರಬೇಕು, ತಲೆಗೆ ತೆಗೆದುಕೊಳ್ಳಲೇ ಇಲ್ಲ.

ಸರಕಾರೀ ಪುಸ್ತಕೋದ್ಯಮ

ಆ ದಿನಗಳಲ್ಲಿ ಪುಸ್ತಕೋದ್ಯಮದ ಒಳಿತಿಗಾಗಿ ನನ್ನ ಬಹುದೊಡ್ಡ ಧ್ವನಿಯಿದ್ದದ್ದು ಎಲ್ಲಾ ಸರಕಾರೀ ಪುಸ್ತಕೋದ್ಯಮಗಳ ಮೇಲೇ. ಅವು ತಗ್ಗಬೇಕು, ಹಲವಂತೂ ಬರ್ಖಾಸ್ತೇ ಆಗಬೇಕು. ಅಲ್ಲದಿದ್ದರೆ, ಆ ಎಲ್ಲಾ ಸಂಸ್ಥೆಗಳ ವರಿಷ್ಠರೂ ಸೇರಿದಂತೆ ಸಿಬ್ಬಂದಿಗಳ ಸಂಬಳ, ಸವಲತ್ತುಗಳನ್ನು ಅವರ ಪುಸ್ತಕ ಮಾರಾಟಕ್ಕೇ ಲಗತ್ತಾಗಿಸಬೇಕು; ಮಾರು ಇಲ್ಲವೇ ಮಡಿ! ಇವಕ್ಕೆ ವ್ಯತಿರಿಕ್ತವಾಗಿ ಎರಡು ಪ್ರಸಂಗ ಕೇಳಿ.

ಎರಡು ಹೆಂಡಿರ ಗಂಡ

ಓರ್ವ ಕಪುಪ್ರಾ ಅಧ್ಯಕ್ಷ – ಬಡ ಹಿನ್ನೆಲೆಯಿಂದಲೇ ಬಂದವ, ತನ್ನ ಕಛೇರಿ ಕೋಣೆಯ ಒಳಾಲಂಕಾರಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ. ಯಾರೋ ವಿಚಾರಿಸಿದಾಗ “ಇಲ್ದೇ ಹೋದ್ರೇ ಅಲ್ಲೋಕೇಶನ್ ಹಾಳಾಗುತ್ತೇ..” ಅಂತ ಕಾರಣ ಕೊಟ್ಟಿದ್ದ. ಅದರ ಮೇಲೂ ಆತನ ದೊಡ್ಡ ಕೊರಗು – ತನಗೆ ಕ್ಯಾಬಿನೆಟ್ ದರ್ಜೆಯ ಸವಲತ್ತುಗಳನ್ನು ಕೊಡಲಿಲ್ಲ ಎನ್ನುವುದೇ ಆಗಿತ್ತು.

ಇನ್ನೋರ್ವ ಹಿರಿಯ ಪ್ರಾಧ್ಯಾಪಕ ಕನ್ನಡ ವಿವಿ ಹಂಪಿಯಲ್ಲಿ ಪ್ರಾಧ್ಯಾಪಕತನವನ್ನೂ ಬೆಂಗಳೂರಿನಲ್ಲಿ ಕಪುಪ್ರಾದ ಅಧ್ಯಕ್ಷಪದವನ್ನೂ (ಎರಡು ಸಂಬಳ ಸವಲತ್ತು ಸಮೇತವೇ ಇರಬೇಕು) ಅತ್ತಿತ್ತ ಓಡಾಡಿಕೊಂಡು ಏಕಕಾಲದಲ್ಲಿ ನಡೆಸುತ್ತಿದ್ದ. ಹಾಗೇ ಒಮ್ಮೆ ಆತ ನನ್ನಂಗಡಿಗೆ ಬಂದಾಗ, ನನ್ನ ಅನುಕಂಪ ನಿರೀಕ್ಷಿಸಿ “ನನ್ನ ಕಷ್ಟಾ ನೋಡಿ ಸಾರ್, ಆಗಿಂದಾಗ್ಗೆ ಹಂಪೀ, ಬೆಂಗಳೂರೂಂತ ಓಡಾಡಬೇಕೂ….” ರಾಗ ತೆಗೆದಿದ್ದ. ಅದರ ಅರಿವಿದ್ದ ನಾನು, ಸಹಜವಾಗಿ ಮಾತು ಕತ್ತರಿಸಿದ್ದೆ “ಅಯ್ಯೋ ಯಾವುದೋ ಒಂದಕ್ಕೆ ರಾಜೀನಾಮೆ ಬಿಸಾಡಿ.” ಆತ ಅಪ್ರತಿಭನಾಗಿ ಜಾಗ ಖಾಲಿ ಮಾಡಿದ್ದ.

ಎಲ್ಲ ಹೊಸ ಕತ್ತೆಯ ಹೆರಿಗೆಗಾಗಿ…

೧೯೯೩ರಲ್ಲಿ ಎಲ್ಲೆಸ್ ಶೇಷಗಿರಿ ರಾಯರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನಲ್ಲೊಂದು ‘ಗಂಭೀರ ವಿಚಾರಗೋಷ್ಠಿ’ ನಡೆಸಿತು. ಆ ಆಪ್ತ ಸಭೆಯಲ್ಲಿ ಕನ್ನಡದ ಬಹುತೇಕ ಪ್ರಕಾಶಕರುಗಳು ಮಾತ್ರ ಸೇರಿದ್ದರು. ಗೋಷ್ಟಿಯ ಏಕೈಕ ಆಶಯ ಪ್ರಬಂಧಕೋರ ನಾನು. ಸಭೆಯ ಹಿಂದಿನ ಕತೆ ತಿಳಿಯದ ನಾನು, ಎಂದಿನಂತೆ ಸ್ಪಷ್ಟವಾಗಿ ಸರಕಾರೀ ಪುಸ್ತಕೋದ್ಯಮವನ್ನು ಖಂಡಿಸಿ ಬರೆದುಕೊಂಡೇ ಹೋಗಿದ್ದ ಪ್ರಬಂಧವನ್ನೇ ಮಂಡಿಸಿದೆ. ಸಭೆಯಲ್ಲಿ ಉಗುರು ಬೆಚ್ಚಗಿನ ಚರ್ಚೆಯಷ್ಟೇ ನಡೆಯಿತು. ಯಾಕೆಂದರೆ ಹೆಚ್ಚಿನ ಪ್ರಕಾಶಕರು ಇಲಾಖೆಯ ಹಲವು ತೆರನ ಹಂಗಿಗರು! ಎಷ್ಟೋ ದಿನಗಳ ಮೇಲೆ ತಿಳಿಯಿತು, ಸರಕಾರ ಹಾಗೊಂದು ಸಭೆ ನಡೆಸಿದಂತೆ ಮಾಡಿ, ಇನ್ನೊಂದೇ ಸರಕಾರೀ ಕತ್ತೆಯನ್ನು ಹೆರುವುದಿತ್ತು. ೧೯೯೫ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬಂತು. ಅದರ ಮಹತ್ವಾಕಾಂಕ್ಷೆಯಲ್ಲಿ, ಎಲ್ಲಾ ಜಿಲ್ಲೆ, ಮುಂದುವರಿದಂತೆ ತಾಲೂಕು ಕೇಂದ್ರಗಳಲ್ಲೂ ತನ್ನದೇ ಅಥವಾ ತನ್ನ ಬೆಂಬಲದ ಪುಸ್ತಕ ಮಳಿಗೆಗಳನ್ನು ಹಾಕುವುದೂ ಇತ್ತು.  ಗಮನಿಸಿ, ಇಂದು ಕಪುಪ್ರಾ ಎಲ್ಲಾ ಸರಕಾರೀ ಪ್ರಕಾಶನಾಂಗಗಳಂತೇ ಪೂರ್ಣ ನಿಸ್ತೇಜವಾಗಿ ಬಿದ್ದಿದೆ.

ಸರಕಾರೀ ಪುಸ್ತಕ ಪ್ರೇಮ

ನಾನು ಹೇಳುವ ಸರಕಾರೀ ಬೆಂಬಲಿತ ಪ್ರಕಾಶನಾಂಗಗಳಲ್ಲಿ ಕಸಾಪವೂ ಸೇರಿದೆ. ಉಳಿದಂತೆ ಎಲ್ಲಾ ವಿಶ್ವವಿದ್ಯಾನಿಲಯದ ಪ್ರಸಾರಾಂಗಗಳು, ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು ಮತ್ತು ಇಲಾಖಾ ಪ್ರಕಟಣೆಗಳೂ ಸೇರಿವೆ. ಕಸಾಪದಲ್ಲಿ ಮಾತ್ರ ಚುನಾವಣೆ ಎಂಬ ಕಪಟ ನಾಟಕ. ಉಳಿದೆಡೆಗಳಲ್ಲಿ ಅಧಿಕಾರಕ್ಕೆ ವಸೂಲೀಬಾಜಿ ಮಾತ್ರ ಸಾಕು. ಹಾಗೆ ಅಧಿಕಾರ ಹಿಡಿದವರು ದುಂದು ವೆಚ್ಚಗಳೆಲ್ಲಾ ಕಳೆದು ಹಣ ಉಳಿದರೆ, ವರ್ಷದ ಕೊನೆಯಲ್ಲಿ ತನ್ನಲ್ಲಿಗೆ “ನಾ ನಿನ್ನ ದಾಸನೋ ದಯಾಸಾಗರಾ…” ಎಂದು ಬಂದವರಿಗೆ ದೊಡ್ಡ ಬಿದಿರಿನ ಹೆಸರಿನಲ್ಲಿ, ಹಣ ಬಟವಾಡೆ ಮಾಡುವುದೂ ಉಂಟು. ಹಾಗೂ ಕೆಲವೊಮ್ಮೆ ಕೊಡುವ ಹಣಕ್ಕಿಂತ ಸಮಾರಂಭದ ವೆಚ್ಚವೇ ಅಧಿಕವಾಗುವುದೂ ಇದೆ. ಈ ಸಂಸ್ಥೆಗಳೆಲ್ಲ ಸಮ್ಮೇಲನವೋ ಪುಸ್ತಕ ಮೇಳವೋ ನಡೆದಾಗ ಅನಿವಾರ್ಯತೆಯಲ್ಲಿ ತಾವು ಅನಿವಾರ್ಯತೆಯಲ್ಲಿ ಪ್ರಕಟಿಸಿ ಉಳಿದ ರದ್ದಿಯನ್ನಷ್ಟು ಹೊತ್ತು ಹಾಕಿ, ಕುಶಿ ಬಂದ ರಿಯಾಯ್ತಿ ದರದಲ್ಲಿ ನೂಕಿ, ಕೈ ತೊಳೆದುಕೊಳ್ಳುತ್ತಾರೆ. ಒಟ್ಟಾರೆ ಫಲಿತಾಂಶ ಚಿಂತಾಜನಕ. ತತ್ಫರಿಣಾಮವಾಗಿ, ಇಂದು ಪಠ್ಯ ಪುಸ್ತಕಗಳನ್ನು ಹೊರತುಪಡಿಸಿ ಕನ್ನಡದಲ್ಲಿ ಬರುತ್ತಿರುವ ಪುಸ್ತಕಗಳೆಲ್ಲಾ, ಹೌದು ಖಾಸಗಿ ಪ್ರಕಾಶನವೂ ಸೇರಿದಂತೆ ಎಲ್ಲಾ ಅವಲಂಬಿಸಿರುವುದು ಸರಕಾರೀ ಕೃಪೆ ಮಾತ್ರ. ಈ ಮಾತನ್ನು ಸ್ವಲ್ಪ ವಿವರದಲ್ಲಿ ನೋಡಿ.

ಕೆಲವು ಅಪರಾತಪರಗಳು

ಹಿಂದೆಲ್ಲಾ ಓದುಗನ ತಿಳುವಳಿಕೆಗಾಗಿ, ಸಾಮಾನ್ಯವಾಗಿ ಎರಡನೇ ಪುಟದಲ್ಲಿ, ಮುದ್ರಣ ಇತಿಹಾಸವನ್ನು ಕೊಡುತ್ತಿದ್ದರು. ಅದರಲ್ಲಿ ಹಕ್ಕು, ಮುದ್ರಿತ ವರ್ಷ, ಅಚ್ಚು ಹಾಕಿದ ಪ್ರತಿಗಳು, ಬೆಲೆ ಇತ್ಯಾದಿ ನಮೂದುಗಳಿರುತ್ತಿದ್ದವು. ಆದರೆ ಇಂದು ಮುದ್ರಿತ ವರ್ಷ ಸರಕಾರದ ಪುಸ್ತಕ ನೀತಿಗನುಗುಣವಾಗಿ ಏನೂ ಆಗಬಹುದು. ಇದು ಎಷ್ಟು ವಿಪರೀತವಿತ್ತೆನ್ನುವುದಕ್ಕೆ ಸಣ್ಣ ಉದಾಹರಣೆಯೊಂದನ್ನು ಕೇಳಿ ಧನ್ಯರಾಗಿ. ಅದೊಂದು ಕಾದಂಬರಿ, ಲೇಖಕನ ಜೀವಿತ ಕಾಲದಲ್ಲೇ ಪ್ರಕಟವಾಗಿ, ಮಾರಿ ಮುಗಿದೂ ಹೋಗಿತ್ತು. ಲೇಖಕನ ಮರಣೋತ್ತರ ಕಾಲದಲ್ಲಿ ಅದನ್ನೆತ್ತಿಕೊಂಡ ಪ್ರಕಾಶಕನೊಬ್ಬ, ಮುದ್ರಿತ ವರ್ಷವನ್ನೇ ತಿದ್ದಿ ಸರಕಾರೀ ನೀತಿಗೆ ಒಗ್ಗುವಂತೆ ಮಾಡಿದ್ದ. ವರ್ಷ ಇಂದಿನದೇ ಹಾಕಿದರೂ ‘ಮರುಮುದ್ರಣ’ ಎಂದು ಕಾಣಿಸಬೇಕಾದಲ್ಲಿ ‘ಮರು’ ಮಾತ್ರ ಬಿಟ್ಟಿದ್ದ.

ಸಾಮಾನ್ಯ ಓದುಗರು ತಮ್ಮ ಆರ್ಥಿಕ ಸ್ಥಿತಿಯನ್ನು ಬದಿಗಿಟ್ಟು, ಹೆಚ್ಚಾಗಿ ಕಡಿಮೆ ಬೆಲೆಯ ಪುಸ್ತಕಗಳನ್ನೇ ಖರೀದಿಸಲು ಬಯಸುತ್ತಾರೆ. ಹಿಂದೆಲ್ಲಾ ಕೆಲವು ಪ್ರಕಟಣೆಗಳಿಗೆ ಹೊದಿಕೆ ಕಟ್ಟುವ ಕಾಲಕ್ಕೆ ಕೆಲವಕ್ಕಷ್ಟೇ ರಟ್ಟು ಸೇರಿಸಿ, ಕ್ಯಾಲಿಕೋ ಪ್ರತಿ ಎಂದು ಹೆಚ್ಚು ಬೆಲೆ ಮಾಡುತ್ತಿದ್ದದ್ದುಂಟು. ಸಾರ್ವಜನಿಕ ಕೊಳ್ಳುಗರು ಬಹುತೇಕ ಕಡಿಮೆ ಬೆಲೆಯ ಸಾಮಾನ್ಯ ಹೊದಿಕೆಯವನ್ನೇ ಕೊಳ್ಳುತ್ತಿದ್ದರು. ಓದು ಪ್ರಿಯರಿಗೆ ಸ್ವಚ್ಛ ಹಿನ್ನೆಲೆ, ಸ್ಫುಟ ಅಕ್ಷರಗಳಷ್ಟೇ ಸಾಕಾಗುತ್ತಿತ್ತು. ಆದರೆ ಇಂದು ಸರಕಾರೀ ಪುಸ್ತಕ ನೀತಿಯಂತೆ ಪುಸ್ತಕಗಳ ಎರಡನೇ ಪುಟದ ನಮೂದಿನಲ್ಲಿ ಉತ್ತಮ ಕಾಗದದ ಹೆಸರಿನ ನಮೂದು ಇರತಕ್ಕದ್ದು. ನೆನಪಿಡಿ, ಹೀಗೆ ಅನಾವಶ್ಯಕ ನಿಮ್ಮನ್ನು ಹೆಚ್ಚಿನ ಬೆಲೆಯ ಕಾಗದಕ್ಕೂ ಬಲಿಯಾಗಿಸುತ್ತಿರುವ ಪ್ರಕಾಶಕರೆಲ್ಲರ ಒಂದು ಕಣ್ಣು ನಿಸ್ಸಂದೇಹವಾಗಿ ಸಗಟು ಖರೀದಿಯ ಮೇಲೇ ಇದೆ. ಕಾಗದದ ಗುಣಮಟ್ಟದ ನಮೂದು ನಿಜದಲ್ಲಿ ಸಾಮಾನ್ಯ ಓದುಗನಿಗೆ ಅಸಂಗತ. ಆತನಿಗೆ ನೀವು ಉಣಿಸನ್ನು ಎಲೆಯಲ್ಲಾದರೂ ಕೊಡಿ, ಬೆಳ್ಳಿ ತಟ್ಟೆಯಲ್ಲಾದರೂ ಕೊಡಿ. ಆತ ಕಿಸೆ ತಡವಿಕೊಂಡು ಊಟಕ್ಕೆ ಕೂರುತ್ತಾನೆ. ಪುಸ್ತಕ ವಿನ್ಯಾಸದಲ್ಲಿ ನಡೆಯುವ ಅನ್ಯಾಯಕ್ಕೆ ನಾನು ಸಾಹಿತ್ಯ ಭಂಡಾರದ ಮೂಲಪುರುಷ – ಗೋವಿಂದ ರಾಯರ ಮಾತನ್ನಷ್ಟೇ ಉಲ್ಲೇಖಿಸುತ್ತೇನೆ. ಪುಸ್ತಕ ನೀತಿಗನುಗುಣವಾಗಿ ರೂಪುಗೊಂಡಿದ್ದ ಹೊಸ ಪುಸ್ತಕವೊಂದನ್ನು (ನಿಜದಲ್ಲಿ ದೀರ್ಘ ಗದ್ಯ ಲೇಖನವಷ್ಟೇ) ಅವರು ಕೈಯಲ್ಲಿ ಹಿಡಿದು ನುಡಿದಿದ್ದರು “ಈ ಪುಸ್ತಕದ ಮಾರ್ಜಿನ್ನಿನಲ್ಲಿ ಲೇಖಕನೂ ಪ್ರಕಾಶಕನೂ ಸೇರಿ ಹೊರಳಾಡಬಹುದು.”

ನಾನು ಪ್ರಕಾಶನ ಮುಚ್ಚಿದ ಕಾಲಕ್ಕೆ ಬೆಂಗಳೂರಿನ ಓರ್ವ ಲಘು ಓದಿನ ದೊಡ್ಡ ಪ್ರಕಾಶಕ, ಕೇಂದ್ರ ಗ್ರಂಥಾಲಯದ ಬಹುದೊಡ್ಡ ಗುತ್ತೇದಾರ “ನಿಮ್ಮೆಲ್ಲಾ ಪುಸ್ತಕಗಳ ಮರುಮುದ್ರಣ ನಂಗೇ ಕೊಡೀ ಸಾರ್…” ರಾಗ ತೆಗೆದಿದ್ದ. ನಾನು “ಇಲ್ಲಾ ಅವೆಲ್ಲಾ ಗಂಭೀರ ವಿಜ್ಞಾನ ಸಾಹಿತ್ಯ…” ಎನ್ನುತ್ತಿದ್ದಂತೇ ಆತ ಬಾಯಿ ಹಾಕಿದ “ಅಯ್ಯೋ ಬಿಡಿ ಸಾರ್, ಅದೆಲ್ಲಾ ಯಾರು ಕೇಳ್ತಾರೆ? ಪುಸ್ತ್ಕಾ ನೀತಿ ಹೇಳೋದೂ ಕ್ವಾಲಿಟಿ ಪೇಪರ್ರೂ, ನಂಬರ್ ಆಫ್ ಪೇಜಸ್ಸೂ, ಗುಡ್ ಬೈಂಡಿಂಗೂ, ಫೇಮಸ್ ಆಥರ್ರೂ… ಇದ್ದರೆ ಸಾಕು ಸಾರ್”. (ನಾನು ಕೊಡಲಿಲ್ಲ ಬಿಡಿ)

ಒಳಗೆ ರದ್ದಿ ತುಂಬಿದರು, ಮುದ್ರಣ ವರ್ಷ, ಮುದ್ರಿತ ಬೆಲೆ ಇತ್ಯಾದಿಗಳನ್ನು ಕೇವಲ ಪುಟ ಬದಲಿಸುತ್ತಲೇ ಬೇಕಾದಂತೆ ಆಡಿದರು. ಇಲಾಖೆ “ಒಬ್ಬನಿಗೇ ಎಷ್ಟು” ಎಂದು ಪ್ರಶ್ನಿಸದಂತೆ ತಮ್ಮದೇ ಹತ್ತೆಂಟು ಹೆಸರು, ವಿಳಾಸ ಮಾಡಿದರು, ಆಯ್ಕಾ ಸಮಿತಿಯಲ್ಲಿ ಗಟ್ಟಿ ಜನ ಬಂದರೆ ಬಿಟ್ಟೋಡುವಂತೆ ಮಾಡಿದರು….. ಇಲ್ಲೆಲ್ಲಾ ಇದ್ದ ಒಂದೇ ಒಳರಾಗ – ಸರಕಾರದಲ್ಲಿ ದುಡ್ಡಿದೆ, ನಮ್ಮಲ್ಲಿ ಮಾಲಿದೆ. ಪಕ್ಷಾತೀತವಾಗಿ ನಮ್ಮ ಬಹುಮಂದಿ ದನಪ್ರತಿನಿಧಿಗಳ, ಆಡಳಿತಗಾರರ ಧೋರಣೆಯೂ ಹೆಚ್ಚು ಕಡಿಮೆ ಇದೇ, ಗ್ರಾಂಟೂ ಪರ್ಸೆಂಟೂ! ಇವನ್ನು ದಿಟ್ಟವಾಗಿ ಎದುರಿಸುವುದು ಬೇಕಿಲ್ಲದ ಸರಕಾರೀ ಆಡಳಿತ, ಆದೇಶದ ಮೇಲೆ ಆದೇಶ ಹೇರುತ್ತದೆ. ಆ ಎಲ್ಲವೂ ಮೀಟರಿಗೆ ಮೂರಂಗುಲ ಕಡಿಮೆಯದ್ದೇ ಅಳತೆಗೋಲುಗಳು. ಕಪುಪ್ರಾ ಮಾಡಿದ ‘ಪುಸ್ತಕ ನೀತಿ’ ನ್ಯಾಯಾಲಯದ ಒರೆಗಲ್ಲಿನಲ್ಲಿ ನಿಲ್ಲುವುದಿಲ್ಲ. ಆದರೆ ಪರೀಕ್ಷಿಸಿದವರೂ ಇಲ್ಲ. ಮುದ್ರಣ ಇತಿಹಾಸದ ಕಿತಾಪತಿಗಳ ಬ್ರಹ್ಮಾಂಡ ದೊಡ್ಡದು, ಬಿಡಿ.

ವನ್ಯ ಪರಿಸರ ಉಳಿಸಲೆಂದೇ ಬಂದ ಮಾಧವ ಗಾಡ್ಗೀಳ್ ವರದಿ, ಕಸ್ತೂರೀ ರಂಗನ್ ಮೂಲಕ ಹೋಗಿ ಸರಕಾರದ ಅಂಡಡಿಗೆ ಬಿದ್ದದ್ದಾದರೂ ಇಂಥದ್ದೇ ಕಾರಣಕ್ಕೆ. ಇಲ್ಲವಾದರೆ ಅಸಂಖ್ಯ ಬೇನಾಮಿ ಭೂಮಾಲೀಕರು ಸೋಲುವುದಿಲ್ಲವೇ? ಮತ್ತೆ ಇಂದಿನ ತಾಜಾ ಖಬರ್ – ಅಬಕಾರೀ ಆದಾಯ ಸೋರಿಕೆಗೆ ಗಡಂಗುಗಳ ಸಂಖ್ಯೆ ಹೆಚ್ಚಿಸುವುದು! ತೋರಿಕೆಗೆ ಸರಕಾರದ ಆದಾಯ ಸೋರಿಕೆಗೆ ತಡೆ,  ನಿಜದಲ್ಲಿ ಕಳ್ಳಗಡಂಗಿನಲ್ಲಿ ಚಾಲ್ತಿಯಲ್ಲಿರುವ ಉಪ ಆದಾಯ ತಮ್ಮಲ್ಲಿಗೇ ಹರಿಸಿಕೊಳ್ಳುವ ಒಳಚರಂಡಿ. ಇದನ್ನೇ ಸ್ವರ್ಣಾಭಟ್ ವಾರ್ತಾಭಾರತಿ ಸಂದರ್ಶನದಲ್ಲಿ ವಿವರವಾಗಿ ಬಿಡಿಸಿ ಹೇಳಿದ್ದಾರೆ – ನಿಮ್ಮ ಅದಕ್ಷತೆಗೆ ವಿತರಣಾ ಕೇಂದ್ರಗಳನ್ನು ಹೆಚ್ಚಿಸುವುದು ಮದ್ದಲ್ಲ!

ಇಂತದ್ದೇ ಖಡಕ್ ನುಡಿ ಕನ್ನಡ ಪುಸ್ತಕಲೋಕದಲ್ಲೂ ಕೇಳುವಂತಾಗಬೇಕು. “ಏಕ್ ದೇಶ್, ಏಕ್ ಭಾಷಾ” ಎಂದು ಮೋದಿ ಬೊಬ್ಬೆ ಹೊಡೆಯುವುದಕ್ಕೂ ಎಷ್ಟೋ ಮೊದಲು ಕರ್ನಾಟಕ ರೂಪಿಸಿದ್ದ ಅಷ್ಟೇ ಕೆಟ್ಟ ಕೇಂದ್ರೀಕರಣಕ್ಕೆ ಕೊಟ್ಟ ಹೆಸರು – ಸಗಟು ಖರೀದಿ. ಇದಕ್ಕೆ ಇನ್ನಷ್ಟು ಸಂಸ್ಥೆ, ಸಮಿತಿ, ನೀತಿ ಎಂದು ತೇಪೆ ಹಾಕುವುದಲ್ಲ. ಸರಕಾರೀ ಪುಸ್ತಕೋದ್ಯಮವನ್ನೇ ಬರ್ಖಾಸ್ತುಗೊಳಿಸಿ. ತಮ್ಮದೇ ಗುಣಮಟ್ಟದ ಪ್ರಕಾಶನ ನೀತಿಯನ್ನು ನಂಬಿ ನಡೆದಿರುವ ಪ್ರಕಾಶಕರಾದರೂ ಕನಿಷ್ಠ ಸಗಟು ಖರೀದಿಯನ್ನು ಸಂಪೂರ್ಣ ನಿರಾಕರಿಸಿ, ಮೊದಲಲ್ಲೇ ನಾನು ಹೇಳಿದ ಮೊದಲ ತಲೆಮಾರಿನ ಬಹುತೇಕ ಪ್ರಕಾಶಕರು ಒಂದೋ ಚಾಲ್ತಿ ಕಳೆದುಕೊಂಡಿದ್ದಾರೆ. ಅವರ ಉತ್ತರಾಧಿಕಾರಿಗಳು ಹಿರಿಯರ ಆದರ್ಶವನ್ನು ಗಾಳಿಗೆ ತೂರಿ ಸಗಟು ಖರೀದಿಗೇ ಹೊಂದಿಕೊಂಡಿದ್ದಾರೆ. “ಎಲ್ಲಕ್ಕೂ ಒಂದು ಬೆಲೆಯಿದೆ” ಎಂಬ ದಿವ್ಯ ಸತ್ಯದ ಬೆಳಕಿನಲ್ಲಿ ಪುಸ್ತಕ ಪ್ರಕಾಶನ ಎಂಬ ಪಕ್ಕಾ ವಾಣಿಜ್ಯ ವಹಿವಾಟನ್ನು ಹೊಲಸಾಗಿ ಬೆಳೆಸಿದ್ದಾರೆ. ಕೇಂದ್ರೀಕೃತ ಖರೀದಿ ಮತ್ತು ವಿತರಣೆಯ ವಿಪರೀತ ಪರಿಣಾಮಕ್ಕೆ ಒಂದು ಸಣ್ಣ ಉದಾಹರಣೆ ಕೊಟ್ಟು ಮುಂದುವರಿಯುತ್ತೇನೆ.

ಸಗಟು ಖರೀದಿಯ ಪುಸ್ತಕಗಳ ಹೊರೆಯಲ್ಲಿ ಕಿಕ್ಕಿರಿದು ಹೋಗಿದ್ದ ದಕ ಜಿಲ್ಲೆಯ ಕೇಂದ್ರ ಗ್ರಂಥಾಲಯದಿಂದ ಓರ್ವ ಗಿರಾಕಿ ನನ್ನಲ್ಲಿಗೆ ಬಂದು ಉದ್ಗರಿಸಿದ “ಅಲ್ಲಿ ಒಂದೇ ಒಂದು ಯಕ್ಷಗಾನ ಪ್ರಸಂಗಗಳಿಲ್ಲ ಮಾರಾಯ್ರೇ”. ನಾನು ಹೋಗಿ ನೋಡಿದೆ. ಎಲ್ಲಿನದೋ ಜನಪದ ಆಚರಣೆಗಳು, ಸಂತೆಗೆ ಮೂರು ಮೊಳ ನೇಯ್ದ ಕವನ ಸಂಕಲನಗಳು, ಕಳ್ಳಭಟ್ಟಿಯ ಕತೆ ಕಾದಂಬರಿಗಳು ಯಥೇಚ್ಛವಿದ್ದವು, ಪ್ರಾದೇಶಿಕ ಆವಶ್ಯಕತೆಯ ಯಕ್ಷಗಾನ, ಭೂತಾರಾಧನೆ, ಕಂಬಳ, ಇತಿಹಾಸ, ಪ್ರಾದೇಶಿಕ ಗಣ್ಯ ಲೇಖಕರ ಕೃತಿಗಳು ಬಹಳಾ ವಿರಳವೇ ಇದ್ದವು. ಗ್ರಂಥಪಾಲರನ್ನು ವಿಚಾರಿಸಿದೆ. “ಏನ್ಮಾಡುವುದು, ನಮ್ಮಲ್ಲಿ ಫಂಡಿಲ್ಲ. ನಮ್ಮ ಅನುದಾನವನ್ನೆಲ್ಲ ಬೆಂಗಳೂರು ಕೇಂದ್ರೀಕರಿಸಿ ಸ್ವಾಹಾ ಮಾಡುತ್ತದೆ. ಕೊನೆಯಲ್ಲಿ ವಿವಿಧ ಜಿಲ್ಲಾ ಕೇಂದ್ರಗಳ ಅಂಕಿ ಸಂಕಿಗನುಗುಣವಾಗಿ, ಪುಸ್ತಕಗಳನ್ನು ಹೊತ್ತಾಕುತ್ತಾರೆ. ಪುಸ್ತಕಗಳ ಹೂರಣ ಯಾರು ಕೇಳ್ತಾರೆ..” ಇದೇ ರೀತಿಯಲ್ಲಿ ಇನ್ನೋರ್ವ ಸಗಟು ಖರೀದಿಯ ಫಲಾನುಭವಿ, ಸರಕಾರೀ ಶಾಲೆಯೊಂದರ ಮುಖ್ಯೋಪಾಧ್ಯಾಯ ಹೇಳಿದ್ದು ಕೇಳಿ “ಏಳು ಸಂಪುಟಗಳ ಕನ್ನಡ ಕಿರಿಯರ ವಿಶ್ವಕೋಶದಲ್ಲಿ ನಮಗೆ ಎಂದೆಂದೋ ಮೊದಲ ಎರಡೋ ಮೂರೋ ಭಾಗಗಳ ತಲಾ ಮೂರೋ ನಾಲ್ಕೋ ಪ್ರತಿಗಳು ಬಂದವು. ಆದರೆ ಮುಂದಿನ ಭಾಗಗಳು ಬರಲೇ ಇಲ್ಲ, ಅಷ್ಟೆ”.

ಜಿಲ್ಲಾ ಗ್ರಂಥಾಲಯಗಳ ಪ್ರಾದೇಶಿಕ ಖರೀದಿಯ ಒತ್ತಡ ತಡೆಯಲಾಗದೆ ನಡುವೆ ಒಮ್ಮೆ ಅನುದಾನವನ್ನು ವಿಕೇಂದ್ರೀಕರಿಸಿದ್ದರು. ಆದರೆ ಆ ವಿಚಾರ ಮತ್ತು ಮೊತ್ತವನ್ನು ಬೆಂಗಳೂರಿನಲ್ಲೇ ತಿಳಿದುಕೊಂಡ ಹಲವು ತಲೆಹಿಡುಕರು, ತಮ್ಮ ರದ್ದಿ ಸಂಗ್ರಹವನ್ನು ಮಂಗಳೂರಿಗೆ ತಂದರು. ‘ಇಲಾಖೆಯ ನಿಯಮಗಳಂತೆ’ ಜಿಲ್ಲಾ ಗ್ರಂಥಾಲಯದಲ್ಲಿ ಅವನ್ನು ಹರಡಿಟ್ಟು ಆಯ್ಕಾ ಸಮಿತಿಯನ್ನು ತೃಪ್ತಿಪಡಿಸಿದರು. ಜಿಲ್ಲಾ ಗ್ರಂಥಪಾಲರು ನಿಯಮದಂತೆ, ಮೊದಲೇ ನನ್ನನ್ನೂ ಸೇರಿದ್ಂತೆ ಸ್ಥಳೀಯ ಪುಸ್ತಕ ಮಳಿಗೆಗಳಿಗೂ ಪತ್ರ ಕಳಿಸಿ, ಪುಸ್ತಕಗಳೊಡನೆ ಹಾಜರಾಗಲು ಮನವಿ ಕೊಟ್ಟಿದ್ದರು. ಆದರೆ ನಾನು ಅಂದೇ ಪ್ರತ್ಯುತ್ತರಿಸಿದ್ದೆ. “ನಾನಿಲ್ಲಿ ವರ್ಷವಿಡೀ ಲಕ್ಷಾಂತರ ಪುಸ್ತಕಗಳನ್ನು ಪ್ರದರ್ಶನಕ್ಕಿಟ್ಟೇ ಮಾರಾಟ ಮಾಡುತ್ತಿದ್ದೇನೆ. ಅವನ್ನೆಲ್ಲ ನಿಮ್ಮಲ್ಲಿಗೆ ತಂದು ಪ್ರದರ್ಶಿಸುವುದು ಪ್ರಾಯೋಗಿಕವಲ್ಲ, ಅಸಾಧ್ಯ ಕೂಡಾ. ಬದಲಿಗೆ ನಿಮ್ಮ ಆಯ್ಕಾ ಸಮಿತಿ ದಿನದ ಯಾವ ವೇಳೆಯಲ್ಲೂ ನಮ್ಮಲ್ಲಿಗೆ ಬಂದು, ಇಷ್ಟ ಬಂದವನ್ನು ಆರಿಸಿಕೊಳ್ಳಲಿ…”. ಯಾರೂ ಬರಲಿಲ್ಲ.  ಮತ್ತೆ ಸಹಜವಾಗಿ ಸಿಂದಾಬಾದನ ಕಡಲ ಸಾಹಸಗಳು, ಹಾತಿಮ ತಾಯಿ ಭಜನೆಗಳು ಬಹು ಸಂಖ್ಯೆಯಲ್ಲಿ ದಕ ಜಿಲ್ಲಾ ಗ್ರಂಥಾಲಯವನ್ನು ತುಂಬಿ. ಸರದಿಯಲ್ಲಿ ತಾಲೂಕು ಕೇಂದ್ರಗಳಿಗೂ ಕೋಡಿ ಹರಿದಿರಬೇಕು.

ಅತ್ರಿ ಪ್ರಕಾಶನ

ನನ್ನ ಪ್ರಕಾಶನ ರಂಗದ ಕುರಿತು ಕೆಲವು ಮಾತು ಇಲ್ಲಿ ಅಪ್ರಸ್ತುತವಾಗದು. ಅಂಗಡಿ ತೆರೆದು ಸುಮಾರು ಇಪ್ಪತ್ತು ವರ್ಷಗಳ ಮೇಲಷ್ಟೇ ನಾನು ಪ್ರಕಾಶನಕ್ಕಿಳಿಯುವಷ್ಟು ಬಲವಂತನಾದೆ. ಆದರೆ ಅಲ್ಲೂ ವ್ಯವಾಹಾರದಲ್ಲಿ ಪಾರದರ್ಶಕತೆ ಮತ್ತು ಜನಸ್ನೇಹೀ ಶಿಸ್ತನ್ನು ಉಳಿಸಿಕೊಂಡಿದ್ದೆ. ನನ್ನ ಪ್ರಕಾಶನದ ಗುಣಮಟ್ಟದ ಪೂರ್ಣ ಜವಾಬ್ದಾರಿಯನ್ನು ಮೈಸೂರಿನಲ್ಲಿದ್ದ ನನ್ನ ತಂದೆ – ಜಿಟಿ ನಾರಾಯಣ ರಾವ್ ವಹಿಸಿಕೊಂಡಿದ್ದರು. ಅವರು ಮೈವಿವಿ ನಿಲಯದ ಕನ್ನಡ ವಿಶ್ವಕೋಶದ ಆರಂಭದಿಂದ (ನಿವೃತ್ತರಾದ ಮೇಲಿನ ವಿಶೇಷ ಜವಾಬ್ದಾರಿ) ಕೊನೆಯವರೆಗಿದ್ದ ಏಕೈಕ ಸಂಪಾಕರಾಗಿ ಗಳಿಸಿದ ಅನುಭವ ಅಪಾರ. ಸಹಜವಾಗಿ ಪುಸ್ತಕ ಮುದ್ರಣಗೊಂಡು ನನ್ನನ್ನು ಮುಟ್ಟುವವರೆಗಿನ ಉಸ್ತುವಾರಿಗಳನ್ನೆಲ್ಲ ಅವರು ಏಕಾಂಗವೀರನಾಗಿ, ಪೂರ್ಣ ಉಚಿತವಾಗಿ ನಡೆಸಿಕೊಟ್ಟರು. ಅಂದರೆ, ಹೊರಗಿನವರಿಂದ ಪುಸ್ತಕ ಬರೆಸುವುದು, ಹಕ್ಕುಗಳ ವಿಲೇವಾರಿ, ಬಂದ ಹಸ್ತಪ್ರತಿಯನ್ನು ಆಯ್ದ ಅಚ್ಚುಕೂಟಕ್ಕೆ ಸಿದ್ಧಗೊಳಿಸುವುದು, ಚಿತ್ರಗಳು ಮತ್ತು ಮುಖಪುಟದ ವಿನ್ಯಾಸಕ್ಕೆ ಕಲಾವಿದರನ್ನು ದುಡಿಸುವುದು, ಪ್ರತಿ ಫಾರಂನ್ನೂ ಎರಡು ಹಂತದಲ್ಲಿ ಕರಡಚ್ಚು ತಿದ್ದುವುದು, ಮುದ್ರಿತ ಬೆಲೆ ನಿಷ್ಕರ್ಷೆ… ಹೀಗೆ ಪ್ರತಿಯೊಂದೂ ಬೌದ್ಧಿಕ ಮತ್ತು ದೈಹಿಕ ಕೆಲಸಗಳನ್ನು ಒಂದೋ ಸೈಕಲ್ ಇಲ್ಲವೇ ನಡೆದೇ ಅವರು ಪೂರೈಸುತ್ತಿದ್ದರು. ನಾನು ಕನಿಷ್ಠ ಖರ್ಚನ್ನಾದರೂ ತಿಳಿಸಿ ಎಂದು ಕೇಳಿದಾಗೆಲ್ಲ ಅವರದು ಒಂದೇ ಉದ್ಗಾರ – My Pleasure! ನನ್ನ ಕೆಲಸವೇನಿದ್ದರೂ ಮೈಸೂರಿನಿಂದ ಬರುತ್ತಿದ್ದ ಬಂಡಲುಗಳನ್ನು ದಾಸ್ತಾನಿಟ್ಟು, ಅವಕಾಶ ಒದಗಿದಂತೆಲ್ಲ ಮಾರಾಟ ಮಾಡುವುದಷ್ಟೇ.

ತಂದೆ ಪಾವೆಂ ಆಚಾರ್ಯರನ್ನು ಒಲಿಸಿ – ಪದಾರ್ಥ ಚಿಂತಾಮಣಿಯ ಸಂಕಲನ, ಜೆ ಆರ್ ಲಕ್ಷಣ ರಾಯರ ಬೆನ್ನು ಹಿಡಿದು ಬರೆಯಿಸಿದ್ದು – ಬೈಜಿಕ ವಿದ್ಯುತ್, ಕೇವಲ ನಾಟ್ಯಾಚಾರ್ಯರಾಗಿದ್ದ ಬಹುದೊಡ್ಡ ವಿದ್ವಾಂಸ ಕೆ. ಮುರಳೀಧರ ರಾಯರಿಂದಂತೂ ಕೈ ಹಿಡಿದೇ ಬರೆಯಿಸಿದ್ದು – ನೃತ್ಯಲೋಕ, ಅದ್ಭುತ ವೈದ್ಯಕೀಯದಲ್ಲೇ ಮುಳುಗಿಹೋಗಿದ್ದ ನಾಗಾಲೋಟಿ ಮಠರನ್ನು ಬರಹದ ದಂಡೆಗೆಳೆದು ಹಾಕಿ – ಬಿಚ್ಚಿದ ಜೋಳಿಗೆ… ಹೀಗೆ ಹಲವು ಪುಸ್ತಕಗಳನ್ನು ನನ್ನ ಪ್ರಕಾಶನಕ್ಕೆ ಕೊಡಿಸಿದರು. ಆ ಎಲ್ಲಾ ಪುಸ್ತಕಗಳು ಮಾರುಕಟ್ಟೆಗೆ ಹೋಗುವ ಮುನ್ನವೇ ಮುದ್ರಕರ ಬಿಲ್. ಲೇಖಕರ ಗೌರವ ಧನ ಮತ್ತು ಉಚಿತ ಪ್ರತಿಗಳ ವಿಲೇವಾರಿಯನ್ನು ತಂದೆ ನನ್ನಿಂದ ಮಾಡಿಸುತ್ತಿದ್ದರು.

ನನ್ನ ಪ್ರಕಾಶನದಲ್ಲಿ ಹೆಚ್ಚಿನ ಪುಸ್ತಕಗಳು ತಂದೆಯದ್ದೇ ಇತ್ತು. ಅವಂತೂ ನನ್ನ ಇನ್ನೂ ದೊಡ್ಡ ಭಾಗ್ಯ –  ತಂದೆ ಎಂದೂ ನನ್ನಿಂದ ಗೌರವಧನ ಸ್ವೀಕರಿಸಲೇ ಇಲ್ಲ. ನಾನು ರಗಳೆ ಮಾಡಿದರೆ “ಸಮಾಜ ನನಗೆ ಕೊಟ್ಟಿರುವ ಭಾಗ್ಯಕ್ಕೆ ನನ್ನದಿದು ಕೆರೆಯ ನೀರನು ಕೆರೆಗೆ ಚೆಲ್ಲಿ” ಎಂದು ಮಾತು ಮುಗಿಸಿಬಿಡುತ್ತಿದ್ದರು. ಹದಿನಾರು ವರ್ಷಗಳಲ್ಲಿ ಐವತ್ತಕ್ಕೂ ಮಿಕ್ಕು ಪುಸ್ತಕಗಳು ನನ್ನಲ್ಲಿ ಪ್ರಕಟಗೊಂಡು, ನನಗೆ ತಂದ ಅಪಾರ ಗೌರವವನ್ನು ತಂದಿವೆ.

ಮಾಡಿದ್ದನ್ನೇ ನುಡಿದೆ

ಗಮನವಿಟ್ಟು ಕೇಳಿ – ನನ್ನ ಪ್ರಕಾಶನದಲ್ಲಿ ಒಂದೇ ಒಂದು ಪ್ರತಿಯನ್ನೂ ನಾನು ಸಗಟು ಖರೀದಿಗೆ ಕೊಡಲಿಲ್ಲ. ಮತ್ತೂ ಮುಖ್ಯ ವಿಚಾರ, ಮೂವತ್ತಾರು ವರ್ಷಗಳ ಉದ್ದಕ್ಕೆ ವ್ಯಾಪಾರಕ್ಕಾಗಿ ನಾನು ಯಾವುದೇ ವಶೀಲೀ ಮಾಡಿಲ್ಲ, ಒಂದು ಪೈಸೆ ಲಂಚವನ್ನೂ ಕೊಟ್ಟಿಲ್ಲ. ಇದೆಲ್ಲ ನನ್ನ ದೊಡ್ಡಸ್ತಿಕೆಗಾಗಿ ಹೇಳುತ್ತಿಲ್ಲ, ಗುಣದಲ್ಲಿ ರಾಜೀ ಮಾಡಿಕೊಳ್ಳದೇ ಪುಸ್ತಕೋದ್ಯಮದಲ್ಲೂ ಯಶಸ್ವಿಯಾಗಬಹುದು ಎಂದು ಪ್ರಮಾಣಿಸಲಷ್ಟೇ ಹೇಳಿದ್ದೇನೆ.

ಮುದ್ರಿತ ಪುಸ್ತಕಗಳ ಭವಿಷ್ಯ

೨೦೦೯ರ ಸುಮಾರಿಗೆ ಚರವಾಣಿ, ಗಣಕಗಳ ಪ್ರಭಾವ ಹೆಚ್ಚಿದಂತೆ, ವಿಶೇಷ ರಿಯಾಯ್ತಿ ದರದಲ್ಲಿ ಪುಸ್ತಕಗಳು ನೇರ ಗಿರಾಕಿಯ ಮನೆಗೇ ತಲಪುವ ವ್ಯವಸ್ಥೆಗಳು ಬಂತು. ಮುಂದುವರಿದು ವಿದ್ಯುನ್ಮಾನ ಮಾಧ್ಯಮ ತನ್ನ ಕಬಂಧ ಬಾಹುಗಳನ್ನು ಲೋಕವ್ಯಾಪಿಗೊಳಿಸುವುದರೊಡನೆ ಜನರಲ್ಲಿ ಮೊದಲು ಕನ್ನಡ, ಮತ್ತೆ ಓದನ್ನೇ ಮರೆಸುತ್ತ ಬಂದಿರುವಾಗ, ಕನ್ನಡ ಪುಸ್ತಕೋದ್ಯಮಕ್ಕೆ ಖಂಡಿತವಾಗಿಯೂ ಭವಿಷ್ಯ ಇಲ್ಲ. ಮಾಜೀ ಪುಸ್ತಕೋದ್ಯಮಿಯ ಇಷ್ಟುದ್ದದ ಪುರಾಣ ಕೇಳಿದ ನಿಮಗೆ ಧನ್ಯವಾದಗಳು. ನಮಸ್ಕಾರ.